ದಾವಣಗೆರೆ: ಸಮಗ್ರ ಮತ್ತು ಸುಸ್ಥಿರ ಪ್ರವಾಸೋದ್ಯಮ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರ್ನಾಟಕ ಪ್ರವಾಸೋದ್ಯಮ ನೀತಿ 2024–29’ಯನ್ನು ಅನುಷ್ಠಾನಕ್ಕೆ ತಂದಿದೆ. ನೂತನ ನೀತಿಯಡಿ ಜಿಲ್ಲೆಯಲ್ಲಿ 41 ಪ್ರವಾಸಿ ತಾಣಗಳನ್ನು ಘೋಷಣೆ ಮಾಡಲಾಗಿದ್ದು, ಪ್ರವಾಸೋದ್ಯಮಕ್ಕೆ ಹೊಸ ಹುರುಪು ಸಿಕ್ಕಿದೆ.
ವಾಣಿಜ್ಯ ಚಟುವಟಿಕೆಗಳಿಂದ ಗಮನ ಸೆಳೆದಿರುವ ದಾವಣಗೆರೆ ಜಿಲ್ಲೆಯನ್ನು ಜಾಗತಿಕ ಪ್ರವಾಸಿ ಕೇಂದ್ರವಾಗಿ ಪರಿವರ್ತಿಸುವ ಪ್ರಯತ್ನಕ್ಕೂ ಇಂಬು ದೊರಕಿದೆ. ನೈಸರ್ಗಿಕ, ಐತಿಹಾಸಿಕ, ಧಾರ್ಮಿಕ ಕೇಂದ್ರಗಳು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳ್ಳುವ ಭರವಸೆ ಮೂಡಿದೆ.
ಈವರೆಗೆ ಜಿಲ್ಲೆಯ 12 ಪ್ರವಾಸಿ ತಾಣಗಳು ಮಾತ್ರ ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಪಡೆದಿದ್ದವು. 2018ರಿಂದ 24ರವರೆಗೆ ಈ ಸ್ಥಳಗಳಿಗೆ 69 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ರಾಜ್ಯ ಸರ್ಕಾರ 2024ರ ನ. 7ರಂದು ನೂತನ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಿ, ಹೊಸ ತಾಣ ಗುರುತಿಸಲು ಸೂಚಿಸಿತ್ತು. ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಸ್ಥಳಗಳನ್ನು ಹೆಸರಿಸಿ, ಪ್ರವಾಸಿಗರು ಭೇಟಿ ನೀಡಿದ ಅಂಕಿ–ಸಂಖ್ಯೆ, ತಾಣದ ಮಹತ್ವ ಆಧರಿಸಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಆದ್ಯತಾ ಪಟ್ಟಿ ಸಿದ್ಧಪಡಿಸಿತ್ತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧ್ಯಕ್ಷತೆಯ ಈ ಸಮಿತಿ ಮಾರ್ಚ್ 25ರಂದು ಸಲ್ಲಿಸಿದ ಈ ಪ್ರಸ್ತಾವಕ್ಕೆ ಸರ್ಕಾರ ಆ. 7ರಂದು ಅನುಮೋದನೆ ನೀಡಿದೆ.
ನೂತನ ನೀತಿಯು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಗಣನೀಯ ಸಾಮರ್ಥ್ಯ ಹೊಂದಿದ ಜಿಲ್ಲೆಯನ್ನು ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪರಿಸರ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸುವ ನಿರೀಕ್ಷೆ ಗರಿಗೆದರಿದೆ. ಹೂಡಿಕೆದಾರರನ್ನು ಆಕರ್ಷಿಸುವ, ಮೂಲಸೌಲಭ್ಯ ಕಲ್ಪಿಸುವ ಅವಕಾಶ ಸಿಕ್ಕಿದೆ. ಇದರಿಂದ ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.
ಮಧ್ಯ ಕರ್ನಾಟಕದಲ್ಲಿರುವ ಜಿಲ್ಲೆಯು ಉತ್ತಮ ಸಾರಿಗೆ ಸೌಲಭ್ಯ ಹೊಂದಿದೆ. ರೈಲು ಮತ್ತು ರಸ್ತೆ ಸಂಪರ್ಕ ಅತ್ಯುತ್ತಮವಾಗಿದೆ. ಬೆಂಗಳೂರು–ಮಹಾರಾಷ್ಟ್ರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48 ಜಿಲ್ಲೆಯಲ್ಲಿ ಹಾದು ಹೋಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ 100 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಜೊತೆಗೂ ಸಂಪರ್ಕ ಸುಲಭವಾಗಿದೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ 13 ಹೋಟೆಲ್ ಹಾಗೂ 1 ಹೋಂ ಸ್ಟೇ ಮಾತ್ರವೇ ಜಿಲ್ಲೆಯಲ್ಲಿವೆ. ಅಲ್ಲಲ್ಲಿ ಯಾತ್ರಿ ನಿವಾಸ, ಬಜೆಟ್ ಹೋಟೆಲ್ ಹಾಗೂ ಮಧ್ಯಮ ಶ್ರೇಣಿಯ ರೆಸಾರ್ಟ್‌ಗಳಿವೆ. ಪ್ರವಾಸಿಗರಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಬಂಡವಾಳ ಆಕರ್ಷಿಸಲು ನಿರ್ಧರಿಸಲಾಗಿದೆ. ₹ 10 ಕೋಟಿಯವರೆಗಿನ ಹೂಡಿಕೆಗೆ ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಗೃಹಬಳಕೆ ದರದಲ್ಲಿ ನೀರು ಮತ್ತು ವಿದ್ಯುತ್ ನೀಡಿ ಹೋಂ ಸ್ಟೇಗಳಿಗೂ ಪ್ರೋತ್ಸಾಹ ನೀಡಲಾಗಿದೆ.
ಜಿಲ್ಲೆಯು ಐತಿಹಾಸಿಕ, ಪ್ರಾಕೃತಿಕ ಮತ್ತು ವಿಶಿಷ್ಟ ಆಹಾರ ಸಂಸ್ಕೃತಿಯಂತಹ ಸಂಪನ್ಮೂಲಗಳನ್ನು ಹೊಂದಿದೆ. ಪ್ರವಾಸಿಗರನ್ನು ಆಕರ್ಷಿಸುವ ಕೆರೆಗಳಲ್ಲಿ ದೋಣಿ ವಿಹಾರ ಮತ್ತು ಜಲಸಾಹಸ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಿದೆ. ದಾವಣಗೆರೆ ‘ಬೆಣ್ಣೆ ದೋಸೆ’ಗೆ ಬ್ರಾಂಡ್ ಸ್ವರೂಪ ನೀಡುವ ಪ್ರಯತ್ನವೂ ಆರಂಭವಾಗಲಿದೆ. ಆಹಾರ ಪ್ರವಾಸೋದ್ಯಮದ ಅಭಿವೃದ್ಧಿಗೆ ದೊಡ್ಡ ಅವಕಾಶ ಸೃಷ್ಟಿಯಾಗಿದೆ.
ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳು ತೃಪ್ತಿದಾಯಕವಾಗಿಲ್ಲ ಎಂಬ ಬೇಸರ ಸಾರ್ವಜನಿಕರಲ್ಲಿದೆ. ದಾವಣಗೆರೆ ತಾಲ್ಲೂಕಿನ ನೀರ್ತಡಿ ದೇಗುಲಕ್ಕೆ ಸಾರಿಗೆ ಸಂಪರ್ಕದ ಸಮಸ್ಯೆ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಇರುವ ಇಂದಿರಾಗಾಂಧಿ ಕಿರು ಮೃಗಾಲಯದ ಬಳಿ ಬಸ್ ನಿಲುಗಡೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಪ್ರವಾಸಿ ತಾಣಗಳ ನಿರ್ವಹಣೆ, ನೈರ್ಮಲ್ಯ, ತ್ಯಾಜ್ಯ ವಿಲೇವಾರಿಯಲ್ಲಿ ಸಮಸ್ಯೆಗಳಿವೆ. ಸಾರ್ವಜನಿಕ ಶೌಚಾಲಯಗಳಿಗೆ ಆದ್ಯತೆ ಸಿಗಬೇಕಿದೆ. ಆಗ ಮಾತ್ರ ನೂತನ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸಲಿವೆ.
ಅನುದಾನ ಲಭ್ಯತೆಯ ಅನುಸಾರ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡಲಾಗುತ್ತದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆ ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆಕಾವ್ಯಾ ಸಹಾಯಕ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ
ಸರ್ಕಾರ ಇತ್ತೀಚೆಗೆ ಪ್ರವಾಸೋದ್ಯಮದತ್ತ ಗಮನ ಹರಿಸುತ್ತಿದೆ. ಹೊಸ ನೀತಿ ರೂಪಿಸುವ ಮೂಲಕ ಒತ್ತು ನೀಡಿದೆ. ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ ಅಣಬೇರು ರಾಜಣ್ಣ ಹೋಟೆಲ್ ಉದ್ಯಮಿ
ಸರ್ಕಾರ ಇತ್ತೀಚೆಗೆ ಪ್ರವಾಸೋದ್ಯಮದತ್ತ ಗಮನ ಹರಿಸುತ್ತಿದೆ. ಹೊಸ ನೀತಿ ರೂಪಿಸುವ ಮೂಲಕ ಒತ್ತು ನೀಡಿದೆ. ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆಅಣಬೇರು ರಾಜಣ್ಣ ಹೋಟೆಲ್ ಉದ್ಯಮಿ
482 ವಿದೇಶಿ ಪ್ರವಾಸಿಗರ ಭೇಟಿ
ಮೈಸೂರು ಮತ್ತು ಹಂಪಿಯಂತೆ ದಾವಣಗೆರೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳಿಲ್ಲ. ಆದರೂ ಇಲ್ಲಿಯ ಪ್ರವಾಸಿ ತಾಣಗಳು 2018ರಿಂದ 2025ರವರೆಗೆ 482 ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿವೆ. ನೂತನ ಪ್ರವಾಸೋದ್ಯಮ ನೀತಿಯಡಿ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಸಾವಿರಾರು ಸಂಖ್ಯೆಗೆ ಏರಿಸುವ ಗುರಿ ಹೊಂದಲಾಗಿದೆ. ವಿಷ್ಣು ಮತ್ತು ಶಿವನ ಸಂಯುಕ್ತ ರೂಪದ ಹರಿಹರೇಶ್ವರ ದೇವಾಲಯ ಹೆಚ್ಚಿನ ಸಂಖ್ಯೆಯ ವಿದೇಶಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. 16ನೇ ಶತಮಾನದಲ್ಲಿ ನಿರ್ಮಿಸಲಾದ ಸುಂದರ ವಾಸ್ತುಶಿಲ್ಪ ಹೊಂದಿದ ಸಂತೇಬೆನ್ನೂರು ಪುಷ್ಕರಿಣಿ ಏಷ್ಯಾದ 2ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೂಳೆಕೆರೆ ವಿದೇಶಿ ಪ್ರವಾಸಿಗರನ್ನು ಸೆಳೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.