ದಾವಣಗೆರೆ: ಬೆಳಿಗ್ಗೆಯೇ ಟ್ರ್ಯಾಕ್ಟರ್ ಹಾಗೂ ಟಂಟಂ ವಾಹನಗಳೊಂದಿಗೆ ಮನೆ ಬಳಿ ಬಂದು ಕಸ ಸಂಗ್ರಹಿಸುವ, ಕೈಯಲ್ಲಿ ಪೊರಕೆ ಹಿಡಿದು ನಗರದ ಸ್ವಚ್ಛತೆಗೆ ಬೆವರು ಹರಿಸುವ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರು ದಶಕಗಳಿಂದಲೂ ‘ಕಾಯಂ’ ಹಾಗೂ ‘ನೇರಪಾವತಿ’ಯ ಕನವರಿಕೆಯಲ್ಲೇ ದಿನ ದೂಡುತ್ತಿದ್ದಾರೆ.
ಪಾಲಿಕೆಯ ತ್ಯಾಜ್ಯ ಸಂಗ್ರಹ ವಾಹನಗಳ ಚಾಲಕರು, ಸಹಾಯಕರು, ಕಸ ತುಂಬಿಸಿಕೊಳ್ಳುವವರು ಸೇರಿದಂತೆ ನೂರಾರು ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಂ ಹಾಗೂ ನೇರಪಾವತಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಬೇಡಿಕೆಗಳು ಮಾತ್ರ ಈಡೇರಿಲ್ಲ.
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಒಟ್ಟು 376 ಕಾಯಂ ಪೌರಕಾರ್ಮಿಕರು (ಕಸ ಗುಡಿಸುವವರು) ಕಾರ್ಯ ನಿರ್ವಹಿಸುತ್ತಿದ್ದಾರೆ. 2018 ರಿಂದ 2023ರ ಅವಧಿಯಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ಈ ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ಇವರಿಗೆ ಸರ್ಕಾರದಿಂದಲೇ ವೇತನ ದೊರೆಯುತ್ತಿದೆ. ಇನ್ನುಳಿದ 18 ಪೌರ ಕಾರ್ಮಿಕರು ನೇರಪಾವತಿಗೆ ಒಳಪಟ್ಟಿದ್ದು, ಪಾಲಿಕೆಯಿಂದ ವೇತನ ಪಾವತಿಸಲಾಗುತ್ತಿದೆ.
ಪೌರಕಾರ್ಮಿಕರಷ್ಟೇ ಶ್ರಮಪಡುವ, ನಗರದ ಸ್ವಚ್ಛತೆಗೆ ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೇ ದುಡಿಯುವ ಕಾರ್ಮಿಕ ವರ್ಗದ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ದೊರೆಯುತ್ತಿಲ್ಲ. ಪಾಲಿಕೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ (ಟ್ರ್ಯಾಕ್ಟರ್, ಟಂಟಂ ಹಾಗೂ ಇನ್ನಿತರ ಗಾಡಿಗಳು) 193 ಚಾಲಕರಿದ್ದಾರೆ. 51 ಜನ ಕಸ ತುಂಬುವವರು (ಲೋಡರ್ಸ್) ಹಾಗೂ 102 ಜನ ಸಹಾಯಕರು (ಹೆಲ್ಪರ್ಸ್) ಸ್ವಚ್ಛತಾ ಕಾರ್ಯದಲ್ಲಿ ನಿತ್ಯವೂ ತೊಡಗುತ್ತಾರೆ.
ಇವರನ್ನು ಕಾಯಂಗೊಳಿಸುವುದಿರಲಿ, ನೇರಪಾವತಿಗೂ ಒಳಪಡಿಸಿಲ್ಲ. ಇದರಿಂದಾಗಿ ಹೊರಗುತ್ತಿಗೆ ಕಾರ್ಮಿಕರಾಗಿ ಏಜೆನ್ಸಿ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
‘ಡ್ರೈವರ್ಸ್, ಕ್ಲೀನರ್ಸ್, ಲೋಡರ್ಸ್, ಸ್ಮಶಾನ ಕಾವಲುಗಾರರು, ಒಳಚರಂಡಿ (ಯುಜಿಡಿ) ಕಾರ್ಮಿಕರು, ಗಾರ್ಡನ್ ವರ್ಕರ್ಸ್ ಸೇರಿದಂತೆ 523ಕ್ಕೂ ಹೆಚ್ಚು ಕಾರ್ಮಿಕರು ಏಜೆನ್ಸಿ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. 15 ಕ್ಕೂ ಹೆಚ್ಚು ವರ್ಷಗಳಿಂದ ಹಲವರು ಕೆಲಸ ನಿರ್ವಹಿಸುತ್ತಿದ್ದರೂ, ಕಾಯಂ ಆಗಿಲ್ಲ. ನೇರ ಪಾವತಿಗಾದರೂ ಒಳಪಡಿಸಬೇಕು’ ಎಂದು ಘನತ್ಯಾಜ್ಯ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದುಗ್ಗೇಶ್ ಎಂ.ಆರ್. ಒತ್ತಾಯಿಸುತ್ತಾರೆ.
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸ್ವಚ್ಛತಾ ಕೆಲಸಗಾರರು ಲಂಚದ ವ್ಯೂಹಕ್ಕೆ ಸಿಲುಕಿದ್ದಾರೆ. ಈ ಲಂಚಾವತಾರದ ವಿರುದ್ಧ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ವೇದಿಕೆ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿಯೇ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹೊರಗುತ್ತಿಗೆ ಕಾರ್ಮಿಕರಾಗಿ ಸೇರಲೂ ಏಜೆನ್ಸಿ ಅಥವಾ ಗುತ್ತಿಗೆದಾರರಿಗೆ ₹ 2 ಲಕ್ಷ ಲಂಚ ನೀಡಬೇಕಿದೆ. ಇಲ್ಲವೇ ಪ್ರತೀ ತಿಂಗಳು ₹ 2 ಲಕ್ಷಕ್ಕೆ ಬಡ್ಡಿ ಕಟ್ಟಬೇಕಾದ ದುಸ್ಥಿತಿ ಇದೆ. ಕಮಿಷನ್ ಹೆಸರಿನಲ್ಲಿಯೂ ಗುತ್ತಿಗೆದಾರರು ಹೊರಗುತ್ತಿಗೆ ಕಾರ್ಮಿಕರ ರಕ್ತ ಹೀರುತ್ತಿದ್ದಾರೆ’ ಎಂದು ಕೆ.ಎಸ್.ಬಸವಂತಪ್ಪ ದೂರುತ್ತಾರೆ.
‘ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಸ್ವಚ್ಛತಾ ಕಾರ್ಮಿಕರಿಗೆ ನಿಯಮದ ಪ್ರಕಾರವೇ ಅವರ ಬ್ಯಾಂಕ್ ಖಾತೆಗೆ ವೇತನ ಪಾವತಿಯಾಗುತ್ತದೆ. ಆದರೆ, ವೇತನ ಜಮೆ ಆದ ಬಳಿಕ ಗುತ್ತಿಗೆದಾರ ಹಾಗೂ ಕಾರ್ಮಿಕರ ನಡುವೆ ‘ಕಮಿಷನ್ ಹೊಂದಾಣಿಕೆ’ ನಡೆಯುತ್ತದೆ ಎಂಬ ಮಾತುಗಳು ಕೇಳಿಬಂದಿವೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಾಲಿಕೆಯ ಅಧಿಕಾರಿಯೊಬ್ಬರು.
ಮಹಾನಗರ ಪಾಲಿಕೆಯ 376 ಪೌರಕಾರ್ಮಿಕರ ಸೇವೆಯನ್ನು 3 ಹಂತಗಳಲ್ಲಿ ಕಾಯಂಗೊಳಿಸಲಾಗಿದೆ. ಕಮಿಷನ್ ಪಡೆಯುವ ಬಗ್ಗೆ ಹೊರಗುತ್ತಿಗೆ ಕಾರ್ಮಿಕರು ದೂರು ನೀಡಿದರೆ ಕಾನೂನು ಕ್ರಮ ವಹಿಸಲಾಗುವುದುರೇಣುಕಾ ಪಾಲಿಕೆ ಆಯುಕ್ತೆ
ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಇಲ್ಲ. ಏಜೆನ್ಸಿ ಹಾವಳಿ ವಿಪರೀತ ಇದೆ. ಗುತ್ತಿಗೆದಾರರು ತಮಗೆ ಬೇಕಾದವರನ್ನು ಲಂಚ ನೀಡಿದವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆಆವರಗೆರೆ ವಾಸು ಕಾರ್ಮಿಕ ಮುಖಂಡ
ಹೊರಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂಬುದೇ ನಮ್ಮ ಮುಖ್ಯ ಬೇಡಿಕೆ. ಅದು ವಿಳಂಬವಾಗುವುದಾದರೆ ಸದ್ಯಕ್ಕೆ ನೇರಪಾವತಿಗಾದರೂ ಒಳಪಡಿಸಬೇಕುಎಚ್. ಹುಲಿಗೇಶ್ ಪಾಲಿಕೆ ಹೊರಗುತ್ತಿಗೆ ಲೋಡರ್ಸ್ ಹೆಲ್ಪರ್ಸ್ ಸಫಾಯಿ ಕಾರ್ಮಿಕರ ಸಂಘದ ಅಧ್ಯಕ್ಷ
‘ಸರ್ಕಾರವು ಕಾಯಂಗೊಳಿಸಲು ಮುಂದಾದಾಗ ಹತ್ತಾರು ವರ್ಷ ಕೆಲಸ ನಿರ್ವಹಿಸಿದ ಹೊರಗುತ್ತಿಗೆ ಕಾರ್ಮಿಕರನ್ನು ಏನಾದರೂ ಕಾರಣ ನೀಡಿ ಗುತ್ತಿಗೆದಾರರು ಕೆಲಸದಿಂದ ತೆಗೆದುಹಾಕುತ್ತಾರೆ. ಅವರ ಬದಲಿಗೆ ಸಂಬಂಧಿಕರು ಹಾಗೂ ಹೆಚ್ಚು ಹಣ ಕೊಟ್ಟವರನ್ನು ಕಾಯಂ ಮಾಡಲು ದಾಖಲೆಗಳನ್ನು ಸಿದ್ಧಪಡಿಸುತ್ತಾರೆ’ ಎಂದು ದೂರುತ್ತಾರೆ ಶಾಸಕ ಕೆ.ಎಸ್.ಬಸವಂತಪ್ಪ. ‘ಈ ದಂಧೆಯಲ್ಲಿ ಅಧಿಕಾರಿಗಳೂ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನೇರಪಾವತಿಗೆ ಒಳಪಡಿಸುವಾಗಲೂ ಇಂಥದ್ದೇ ಅಕ್ರಮಗಳು ನಡೆಯುತ್ತವೆ. ಲಂಚ ಕಮಿಷನ್ ಹಾವಳಿ ತಪ್ಪಿಸುವ ಉದ್ದೇಶದಿಂದ 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಪೌರಕಾರ್ಮಿಕರನ್ನು ಕಾಯಂಗೊಳಿಸಿತ್ತು’ ಎನ್ನುತ್ತಾರೆ ಅವರು.
ಹೊರಗುತ್ತಿಗೆಯೂ ಅಲ್ಲದ ನೇರಪಾವತಿಯೂ ಅಲ್ಲದ ತ್ಯಾಜ್ಯ ಸಂಗ್ರಹಿಸುವಾಗ ಆಯಾ ಮನೆಯವರು ಕೊಡುವ ಹಣವನ್ನೇ ನೆಚ್ಚಿಕೊಂಡು ಕೆಲಸ ಮಾಡುವ ನೂರಾರು ಕಾರ್ಮಿಕರು ನಗರದಲ್ಲಿದ್ದಾರೆ. ಮನೆಯವರು ತಿಂಗಳಿಗೊಮ್ಮೆ ನೀಡುವ ₹20 ₹50 ಹಣ ಪಡೆದು ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಈ ಕಾರ್ಮಿಕರು ಮುಂದೊಂದು ದಿನ ಹೊರಗುತ್ತಿಗೆ ಕಾರ್ಮಿಕರಾಗಿ ಸೇರಬಹುದು ಎಂಬ ಆಶಾಭಾವದಲ್ಲಿದ್ದಾರೆ. ‘12– 13 ವರ್ಷದಿಂದ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಿ ಪಾಲಿಕೆ ವಾಹನಗಳಿಗೆ ನೀಡುತ್ತಿರುವೆ. ಆಯಾ ಮನೆಯವರು ಕೊಟ್ಟಷ್ಟು ಹಣ ಪಡೆಯುವೆ. ನಮ್ಮನ್ನು ಹೊರಗುತ್ತಿಗೆ ಕಾರ್ಮಿಕರನ್ನಾಗಿಸಬೇಕು’ ಎಂದು ಒತ್ತಾಯಿಸುತ್ತಾರೆ ಎಸ್.ಎಸ್.ಲೇಔಟ್‌ನಲ್ಲಿ ತ್ಯಾಜ್ಯ ಸಂಗ್ರಹಿಸುವ ಗಂಟಿಗಾಡಿ ಕಾರ್ಮಿಕ ಕುಮಾರ್ ಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.