ದಾವಣಗೆರೆ: ಅಮೋಘ ಪ್ರದರ್ಶನ ತೋರಿದ ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ತಂಡಗಳು ಇಲ್ಲಿ ನಡೆದ ಪಿಯು ಕಾಲೇಜುಗಳ ರಾಜ್ಯಮಟ್ಟದ ಫುಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಹಾಗೂ ಬಾಲಕರ ವಿಭಾಗಗಳಲ್ಲಿ ಚಾಂಪಿಯನ್ ಆಗಿವೆ.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಆನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ 1–0 ಗೋಲಿನಿಂದ ಧಾರವಾಡ ತಂಡವನ್ನು ಪರಾಭವಗೊಳಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಚುರುಕಿನ ಆಟ ಆಡಿದ ಸಾನ್ವಿ, ಏಕೈಕ ಗೋಲು ಬಾರಿಸಿ ಗೆಲುವಿನ ರೂವಾರಿಯಾದರು.
ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್ ಹೋರಾಟದಲ್ಲಿ ದಕ್ಷಿಣ ಕನ್ನಡ 1–0 ಗೋಲಿನಿಂದ ಬೆಳಗಾವಿ ವಿರುದ್ಧ ಗೆದ್ದಿತ್ತು. ಈ ಪಂದ್ಯದಲ್ಲೂ ಸಾನ್ವಿ ಒಂದು ಗೋಲು ಹೊಡೆದು ಮಿಂಚಿದ್ದರು. ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಧಾರವಾಡ 1–0 ಗೋಲಿನಿಂದ ವಿಜಯಪುರ ತಂಡವನ್ನು ಸೋಲಿಸಿತ್ತು. ಧಾರವಾಡ ತಂಡದ ಜ್ಯೋತಿ ಏಕೈಕ ಗೋಲು ಬಾರಿಸಿ ಗೆಲುವಿನ ರೂವಾರಿಯಾದರು.
ರೋಚಕ ಹೋರಾಟ: ಬಳ್ಳಾರಿ ಮತ್ತು ಉಡುಪಿ ತಂಡಗಳ ನಡುವಣ ಫೈನಲ್ ಪಂದ್ಯದಲ್ಲಿ ರೋಚಕ ಪೈಪೋಟಿ ಕಂಡುಬಂತು. ಉಭಯ ತಂಡಗಳ ರಕ್ಷಣಾ ವಿಭಾಗದ ಆಟಗಾರರು ಹಾಗೂ ಗೋಲ್‌ಕೀಪರ್‌ಗಳು ದಿಟ್ಟ ಆಟ ಆಡಿದ್ದರಿಂದ ನಿಗದಿತ ಅವಧಿಯಲ್ಲಿ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ. ಪೆನಾಲ್ಟಿ ಶೂಟೌಟ್‌ನಲ್ಲಿ ಬಳ್ಳಾರಿ ಆಟಗಾರರು ಮಿಂಚಿದರು. ಈ ತಂಡ 3–2 ಗೋಲುಗಳಿಂದ ಎದುರಾಳಿಗಳನ್ನು ಮಣಿಸಿ ಸಂಭ್ರಮಿಸಿತು.
ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್ ಪಂದ್ಯಗಳೂ ತುರುಸಿನ ಹಣಾಹಣಿಗೆ ಸಾಕ್ಷಿಯಾದವು. ಎರಡು ಪಂದ್ಯಗಳೂ ಗೋಲು ರಹಿತವಾಗಿ ಕೊನೆಗೊಂಡಿದ್ದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು.
ಮೊದಲ ಶೂಟೌಟ್‌ನಲ್ಲಿ ಉಡುಪಿ 3–2 ಗೋಲುಗಳಿಂದ ಬೆಂಗಳೂರು ಉತ್ತರ ತಂಡದ ವಿರುದ್ಧ, ಬಳ್ಳಾರಿ 5–4 ಗೋಲುಗಳಿಂದ ಬೆಂಗಳೂರು ದಕ್ಷಿಣ ತಂಡದ ವಿರುದ್ಧ ಜಯಭೇರಿ ಮೊಳಗಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.