ದಾವಣಗೆರೆ: ಮಕ್ಕಳಲ್ಲಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಮೊಟ್ಟೆ ಸೌಲಭ್ಯ ಕಲ್ಪಿಸಿದೆ. ವಾರದ 6 ದಿನವೂ ಮೊಟ್ಟೆ ವಿತರಿಸದೇ ಕೆಲ ಶಿಕ್ಷಕರು ಮೋಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಪಶುಸಂಗೋಪನಾ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿಯ ‘ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿದಾಗ ಸರ್ಕಾರಿ ಶಾಲೆಗಳಿಗೂ ಭೇಟಿ ನೀಡುತ್ತಿದ್ದೇನೆ. ಕೆಲ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ಶಾಲೆಗಳಲ್ಲಿ ಇಂತಹ ವಾತಾವರಣವಿಲ್ಲ. ಸರ್ಕಾರ ನೀಡುವ ಮೊಟ್ಟೆಯನ್ನು ಶಿಕ್ಷಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಈ ಬಗ್ಗೆ ಅರಿವಿಲ್ಲ’ ಎಂದು ಹೇಳಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಮೊಟ್ಟೆ ಬದಲು ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಶೇಂಗಾ ಚಿಕ್ಕಿ ನೀಡದಂತೆ ಸರ್ಕಾರ ಸೂಚಿಸಿದರೂ ಮೊಟ್ಟೆ ಹಣ ಉಳಿಸಲು ಕೆಲ ಶಿಕ್ಷಕರು ವಾಮಮಾರ್ಗ ಅನುಸರಿಸುತ್ತಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಯತ್ತ ಗಮನ ಹರಿಸಬೇಕು’ ಎಂದು ಸೂಚಿಸಿದರು.
‘ವರ್ಷವಿಡೀ ಏಕದರದಲ್ಲಿ ಮೊಟ್ಟೆ ಪೂರೈಕೆಗೆ ಪಶುಪಾಲನಾ ಇಲಾಖೆ ವ್ಯವಸ್ಥೆ ಮಾಡಬೇಕು. ಬೆಲೆ ಏರಿಳಿತವು ಶಾಲಾ ವಿದ್ಯಾರ್ಥಿಗಳ ಪೌಷ್ಟಿಕ ಆಹಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ ಇಲಾಖೆ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ವರದಿ ನೀಡಬೇಕು’ ಎಂದರು.
‘ಕೃಷಿ ಭಾಗ್ಯ’ವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹಾತ್ವಕಾಂಕ್ಷಿ ಯೋಜನೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ರೂಪಿಸಿದ ಈ ಯೋಜನೆಗೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಮಳೆಯಾಶ್ರಿತ ಪ್ರದೇಶದ ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ. ಕೃಷಿ ಹೊಂಡ ಹಾಗೂ ಚೆಕ್‌ಡ್ಯಾಂ ನಿರ್ಮಾಣಕ್ಕೆ ಒತ್ತು ನೀಡಬೇಕು’ ಎಂದರು.
ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕರು ಸೂಚಿಸಿದರು. ಶೇ 100ರಷ್ಟು ಕರ ವಸೂಲಿ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ತಹಶೀಲ್ದಾರ್ ಡಾ.ಅಶ್ವತ್ಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.