ಜಗಳೂರು: ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದ ಮಹನೀಯರ ಜಯಂತಿಗಳನ್ನು ಎಲ್ಲಾ ಸಮುದಾಯದವರು ಒಗ್ಗೂಡಿ ಜಾತ್ಯತೀತವಾಗಿ ಆಚರಿಸಿದಾಗ ಅರ್ಥಪೂರ್ಣ ಎನಿಸುತ್ತದೆ ಎಂದು ಚಿತ್ರದುರ್ಗದ ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಶನಿವಾರ ಯಾದವ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯಾದವ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ಕುರಿತ ಪೂರ್ವಭಾವಿ ಸಭೆಯನ್ನು ಆಗಸ್ಟ್ 24ರಂದು ಚಿತ್ರದುರ್ಗದ ಮಠದಲ್ಲಿ ಕರೆಯಲಾಗಿದೆ ಎಂದರು.
ಸಮುದಾಯದ ಮತದಿಂದ ಆಯ್ಕೆಯಾಗಿರುವ ಸಂಸದರು ಮೈಮರೆತಿದ್ದು, ಒಂದೂವರೆ ವರ್ಷ ಕಳೆದರೂ ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಬೇಡಿಕೆ ಈಡೇರಿಲ್ಲ. ಕೇಂದ್ರಕ್ಕೆ ಕಳಿಸಿದ್ದ ರಾಜ್ಯ ಸರ್ಕಾರದ ಮೀಸಲಾತಿ ಶಿಫಾರಸು ಮರಳಿ ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಯಾದವ ಸಮಾಜದ ಸಂಘಟಿತ ಹೋರಾಟ ನಿರಂತರವಾಗಿರುತ್ತದೆ’ ಎಂದು ಯಾದವ ಸಮಾಜದ ರಾಜ್ಯ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಹೇಳಿದರು.
‘ಪಟ್ಟಣದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ ₹5 ಲಕ್ಷ ಅನುದಾನ ಒದಗಿಸಲಾಗುವುದು. ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ₹64 ಕೋಟಿ ಅನುದಾನ ಮೀಸಲಿದ್ದು, ನನೆಗುದಿಗೆ ಬಿದ್ದಿರುವ ಮನೆಗಳನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
ತಾಲ್ಲೂಕಿನ ತೋರಣಗಟ್ಟೆ ಗ್ರಾಮದ ಪವಾಡ ಪುರುಷ ಮೆಲ್ಲಜ್ಜ ದೇವಸ್ಥಾನ ಅಭಿವೃದ್ಧಿಗೆ ₹25 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
‘ಹಿಂದೆ ಶಾಸಕರಾಗಿದ್ದ ಎಚ್.ಪಿ.ರಾಜೇಶ್ ಅವರು ನನ್ನ ಸ್ವಗ್ರಾಮ ಚಿಕ್ಕಮ್ಮನಹಟ್ಟಿಯಲ್ಲಿ ₹1 ಕೋಟಿ ಅನುದಾನದಡಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು. ಮಾಜಿ ಶಾಸಕರ ಸ್ವಗ್ರಾಮ ಬಿದರಕೆರೆಯಲ್ಲಿ ನಾನು ₹2 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ವಾಲ್ಮೀಕಿ ಮತ್ತು ಕಾಡುಗೊಲ್ಲ ಸಮುದಾಯಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಸಾಮ್ಯತೆ ಇದೆ. ಯಾದವ ಸಮಾಜ ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕು. ನಾನು ಶಾಸಕನಾಗಿದ್ದಾಗ ತಾಲ್ಲೂಕಿನಲ್ಲಿ 2,500 ಮನೆ ನಿರ್ಮಿಸಲಾಗಿತ್ತು ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.
ಹಿಂದುಳಿದ ವರ್ಗಗಳು ರಾಜಕೀಯ ಅಸ್ತಿತ್ವಕ್ಕೆ ಪರದಾಡುವಂತಾಗಿದೆ. ಒಗ್ಗಟ್ಟಾದರೆ ಮಾತ್ರ ಅಧಿಕಾರ ಪಡೆಯಲು ಸಾಧ್ಯ ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀಕೃಷ್ಣ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಯಾದವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಸಿ.ಕೃಷ್ಣಮೂರ್ತಿ, ಮುಖಂಡರಾದ ಶಶಿಧರ್, ಚಿತ್ತಪ್ಪ ಹನುಮಂತಾಪುರ, ತಿಪ್ಪೇಸ್ವಾಮಿ ಗೌಡ, ಕೃಷ್ಣಪ್ಪ, ಶಿವು, ಇಂದ್ರೇಶ್, ಎಸ್.ಟಿ. ನಾಗರಾಜ್, ಚಿಕ್ಕಪ್ಪ, ಹನುಮಂತಪ್ಪ, ಟಿ.ಜಿ. ಪ್ರವೀಣ್ ಕುಮಾರ್, ಕಾಂತರಾಜ್, ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ, ಸಣ್ಣ ಸೂರಜ್ಜ, ಬಾಲರಾಜ್, ಬಡಪ್ಪ, ಎಚ್.ಎಂ ಹೊಳೆ ಮಹಾಲಿಂಗಪ್ಪ, ಪಿಡಿಒ ವಾಸುದೇವ್, ರಮೇಶ್ ಸರ್ಕಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.