ADVERTISEMENT

ದಾವಣಗೆರೆ: ಉದ್ಘಾಟನೆಯಾದರೂ ಸೇವೆ ಒದಗಿಸದ ನಿಲ್ದಾಣ

ಜಿ.ಬಿ.ನಾಗರಾಜ್
Published 27 ಜುಲೈ 2024, 5:03 IST
Last Updated 27 ಜುಲೈ 2024, 5:03 IST
ದಾವಣಗೆರೆಯ ಪಿ.ಬಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ   –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಪಿ.ಬಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ   –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆಯಾಗಿವೆ. ಪ್ರಯಾಣಿಕರಲ್ಲಿ ಹೊಸ ಕನಸು ಬಿತ್ತಿದ ಈ ನಿಲ್ದಾಣಗಳು ಇನ್ನೂ ಸೇವೆ ಒದಗಿಸುತ್ತಿಲ್ಲ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು ₹ 109.84 ಕೋಟಿ ಹಾಗೂ ಖಾಸಗಿ ಬಸ್‌ ನಿಲ್ದಾಣವನ್ನು ₹ 26.42 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮಾರ್ಚ್‌ 9ರಂದು ಲೋಕಾರ್ಪಣೆಗೊಂಡರೆ, ಖಾಸಗಿ ಬಸ್‌ ನಿಲ್ದಾಣ ಉದ್ಘಾಟನೆಯಾಗಿ ಒಂದು ವರ್ಷ 4 ತಿಂಗಳು ಕಳೆದಿದೆ.

ನಗರ ವ್ಯಾಪ್ತಿಯಲ್ಲಿ ಸಾರಿಗೆ ಸಂಪರ್ಕ ಸಶಕ್ತಗೊಳಿಸಿ ಪ್ರಯಾಣಿಕರಿಗೆ ಮೂಲಸೌಲಭ್ಯ ಕಲ್ಪಿಸುವುದು ‘ಸ್ಮಾರ್ಟ್‌ ಸಿಟಿ’ಯ ಪ್ರಮುಖ ಉದ್ದೇಶ. ಅಂತೆಯೇ ಪಿ.ಬಿ. ರಸ್ತೆಯಲ್ಲಿರುವ ಈ ಎರಡು ಬಸ್‌ ನಿಲ್ದಾಣಗಳನ್ನು ಮರು ನಿರ್ಮಾಣ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಖಾಸಗಿ ಬಸ್‌ ನಿಲ್ದಾಣದ ಕಾಮಗಾರಿಗೆ ಬಸ್‌ ಮಾಲೀಕರಿಂದ ತಕರಾರು ವ್ಯಕ್ತವಾಗಿದ್ದರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು 6 ಎಕರೆ 7 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಸ್ಮಾರ್ಟ್‌ಸಿಟಿಯಿಂದ ಶೇ 75ರಷ್ಟು ಹಾಗೂ ಕೆಎಸ್‌ಆರ್‌ಟಿಸಿಯಿಂದ ಶೇ 25 ರಷ್ಟು ವೆಚ್ಚವನ್ನು ಭರಿಸಲಾಗಿದೆ. ವಿಭಾಗೀಯ ಕಚೇರಿ, ಶಾಪಿಂಗ್‌ ಮಾಲ್‌, ಮಲ್ಟಿಫ್ಲೆಕ್ಸ್‌, ವಾಹನ ಪಾರ್ಕಿಂಗ್‌, ಸೇರಿ ಆಧುನಿಕ ಸೌಲಭ್ಯ ಕಲ್ಪಿಸುವ ಜೊತೆಗೆ 45 ಬಸ್‌ಗಳನ್ನು ನಿಲುಗಡೆ ಮಾಡುವ ವ್ಯವಸ್ಥೆ ಇಲ್ಲಿದೆ. 2021 ಜನವರಿಯಿಂದ ಕಾರ್ಯಾರಂಭಗೊಂಡ ಕಾಮಗಾರಿ ಎರಡು ವರ್ಷಗಳ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕಿತ್ತು. ಮೂರೂವರೆ ವರ್ಷ ಕಳೆದರೂ ಸೇವೆಗೆ ಸಜ್ಜಾಗಿಲ್ಲ.

ನಿಲ್ದಾಣವಲ್ಲ ವಾಣಿಜ್ಯ ಕಟ್ಟಡ:

ನೂತನ ಖಾಸಗಿ ಬಸ್‌ ನಿಲ್ದಾಣಕ್ಕೆ ಬಸ್‌ ಮಾಲೀಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಪ್ರಯಾಣಿಕರು ಹಾಗೂ ಬಸ್‌ ಮಾಲೀಕರ ಹಿತದೃಷ್ಟಿಯನ್ನು ಕಡೆಗಣಿಸಿ ವಾಣಿಜ್ಯ ಉದ್ದೇಶವನ್ನು ಪ್ರಧಾನವಾಗಿ ಇಟ್ಟುಕೊಳ್ಳಲಾಗಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬಂದಿದೆ. ಇಲ್ಲಿ 89 ವಾಣಿಜ್ಯ ಮಳಿಗೆ, ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ, ಕ್ಯಾಂಟೀನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಲ್ನೋಟಕ್ಕೆ ನಿಲ್ದಾಣ ಸುಸಜ್ಜಿತವಾಗಿರುವಂತೆ ಕಾಣುತ್ತಿದ್ದರೂ ಹಲವು ಸಮಸ್ಯೆಗಳನ್ನು ಒಡಲೊಳಗೆ ಇಟ್ಟುಕೊಂಡಿದೆ ಎಂಬ ದೂರುಗಳಿವೆ.

‘14 ಬಸ್‌ಗಳು ಮಾತ್ರ ಏಕಕಾಲಕ್ಕೆ ನಿಲುಗಡೆ ಮಾಡುವ ವಿನ್ಯಾಸದೊಂದಿಗೆ ನಿಲ್ದಾಣ ನಿರ್ಮಿಸಲಾಗಿದೆ. ಪ್ರತಿ ಬಸ್‌ ಕನಿಷ್ಠ 15 ನಿಮಿಷ ನಿಲುಗಡೆ ಮಾಡಬೇಕು. ಈ ಸಂದರ್ಭದಲ್ಲಿ ಉಳಿದ ಬಸ್‌ಗಳು ಎಲ್ಲಿ ಕಾಯಬೇಕು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಿತ್ಯ ಸುಮಾರು 350ಕ್ಕೂ ಹೆಚ್ಚು ಬಸ್‌ಗಳು ಈ ನಿಲ್ದಾಣಕ್ಕೆ ಬಂದು ಹೋಗುತ್ತವೆ. ವಾಣಿಜ್ಯ ಉದ್ದೇಶಕ್ಕೆ ಒತ್ತು ನೀಡಲಾಗಿದ್ದು, ಸುಗಮ ಸಂಚಾರ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಲಾಗಿದೆ’ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್‌. ಮಲ್ಲೇಶಪ್ಪ ಆರೋಪಿಸಿದ್ದಾರೆ.

ಬಸ್‌ ನಿಲ್ದಾಣ ಮರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲುಗಡೆಗೆ ಹೈಸ್ಕೂಲ್‌ ಮೈದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾ ಚಟುವಟಿಕೆಗೆ ಮೀಸಲಾಗಿದ್ದ ಮೈದಾನದ ಪಾರ್ಶ್ವಭಾಗವನ್ನು 2020ರಿಂದ ಬಸ್‌ ನಿಲ್ದಾಣವಾಗಿ ಪರಿವರ್ತಿಸಲಾಗಿದೆ. ಈ ಮೈದಾನದಿಂದ ನಿಲ್ದಾಣಗಳನ್ನು ತೆರವುಗೊಳಿಸುವಂತೆ ಕ್ರೀಡಾಪಟುಗಳಿಂದ ಒತ್ತಾಯ ಕೇಳಿಬಂದಿದೆ.

ದಾವಣಗೆರೆಯ ಪಿ.ಬಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣ  –ಪ್ರಜಾವಾಣಿ ಚಿತ್ರಗಳು/ ಸತೀಶ ಬಡಿಗೇರ್

Quote - ತಾತ್ಕಾಲಿಕ ನಿಲ್ದಾಣ ತೆರವುಗೊಳಿಸಿ ಹೈಸ್ಕೂಲ್‌ ಮೈದಾನವನ್ನು ಸುಸ್ಥಿತಿಗೆ ಮರಳಿಸುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ನಿಲ್ದಾಣ ತೆರವುಗೊಳಿಸದೇ ಇದ್ದರೆ ಹೋರಾಟ ನಡೆಸುತ್ತೇವೆ. ಎ.ಕಾಂತರಾಜ್‌ ಆಚಾರ್‌ ಫುಟ್ಬಾಲ್‌ ಆಟಗಾರ

Quote - ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ನೂತನ ಬಸ್‌ ನಿಲ್ದಾಣದ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಹೈಸ್ಕೂಲ್‌ ಮೈದಾನದ ತಾತ್ಕಾಲಿಕ ನಿಲ್ದಾಣವನ್ನು ತೆರವುಗೊಳಿಸಿ ಸುಸ್ಥಿತಿಗೆ ತಂದುಕೊಡಲಾಗುವುದು. ಸಿದ್ದೇಶ್ವರ ಎನ್‌.ಹೆಬ್ಬಾಳ್‌ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ

Quote - ನಿಲ್ದಾಣಕ್ಕೆ ಬರುವ ಬಸ್‌ಗೆ ಈ ಹಿಂದೆ ₹ 10 ಶುಲ್ಕವಿತ್ತು. ಮಹಾನಗರ ಪಾಲಿಕೆ ಇದನ್ನು ₹ 50ಕ್ಕೆ ಏರಿಕೆ ಮಾಡಿತ್ತು. ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಶುಲ್ಕವನ್ನು ₹ 30ಕ್ಕೆ ನಿಗದಿಪಡಿಲಾಗಿದೆ. ಕೋವಿಡ್‌ ಸಂಕಷ್ಟದಿಂದ ಹೋರಬರದ ಮಾಲೀಕರಿಗೆ ಇದು ಹೊರೆಯಾಗಿದೆ. ಕೆ.ಎಸ್‌.ಮಲ್ಲೇಶಪ್ಪ ಅಧ್ಯಕ್ಷ ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘ

Cut-off box - ‘ಸ್ಮಾರ್ಟ್‌’ ಆಗದ ತಂಗುದಾಣ ನಗರದ 52 ಸ್ಥಳಗಳಲ್ಲಿ ನಿರ್ಮಿಸಿದ ‘ಸ್ಮಾರ್ಟ್‌ ತಂಗುದಾಣ’ ಹೆಸರಿಗಷ್ಟೇ ಸ್ಮಾರ್ಟ್‌ ಆಗಿವೆ. ಯೋಜನೆಯಲ್ಲಿ ಉಲ್ಲೇಖಿಸಿದ ಯಾವ ಸೌಲಭ್ಯಗಳೂ ಇಲ್ಲಿ ಸಿಗುವುದಿಲ್ಲ. ಈ ನಿಲ್ದಾಣದ ಸೇವೆ ಪಡೆಯಲು ಮುಂದಾದ ಪ್ರಯಾಣಿಕರು ‘ಸ್ಮಾರ್ಟ್‌ ಸಿಟಿ’ ಯೋಜನೆಯನ್ನು ಶಪಿಸಿದ್ದೇ ಹೆಚ್ಚು. ಬಸ್‌ ನಿಲುಗಡೆ ಮಾಡದ ಸ್ಥಳಗಳಲ್ಲಿಯೇ ಈ ತಂಗುದಾಣಗಳಿದ್ದು ನಿರ್ವಹಣೆಯ ಕೊರತೆಯಿಂದ ಬಹುತೇಕವು ಪಾಳುಬಿದ್ದಂತೆ ಕಾಣುತ್ತಿವೆ. ನಗರದ ಹಲವು ಮಾರ್ಗಗಳಲ್ಲಿ ಈ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಬಸ್‌ ಮಾರ್ಗದ ನಕ್ಷೆ ವೈ–ಫೈ ಸಿಸಿಟಿವಿ ಕಣ್ಗಾವಲು ಮೊಬೈಲ್‌ ಚಾರ್ಜಿಂಗ್ ಪಾಯಿಂಟ್‌ ಸೌಲಭ್ಯಗಳನ್ನು ರೂಪಿಸುವ ಭರವಸೆಯೊಂದಿಗೆ ಇವುಗಳನ್ನು ವಿನ್ಯಾಸಗೊಳಿಸಲಾಗಿತ್ತು. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಆಶ್ವಾಸನೆಯನ್ನು ನೀಡಲಾಗಿತ್ತು. ಈ ಯಾವ ಸೌಲಭ್ಯಗಳು ಈ ತಂಗುದಾಣಗಳಲ್ಲಿ ಲಭ್ಯವಿಲ್ಲ.

Cut-off box - ಹೈಸ್ಕೂಲ್ ಮೈದಾನ: ಸುಸ್ಥಿತಿಗೆ ಆಗ್ರಹ ಹೈಸ್ಕೂಲ್‌ ಮೈದಾನದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಿಗೆ ತಾತ್ಕಾಲಿಕ ನಿಲ್ದಾಣ ನಿರ್ಮಾಣ ಮಾಡಿದ್ದರಿಂದ ಕ್ರೀಡಾ ಚಟುವಟಿಕೆಗೆ ಅಡ್ಡಿಯಾಗಿದೆ. ನೂತನ ಬಸ್‌ ನಿಲ್ದಾಣಗಳನ್ನು ಕಾರ್ಯಾರಂಭಗೊಳಿಸಿ ಹೈಸ್ಕೂಲ್‌ ಮೈದಾನವನ್ನು ಕ್ರೀಡೆಗಳಿಗೆ ಮುಕ್ತಗೊಳಿಸಬೇಕು ಎಂಬ ಧ್ವನಿ ದಿನಕಳೆದಂತೆ ಜೋರಾಗುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಮೈದಾನ ಕ್ರೀಡಾ ಚಟುವಟಿಕೆಗಳ ತಾಣವಾಗಿತ್ತು. ಹಲವು ಬಡಾವಣೆಯ ಮಕ್ಕಳು ಯುವಕರು ವೃದ್ಧರಿಗೂ ಇದು ಆಶ್ರಯ ಒದಗಿಸಿತ್ತು. ವಾರಾಂತ್ಯದಲ್ಲಿ ಎಲ್ಲ ರೀತಿಯ ಕ್ರೀಡೆಗಳನ್ನು ಈ ಮೈದಾನದಲ್ಲಿ ಕಾಣಬಹುದಿತ್ತು. ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ನಡೆಸಿ ವಿಶ್ರಾಂತಿ ಪಡೆಯಲು ಹೆಚ್ಚಿನ ಜನರು ಬರುತ್ತಿದ್ದರು. ಮೈದಾನದಲ್ಲಿ ಬಸ್‌ ನಿಲ್ದಾಣ ನಿರ್ಮಾಣವಾದ ಬಳಿಕ ಇವರಿಗೆ ತೊಂದರೆಯುಂಟಾಗಿದೆ.‌ ‘ಆರಂಭದಲ್ಲಿ ಖಾಸಗಿ ಬಸ್‌ ನಿಲ್ದಾಣ ಶುರುವಾಯಿತು. ಎರಡು ವರ್ಷಗಳ ಕಾಲಾವಕಾಶ ಪಡೆದು ಕೆಎಸ್‌ಆರ್‌ಟಿಸಿ ನಿಲ್ದಾಣ ನಿರ್ಮಿಸಲಾಯಿತು. ಈ ಎರಡು ನಿಲ್ದಾಣಗಳು ತಲೆಯತ್ತಿದ ಬಳಿಕ ಹ್ಯಾಂಡ್‌ಬಾಲ್‌ ಫುಟ್ಬಾಲ್‌ ಕ್ರಿಕೆಟ್‌ಗೆ ಅಡ್ಡಿಯಾಗಿದೆ’ ಎಂದು ಫುಟ್ಬಾಲ್‌ ಆಟಗಾರ ಎ.ಕಾಂತರಾಜ್‌ ಆಚಾರ್‌ ಬೇಸರ ವ್ಯಕ್ತಪಡಿಸಿದ್ದಾರೆ. ‘ಮೈದಾನದಲ್ಲಿರುವ ಖಾಸಗಿ ಬಸ್‌ ನಿಲ್ದಾಣದ ಸ್ಥಳವನ್ನು ಫುಡ್‌ ಕೋರ್ಟ್‌ಗೆ ಮೀಸಲಿಡುವ ವದಂತಿಗಳು ಹರಿದಾಡುತ್ತಿವೆ. ಇದರಿಂದ ಮೈದಾನದಲ್ಲಿ ನೈರ್ಮಲ್ಯದ ಕೊರತೆಯಾಗುವ ಸಾಧ್ಯತೆ ಇದೆ. ಆಟದ ಮೈದಾನವನ್ನು ಆಟಕ್ಕೆ ಮುಕ್ತಗೊಳಿಸದೇ ಇದ್ದರೆ ಹೋರಾಟ ಅನಿವಾರ್ಯ’ ಎನ್ನುತ್ತಾರೆ ಫುಟ್ಬಾಲ್‌ ಪಟು ಎನ್‌.ಸಂಜೀವ್‌ ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.