ADVERTISEMENT

ದಾವಣಗೆರೆ | ಹೊಸ ಟ್ರ್ಯಾಕ್ಟರ್ ಜೊತೆಗೆ ₹80 ಸಾವಿರ ಪರಿಹಾರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 7:29 IST
Last Updated 20 ಜುಲೈ 2023, 7:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: ರೈತರೊಬ್ಬರಿಗೆ ದೋಷಪೂರಿತ ಟ್ರ್ಯಾಕ್ಟರ್ ಮಾರಾಟ ಮಾಡಿದ ಡೀಲರ್ ಹಾಗೂ ಕಂಪನಿಯ ವ್ಯವಸ್ಥಾಪಕರಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ₹ 80,000 ದಂಡ ವಿಧಿಸಿರುವುದರ ಜೊತೆ ಹೊಸ ಟ್ರ್ಯಾಕ್ಟರ್ ನೀಡಬೇಕು ಎಂದು ಆದೇಶ ನೀಡಿದೆ.

ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ರಂಗಪ್ಪ ಅವರು 2019ರ ಅಕ್ಟೋಬರ್ 15ರಂದು ₹ 7 ಲಕ್ಷ ಕೊಟ್ಟು ಚನ್ನಗಿರಿಯ ಶ್ರೀ ಗಜಾನನ ಐಷರ್ ಟ್ರೇಡರ್ಸ್‌ನಿಂದ ಟ್ರ್ಯಾಕ್ಟರ್ ಖರೀದಿಸಿದ್ದರು. ಕೆಲ ದಿವಸಗಳ ಬಳಿಕ ಟ್ರ್ಯಾಕ್ಟರ್ ಕೆಟ್ಟು ನಿಂತಿತು. ಶೋರೂಂಗೆ ಪರಿಶೀಲಿಸಿದಾಗ ಗೇರ್ ಬಾಕ್ಸ್ ಕೆಟ್ಟು ಹೋಗಿತ್ತು. 2020ರ ಜುಲೈ ತಿಂಗಳಲ್ಲಿ ಶೋರೂಂಗೆ ಹೋಗಿ ದುರಸ್ತಿ ಮಾಡಿಸಿಕೊಂಡು ಬಂದಿದ್ದರು.

ಅದೇ ರೀತಿ ಮೂರು ಬಾರಿ ಗೇರ್ ಬಾಕ್ಸ್ ದುರಸ್ತಿಗೆ ಬಂದಿದ್ದು, ಅದನ್ನು ದುರಸ್ತಿ ಮಾಡಿಕೊಟ್ಟಿದ್ದರೂ ಸರಿಯಾಗಲಿಲ್ಲ. ಆದ್ದರಿಂದ ರಂಗಪ್ಪ ಅವರು ಟ್ರ್ಯಾಕ್ಟರ್ ಅನ್ನು ಟ್ರ್ಯಾಕ್ಟರ್ ಅನ್ನು ವಾಪಸ್ ತೆಗೆದುಕೊಂಡು ಹೊಸ ಟ್ರ್ಯಾಕ್ಟರ್ ಕೊಡಬೇಕು ಎಂದು ಶೋರೂಂ ಮಾಲೀಕರಿಗೆ ಹೇಳಿದಾಗ ಅವರು ಕೊಡಲು ಒಪ್ಪಲಿಲ್ಲ. ಇದರಿಂದಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ADVERTISEMENT

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರು ಹೊಸ ಟ್ರ್ಯಾಕ್ಟರ್ ಕೊಡುವುದರ ಜೊತೆಗೆ ದೂರುದಾರರಿಗೆ ಆಗಿರುವ ಆರ್ಥಿಕ ನಷ್ಟಕ್ಕೆ ₹ 50,000, ಮಾನಸಿಕ ಕಿರುಕುಳವಾಗಿರುವುದಕ್ಕೆ ₹25,000 ಹಾಗೂ ಆಯೋಗದ ಖರ್ಚು ಸೇರಿ ₹ 80ಸಾವಿರವನ್ನು  ರಂಗಪ್ಪ ಅವರಿಗೆ ನೀಡುವಂತೆ ಆದೇಶಿಸಿದೆ.

ಆಯೋಗದ ಸದಸ್ಯೆ ಗೀತಾ ಬಿ.ಯು. ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.