ADVERTISEMENT

ದಾವಣಗೆರೆ | ಭತ್ತದ ದರ ಕುಸಿತ, ತಂತ್ರಾಂಶದ ಹೊಡೆತ

ಕ್ವಿಂಟಲ್‌ಗೆ ₹ 2,000 ಆಸುಪಾಸಿನಲ್ಲಿ ಮಾರಾಟ; ಖರೀದಿ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆ

ರಾಮಮೂರ್ತಿ ಪಿ.
Published 28 ಮೇ 2025, 5:16 IST
Last Updated 28 ಮೇ 2025, 5:16 IST
ದಾವಣಗೆರೆ ಎಪಿಎಂಸಿ ಆವರಣದಲ್ಲಿ ಭತ್ತವನ್ನು ಒಣಗಿಸಲು ಹರಡಿದ್ದ ಭತ್ತವನ್ನು ಕಾರ್ಮಿಕರು ರಾಶಿ ಮಾಡುವುದರಲ್ಲಿ ತಲ್ಲೀನರಾಗಿರುವುದು ಸೋಮವಾರ ಕಂಡು ಬಂತು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆ ಎಪಿಎಂಸಿ ಆವರಣದಲ್ಲಿ ಭತ್ತವನ್ನು ಒಣಗಿಸಲು ಹರಡಿದ್ದ ಭತ್ತವನ್ನು ಕಾರ್ಮಿಕರು ರಾಶಿ ಮಾಡುವುದರಲ್ಲಿ ತಲ್ಲೀನರಾಗಿರುವುದು ಸೋಮವಾರ ಕಂಡು ಬಂತು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ಬೆಲೆಯ ತೀವ್ರ ಕುಸಿತ ಕಂಡಿರುವುದರಿಂದ ಬೆಳೆಗಾರರು ಭತ್ತವನ್ನು ಮಾರಾಟ ಮಾಡಲಾಗದೇ, ಉಳಿಸಿಕೊಳ್ಳಲೂ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಮೇ 27ರಂದು (ಮಂಗಳವಾರ) ಭತ್ತದ ದರ ಕ್ವಿಂಟಲ್‌ಗೆ ₹ 2,000ದಿಂದ ₹2050 ಇತ್ತು. ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ₹ 1,850 ರಿಂದ ₹ 1,900ರಂತೆ ಕ್ವಿಂಟಲ್‌ ಭತ್ತ ಖರೀದಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಬಹುಪಾಲು ರೈತರು ಆರ್‌ಎನ್‌ಆರ್‌ ತಳಿಯ ಭತ್ತವನ್ನೇ ಬೆಳೆಯುತ್ತಿದ್ದಾರೆ. 2023ರಲ್ಲಿ ಇಲ್ಲಿನ ಎಪಿಎಂಸಿಯಲ್ಲಿ ಕ್ವಿಂಟಲ್‌ ಭತ್ತಕ್ಕೆ ಗರಿಷ್ಠ ₹ 3,200 ದರ ಇತ್ತು. 2024ರಲ್ಲಿ ದರ ₹ 2,600 ಇತ್ತು. ಆದರೆ, ಈ ವರ್ಷ ₹2,000 ಆಸುಪಾಸಿನಲ್ಲಿಯೇ ದರ ಇದೆ. ಈಗಾಗಲೇ ಭತ್ತ ಕಟಾವು ಮಾಡಿರುವ ರೈತರು ನಷ್ಟದ ಭೀತಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟ ನಡೆಸಿದ್ದು, ಬಿಸಿಲು ಅಪರೂಪ ಎಂಬಂತಾಗಿದೆ. ಇದರಿಂದ ಭತ್ತವನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ತೇವಾಂಶದ ಕಾರಣಕ್ಕೂ ಭತ್ತದ ದರ ಕುಸಿಯುತ್ತಿದೆ. ಅಪರೂಪಕ್ಕೆ ಸೂರ್ಯ ಕಾಣಿಸಿಕೊಂಡರೆ ರೈತರು ಎಪಿಎಂಸಿ ಅಂಗಳ, ಸಿಮೆಂಟ್‌ ಹಾಗೂ ಡಾಂಬರು ರಸ್ತೆಗಳಲ್ಲಿ ಭತ್ತ ಹರಡಿ ಒಣಗಿಸುತ್ತಿದ್ದಾರೆ. ಒಣಗಿದರೆ ಸ್ವಲ್ಪ ಹೆಚ್ಚಿನ ದರ ಸಿಗಬಹುದು ಎಂಬ ನಿರೀಕ್ಷೆ ರೈತರದ್ದಾಗಿದೆ.

ADVERTISEMENT

ದಿನವೊಂದಕ್ಕೆ 14,000ದಿಂದ 15,000 ಕ್ವಿಂಟಲ್‌ ಭತ್ತ ಎಪಿಎಂಸಿಗೆ ಆವಕವಾಗುತ್ತಿದೆ. ವರುಣ ಬಿಡುವು ನೀಡಿ, ಬಿಸಿಲಿನ ಪ್ರಖರತೆ ಹೆಚ್ಚಿದರೆ ಈ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಇಲ್ಲಿನ ರೈಸ್‌ಮಿಲ್‌ ಹಾಗೂ ಮಂಡಕ್ಕಿ ಬಟ್ಟಿಗಳ ಮಾಲೀಕರೇ ಅಧಿಕ ಪ್ರಮಾಣದಲ್ಲಿ ಭತ್ತ ಖರೀದಿಸುತ್ತಿದ್ದಾರೆ. ಅದೇ ಭತ್ತದಿಂದ ತೆಗೆಯಲಾದ ಅಕ್ಕಿಯನ್ನು ತಮಿಳುನಾಡು, ಆಂಧ್ರ, ಗುಜರಾತ್‌ಗೆ ರವಾನಿಸುತ್ತಿದ್ದಾರೆ. ತುಮಕೂರು, ರಾಯಚೂರು, ಗಂಗಾವತಿ ಹಾಗೂ ಕಾರಟಗಿಗೂ ಇಲ್ಲಿಂದ ಭತ್ತ ಮಾರಾಟ ಮಾಡಲಾಗುತ್ತಿದೆ.

2023 ಹಾಗೂ 2024ರಲ್ಲಿ ಮುಕ್ತ ಮಾರುಕಟ್ಟೆ ಹಾಗೂ ಎಪಿಎಂಸಿಗಳಲ್ಲಿ ಉತ್ತಮ ದರ ದೊರೆತಿದ್ದರಿಂದ ರೈತರು ಬೆಂಬಲಬೆಲೆಯ ಖರೀದಿ ಕೇಂದ್ರಗಳತ್ತ ಮುಖ ಮಾಡಿರಲಿಲ್ಲ. ಈ ವರ್ಷ ದರ ಕುಸಿತದ ಕಾರಣಕ್ಕೆ ಅನ್ನದಾತರು ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

‘ಬಲ’ ನೀಡದ ಬೆಂಬಲ ಬೆಲೆ:

ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್‌ ‘ಎ’ ಗ್ರೇಡ್‌ ಭತ್ತಕ್ಕೆ ₹ 2,320 ಹಾಗೂ ಸಾಮಾನ್ಯ ಭತ್ತಕ್ಕೆ ₹ 2,300 ದರ ನಿಗದಿ ಮಾಡಿದೆ. ರೈತರು ಖರೀದಿ ಕೇಂದ್ರಗಳಲ್ಲಿ ಬೆಳೆ ನೋಂದಾಯಿಸಿ ಉತ್ಪನ್ನ ಮಾರಾಟ ಮಾಡಬಹುದಾಗಿದೆ. ಆದರೆ, ಫ್ರೂಟ್ಸ್‌ ತಂತ್ರಾಂಶವು ರೈತರ ಬೆಳೆ ನೋಂದಣಿಗೆ ಅಡ್ಡಗಾಲಾಗಿದೆ.

ಜಿಲ್ಲೆಯಲ್ಲಿ ಎರಡು ಹಂಗಾಮಿನಲ್ಲಿ ಮಾತ್ರ ಬೆಳೆ ಬೆಳೆಯಲಾಗುತ್ತದೆ. ಜನವರಿಯಿಂದ ಮೇವರೆಗೆ ಬೇಸಿಗೆ ಬೆಳೆ, ಜುಲೈನಿಂದ ಡಿಸೆಂಬರ್‌ಗೆ ಮಳೆಗಾಲದ ಬೆಳೆ (ಮುಂಗಾರು) ಬೆಳೆಯಲಾಗುತ್ತದೆ. ಆದರೆ, ಫ್ರೂಟ್ಸ್‌ ತಂತ್ರಾಂಶದಲ್ಲಿ ಹಿಂಗಾರು, ಮುಂಗಾರು, ಬೇಸಿಗೆ ಎಂದು ಮೂರು ಭಾಗವಾಗಿ ಬೆಳೆಯನ್ನು ವಿಂಗಡಿಸಲಾಗಿದೆ. ಇದರಿಂದಾಗಿ ಬೇಸಿಗೆ ಬೆಳೆಯನ್ನು ನೋಂದಾಯಿಸಿಕೊಳ್ಳಲು ತಾಂತ್ರಿಕ ಸಮಸ್ಯೆ ಎದುರಾಗಿದೆ.

ಫ್ರೂಟ್ಸ್‌ ತಂತ್ರಾಂಶದ ಪ್ರಕಾರ ಹಿಂಗಾರು ಅವಧಿಯ ಭತ್ತ ಖರೀದಿಗೆ ಬೆಳೆ ಸಮೀಕ್ಷೆ ನಡೆಸಿದಾಗ ರೈತರ ಜಮೀನುಗಳು ಪಾಳು (ಖಾಲಿ) ಇರುತ್ತವೆ. ಹೀಗಾಗಿ ಇದುವರೆಗೂ ರೈತರು ಬೆಳೆಯನ್ನು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು, ಮಾರಾಟ ಮಾಡಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಮೂವರು ರೈತರು ಮಾತ್ರವೇ ಭತ್ತದ ಬೆಳೆಯನ್ನು ನೋಂದಾಯಿಸಿಕೊಳ್ಳಲು ಸಾಧ್ಯವಾಗಿದೆ. ಹಿಂಗಾರು/ ಬೇಸಿಗೆ ಎಂದು ತಂತ್ರಾಂಶದಲ್ಲಿ ಸರಿಪಡಿಸಿದರೆ ರೈತರಿಗೆ ಅನುಕೂಲವಾಗಲಿದೆ.

ತಾಂತ್ರಿಕ ಸಮಸ್ಯೆ ಬಗೆಹರಿದರೆ ರೈತರು ಆಧಾರ್‌ ಕಾರ್ಡ್‌ ಹಾಗೂ ಪಹಣಿಯೊಂದಿಗೆ ಖರೀದಿ ಕೇಂದ್ರಕ್ಕೆ ತೆರಳಿ ಹೆಬ್ಬೆಟ್ಟು ನೀಡಿ ಬೆಳೆ ನೋಂದಾಯಿಸಿಕೊಳ್ಳಲು ಸಾಧ್ಯವಾಗಲಿದೆ.

ಜಿಲ್ಲೆಯಲ್ಲಿ ಮೇ ಮೊದಲ ವಾರದಿಂದಲೇ ಭತ್ತದ ಕಟಾವು ಶುರುವಾಗಿದೆ. ಈಗಾಗಲೇ ಶೇ 50 ರಷ್ಟು ಕಟಾವು ಮುಗಿದಿದ್ದು, ಈ ಪೈಕಿ ಶೇ 30 ರಷ್ಟು ಭತ್ತವನ್ನು ಮಾರಾಟ ಮಾಡಲಾಗಿದೆ. ಇನ್ನುಳಿದ ಶೇ 20 ರಷ್ಟು ಭತ್ತವು ರಸ್ತೆ ಹಾಗೂ ಖಾಲಿ ಜಾಗದಲ್ಲಿದ್ದು, ಒಣಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಳೆಯ ಭೀತಿಯಿಂದ ರೈತರು ಆರಂಭದಲ್ಲಿ ಅತ್ಯಂತ ಕಡಿಮೆ ದರಕ್ಕೆ (ಕ್ವಿಂಟಲ್‌ಗೆ ₹1,600 ರಂತೆ) ಮಾರಾಟ ಮಾಡಿ ಕೈಸುಟ್ಟುಕೊಂಡರು.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಸಮೀಪದ ಜಮೀನೊಂದರಲ್ಲಿ ಮಳೆಯ ಕಾರಣಕ್ಕೆ ಭತ್ತವನ್ನು ಕಟಾವು ಮಾಡಲಾಗದೇ ಯಂತ್ರವನ್ನು ನಿಲ್ಲಿಸಿರುವುದು
ಫ್ರೂಟ್ಸ್‌ ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ಆದೇಶಿಸಿದ್ದು ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಬೆಂಬಲ ಬೆಲೆ ಅಡಿ ನೋಂದಣಿ ಹಾಗೂ ಖರೀದಿ ದಿನಾಂಕವನ್ನೂ ವಿಸ್ತರಿಸಲು ಸರ್ಕಾರವನ್ನು ಕೋರಲಾಗಿದೆ
ಸಿದ್ರಾಮ ಮರಿಹಾಳ್ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಭತ್ತವನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಮುಚ್ಚಿಟ್ಟರೆ ಕಾವು ಬಂದು ಮೊಳಕೆಯೊಡೆಯುತ್ತಿದೆ. ಮಾರಾಟ ಮಾಡಲು ಉತ್ತಮ ದರವೂ ಸಿಗುತ್ತಿಲ್ಲ. ರೈತರ ಬದುಕು ಅತಂತ್ರವಾಗಿದ್ದು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಳ್ಳಲಿ
ಕೊಳೇನಹಳ್ಳಿ ಬಿ.ಎಂ.ಸತೀಶ್ ರೈತ ಮುಖಂಡ
ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ದಪ್ಪ ಭತ್ತ ₹ 2200 ರಿಂದ ₹ 2300 ಶ್ರೀರಾಮ ಸೋನಾ ₹ 2300 ರಿಂದ ₹ 2400 ಸೋನಾ ಮಸೂರಿ ₹ 1900ರಿಂದ ₹ 1975ರಂತೆ ಮಾರಾಟವಾಗುತ್ತಿದೆ
ದೊಗ್ಗಳ್ಳಿ ಬಸವರಾಜ್ ಎಪಿಎಂಸಿ ವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.