
ದಾವಣಗೆರೆ: ‘ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಅಪಘಾತ, ಸಾವು-ನೋವುಗಳನ್ನು ತಡೆಯಬಹುದೆಂಬ ಬಗ್ಗೆ ಅರಿವು ಮೂಡಿಸಲು ಜನವರಿ 1ರಿಂದ 31ರ ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಸ್ವಚ್ಛತಾ ಅರಿವು ಜಾಗೃತಿಯ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
‘ಶಾಲೆ -ಕಾಲೇಜುಗಳ ವಿದ್ಯಾರ್ಥಿಗಳು, ವಾಹನ ಚಾಲಕರಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಜೊತೆಗೆ ಅವುಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವುದರಿಂದ ಸಾಕಷ್ಟು ಅಪಘಾತ, ಸಾವು, ನೋವು ಸಂಭವಿಸುತ್ತಿವೆ’ ಎಂದು ಹೇಳಿದರು.
‘ಗುಣಮಟ್ಟದ, ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಬಾರದು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅರ್ಧ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದನ್ನು ಈಗಾಗಲೇ ಸಾಕಷ್ಟು ನಿಯಂತ್ರಿಸಿದ್ದೇವೆ. ಮುಂದೆಯೂ ಈ ಬಗ್ಗೆ ಕಾರ್ಯಾಚರಣೆ ಮುಂದುವರಿಸುತ್ತೇವೆ’ ಎಂದರು.
‘ಪೊಲೀಸರು ಹೆಲ್ಮೆಟ್ ಧರಿಸದಿದ್ದರೆ ಕೇಸ್ ಮಾಡುತ್ತಾರೆ, ದಂಡ ವಿಧಿಸುತ್ತಾರೆಂಬ ಕಾರಣಕ್ಕೆ ಹೆಲ್ಮೆಟ್ ಧರಿಸುವುದಲ್ಲ. ನಿಮ್ಮ ಅಮೂಲ್ಯ ಜೀವಗಳನ್ನು ಕಾಪಾಡಿಕೊಳ್ಳಲು, ನಿಮ್ಮನ್ನೇ ನಂಬಿರುವ ಕುಟುಂಬದ ಹಿತಕ್ಕಾಗಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ, ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸಬೇಕು’ ಎಂದು ತಿಳಿಸಿದರು.
ನಗರ ವಿಭಾಗದ ಡಿವೈಎಸ್‌ಪಿ ಬಿ.ಶರಣಬಸವೇಶ್ವರ, ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ, ಗಾಯತ್ರಿ, ಶೈಲಜಾ, ಪ್ರಮೀಳಮ್ಮ, ಮಹದೇವ ಭತ್ತೆ, ಶಕುಂತಲಾ, ಜಯಶೀಲ ಹಾಗೂ ಇನ್ನಿತರ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.
ಜಯದೇವ ವೃತ್ತದಿಂದ ಆರಂಭವಾದ ಬೈಕ್ ರ‍್ಯಾಲಿಯು ನಗರದ ವಿವಿಧೆಡೆ ಸಂಚರಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಎಸ್‌ಪಿ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು.
ಪ್ರಯಾಣಿಕರ ಆಟೋಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಂಡು ಸಿಗ್ನಲ್ ಜಂಪ್ ಮಾಡಿ ಸಂಚಾರ ನಿಯಮವನ್ನು ಉಲ್ಲಂಘಿಸುತ್ತಿರುವ ಚಾಲಕರ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆಉಮಾ ಪ್ರಶಾಂತ್ ಎಸ್‌ಪಿ
‘ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶ’
‘2024-25ನೇ ಸಾಲಿನ ಸ್ವಚ್ಛತಾ ಸ್ಪರ್ಧೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ರಾಷ್ಟ್ರಮಟ್ಟದಲ್ಲಿ 32ನೇ ಸ್ಥಾನದಲ್ಲಿದೆ. ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶವಿದೆ. ಸ್ವಚ್ಛತಾ ಅಭಿಯಾನ ನೂರಕ್ಕೆ ನೂರರಷ್ಟು ಮನೆ ಮನೆಗೂ ತಲುಪಬೇಕು. ಇದರ ಭಾಗವಾಗಿ ಬೈಕ್ ರ‍್ಯಾಲಿ ಮೂಲಕ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಊರಿನ ಸ್ವಚ್ಛತೆಗೆ ಜನರ ಸ್ಪಂದನೆ ಸಹಕಾರವೂ ಅತೀ ಮುಖ್ಯ’ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.