ADVERTISEMENT

ಇನ್ನೆಷ್ಟು ಬಲಿ ಬೇಕು ಸಂಚಾರ ಅವಗಡಕ್ಕೆ?

ದುರ್ವರ್ತನೆ, ಅಶಿಸ್ತಿನ ವಿರುದ್ಧ ಕಠಿಣ ಕ್ರಮವಾಗಲಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:54 IST
Last Updated 9 ಆಗಸ್ಟ್ 2025, 4:54 IST
ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಸಾಗುವ ಟಿಪ್ಪರ್ ಕಿವಿಗಡಚಿಕ್ಕುವ ಹಾರ್ನ್‌ ಹಾಕುತ್ತ ವೇಗವಾಗಿ ಸಾಗುತ್ತವೆ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಸಾಗುವ ಟಿಪ್ಪರ್ ಕಿವಿಗಡಚಿಕ್ಕುವ ಹಾರ್ನ್‌ ಹಾಕುತ್ತ ವೇಗವಾಗಿ ಸಾಗುತ್ತವೆ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ವ್ಯಕ್ತಿಯೊಬ್ಬ ಒನ್‌ ವೇನಲ್ಲಿ ಬಂದು, ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಜಿಲ್ಲಾಧಿಕಾರಿಯವರನ್ನೇ ತರಾಟೆಗೆ ತೆಗೆದುಕೊಂಡು, ಅಗೌರವ ಸೂಚಕವಾಗಿ ಮಾತನಾಡಿದ ಘಟನೆ ನಡೆದ ನಂತರದ ಕೆಲವು ದಿನ ನಗರವನ್ನು ಸುಗಮ ಸಂಚಾರಕ್ಕೆ ಅಣಿಗೊಳಿಸುವ ಪಣತೊಟ್ಟಂತೆ ಕಂಡುಬಂದ ಪೊಲೀಸರ ದಾಳಿಗಳು ಮತ್ತೆ ಸದ್ದು ಮಾಡುತ್ತಿಲ್ಲ.

ಜೂನ್‌ 19ರಂದು ಬೆಳ್ಳಂಬೆಳಗ್ಗೆ ನಡೆದಿದ್ದ ಈ ಘಟನೆ ನಗರದ ರಸ್ತೆಗಳಲ್ಲಿ ವಾಹನ ಸವಾರರ ನಡುವೆ ನಿತ್ಯ ನಡೆಯುವ ಜಗಳಗಳ ಸ್ವರೂಪವನ್ನು ಅನಾವರಣಗೊಳಿಸಿತ್ತು.

‘ನಿತ್ಯವೂ ಅನೇಕ ಕಡೆ ಕಂಡುಬರುವ ಇಂಥ ದುರ್ವರ್ತನೆ, ಅಸಡ್ಡೆ, ದುರಹಂಕಾರಿ ಧೋರಣೆಗಳು ಜಿಲ್ಲಾಧಿಕಾರಿಯವರನ್ನೇ ಕೆಣಕಿದ್ದರಿಂದಾಗಿ ನಿಯಂತ್ರಣಕ್ಕೆ ಬರಬಹುದು, ಸಂಚಾರ ನಿಯಮ ಉಲ್ಲಂಘಿಸುತ್ತ ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತಿನ ಕಠಿಣ ಕ್ರಮಗಳು ಜರುಗಬಹುದು’ ಎಂಬ ಸಾರ್ವಜನಿಕರ ನಂಬಿಕೆ ಹುಸಿಯಾಗಿದೆ.

ADVERTISEMENT

ಅತಿಯಾದ ವೇಗದಿಂದ ಸಾಗುವವರಿಗೆ, ಅಸಡ್ಡೆಯಿಂದ ವಾಹನ ಚಾಲನೆ ಮಾಡುವವರಿಗೆ ಪೊಲೀಸರ ಭಯವೇ ಇಲ್ಲದಂಥ ಸ್ಥಿತಿ ಮುಂದುವರಿದಿದೆ. ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಯಾರೋ ಮಾಡುವ ತಪ್ಪಿಗೆ ಇನ್ಯಾರೋ ವಾಹನದಿಂದ ಬಿದ್ದು ಕೈಕಾಲು ಮುರಿದುಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ. ಇನ್ನು ಕೆಲವರಲ್ಲಿ ಶಾಶ್ವತ ಅಂಗವೈಕಲ್ಯವೂ ಕಂಡುಬಂದಿದೆ.

ಅತಿಯಾದ ವೇಗಕ್ಕೆ ನಗರದ ರಿಂಗ್‌ ರಸ್ತೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಅಪಘಾತ ನಡೆದಿದೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಜೀವವನ್ನೇ ಬಲಿ ಪಡೆದಿರುವ ಈ ಘಟನೆ ಅವರ ಮನೆಯಲ್ಲಿನ ಹಬ್ಬದ ಸಂಭ್ರಮವನ್ನೇ ಕಿತ್ತುಕೊಂಡಿದೆ.

ಹಾರ್ನ್‌ ಹಾವಳಿ:

ಟಿಪ್ಪರ್‌, ಲಾರಿಗಳಂತ ಭಾರಿ ವಾಹನಗಳು ಅತಿ ವೇಗದಿಂದ ಸಂಚರಿಸುವುದಷ್ಟೇ ಅಲ್ಲ. ಚಿಕ್ಕಪುಟ್ಟ ವಾಹನ ಸವಾರರನ್ನು ಹಿಂದಿಕ್ಕುವ ಸಾಹಸಕ್ಕಿಳಿದು, ಜೋರಾಗಿ ಹಾರ್ನ್‌ ಹೊಡೆಯುವುದೂ ಹೊಸದೇನಲ್ಲ. ಅಂಥವರನ್ನು ನಿಯಂತ್ರಿಸುವಲ್ಲಿ ಯಾವುದೇ ಕ್ರಮಗಳು ಆಗದಿರುವುದು ಬೇಸರ ಮೂಡಿಸುತ್ತಿದೆ ಎಂದು ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಧ್ಯ ವಯಸ್ಸು ದಾಟಿದವರು, ವಯಸ್ಸಾದವರು ಇಂಥ ಹಾರ್ನ್‌ ಕೇಳಿ ಬೆಚ್ಚಿಬೀಳುವಂತಾಗಿದೆ ಕೆಲವರಿಗೆ ಹೃದಯಾಘಾತ ಆದರೂ ಅಚ್ಚರಿಯಿಲ್ಲ ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣ ತಪ್ಪಿದೆ. ಸಂಬಂಧಿಸಿದವರ ವೈಫಲ್ಯ ಎದ್ದುಕಾಣುತ್ತಿದೆ’ ಎಂದು ಅವರು ದೂರಿದರು.

ಬೇತೂರು ರಸ್ತೆ, ಬಾಡಾ ಕ್ರಾಸ್‌, ಅಂಡರ್‌ ಪಾಸ್‌ಗಳ ಬಳಿ ನಿಲ್ಲುವ ಪೊಲೀಸರು ಗ್ರಾಮೀಣ ಪ್ರದೇಶದ ಬಡ ರೈತರನ್ನು, ಕೂಲಿ ಕಾರ್ಮಿಕರಿಗೆ ದಂಡ ವಿಧಿಸುತ್ತಾರೆ. ಆದರೆ, ಹೊಸ ದಾವಣಗೆರೆಯಲ್ಲಿ ಸಂಚಾರ ಠಾಣೆ ಪೊಲೀಸರೇ ಕಾಣುವುದಿಲ್ಲ. ಇದು ಭಯವೇ ಇಲ್ಲದಂಥ ಸ್ಥಿತಿಯನ್ನು ಎತ್ತಿ ತೋರುತ್ತದೆ ಎಂದು ಅವರು ಹೇಳಿದರು.

ಸಿಗ್ನಲ್‌ ಜಂಪ್‌:

ನಗರದ ವಿವಿಧ ವೃತ್ತಗಳಲ್ಲಿ ಅಳವಡಿಸಲಾಗಿರುವ ಸಂಚಾರ ಸಿಗ್ನಲ್‌ಗಳನ್ನು ಜಂಪ್‌ ಮಾಡಿಕೊಂಡು ಹೋಗುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಎಷ್ಟೋ ವಾಹನಗಳು ಗ್ರೀನ್‌ ಸಿಗ್ನಲ್‌ ಬರುವುದನ್ನೇ ಕಾಯುತ್ತ ನಿಂತರೂ ಕೆಲವರು ಯಾವುದನ್ನೂ ಲೆಕ್ಕಿಸದೇ ಎದುರು ಬರುವ ವಾಹನಕ್ಕೆ ಅಡ್ಡಿಪಡಿಸುತ್ತ ಭರ್ರನೇ ಸಾಗಿ ಹೋಗುವ ದೃಶ್ಯಗಳಿಗೂ ಬರವಿಲ್ಲ.

ಸರಾಗ ಸಂಚಾರದ ಲೆಕ್ಕಾಚಾರದಲ್ಲಿ ರಸ್ತೆ ದಾಟುವ ದಾರಿಹೋಕರಿಗೂ ಇಂಥ ಸಿಗ್ನಲ್‌ ಜಂಪರ್‌ಗಳು ಕಾಟ ಕೊಡುತ್ತಿದ್ದಾರೆ. ಇನ್ನು ಒಂದೇ ದ್ವಿಚಕ್ರ ವಾಹನದಲ್ಲಿ ಮೂವರೋ, ನಾಲ್ವರೋ ಸಂಚರಿಸುವುದಂತೂ ಈ ಊರಲ್ಲಿ ಸರ್ವೇಸಾಮಾನ್ಯ ಎಂಬಂತಾಗಿರುವುದೂ ಸಂಚಾರ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ.

ಹೆಲ್ಮೆಟ್‌ರಹಿತ ಸವಾರಿ:

ನಗರದಲ್ಲಿ ಹೆಲ್ಮೆಟ್‌ ಧರಿಸದೇ ಸವಾರಿ ನಡೆಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ದೂರುಗಳು ಮೊದಲಿನಿಂದಲೂ ಇವೆ. ಕೆಲವು ದಿನಗಳ ಹಿಂದೆ ಹಾಫ್‌ ಹೆಲ್ಮೆಟ್‌ ಕಸಿದುಕೊಳ್ಳುವ ಅಭಿಯಾನ ನಡೆದಿತ್ತು. ಕೆಲವರು ಆಗಲೇ ತರಾತುರಿಯಲ್ಲಿ ಫುಲ್‌ ಹೆಲ್ಮೆಟ್‌ ಖರೀದಿಸಿದರು. ಮತ್ತೆ ಹಾಫ್‌ ಹೆಲ್ಮೆಟ್‌ ಧರಿಸಿದವರು ರಾಜಾರೋಷವಾಗಿ ಓಡಾಡುತ್ತಲೇ ಇದ್ದಾರೆ. ಹೊಸ ಹೆಲ್ಮೆಟ್‌ಗೆ ₹ 500ರಿಂದ, ₹ 1,500 ವ್ಯಯಿಸಿದ ನಮ್ಮಂಥವರು ಪಶ್ಚಾತ್ತಾಪ ಪಡುವಂತಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸವಾರರೊಬ್ಬರು ಹೇಳಿದರು.

ಮೊಬೈಲ್‌ ಬಳಕೆ:

ಒಂದು ಕೈಯ್ಯಲಿ ಹಿಡಿದು ಅಥವಾ ಕಿವಿಯ ಬಳಿ ಮೊಬೈಲ್‌ ಸಿಕ್ಕಿಸಿಕೊಂಡು ವಾಹನ ಚಲಾಯಿಸುವವರು 10 ನಿಮಿಷ ಮುಖ್ಯರಸ್ತೆಯಲ್ಲಿ ನಿಂತು ನೋಡಿದರೆ ನೂರಾರು ಜನ ಕಾಣಸಿಗುತ್ತಾರೆ. ಇನ್ನು ಕೆಲವು ಯುವಕ– ಯುವತಿಯವರು ಇಯರ್‌ ಫೋನ್ ಬಳಸುತ್ತ ವೇಗದಿಂದಲೇ ವಾಹನ ಚಲಾಯಿಸಿ ಸಾಗುತ್ತ ಸಂಚಾರ ನಿಯಮ ಉಲ್ಲಂಘಿಸುವ ಅನೇಕ ದೃಶ್ಯಗಳೂ ಕಂಡುಬರುತ್ತವೆ.

ಚಾಲನಾ ಪರವಾನಗಿ ಪಡೆಯಲು ಅಗತ್ಯವಿರುವ 18 ವರ್ಷ ವಯಸ್ಸು ದಾಟದ ನೂರಾರು ಜನ ನಗರದಲ್ಲಿ ಸ್ಕೂಟಿ, ಬೈಕ್‌ ಓಡಿಸುತ್ತಾರೆ. ಕೆಲವೇ ಕೆಲವರಿಗೆ ಗರಿಷ್ಠ ₹ 25,000 ದಂಡ ವಿಧಿಸಲಾಗಿದ್ದರೂ ನಗರದಲ್ಲಿ ಅಪ್ರಾಪ್ತರ ಬೈಕ್‌, ಸ್ಕೂಟಿ ಚಾಲನೆ ಎಗ್ಗಿಲ್ಲದೇ ಸಾಗಿದೆ. ಪಿಯುಸಿ ಓದುವ ಹುಡುಗಿಯರಂತೂ ಮೂವರು, ನಾಲ್ವರು ಸ್ಕೂಟಿಯಲ್ಲಿ ಅತಿಯಾದ ವೇಗದಿಂದ ಸಂಚರಿಸುವುದನ್ನಂತೂ ನಿಯಂತ್ರಿಸಲು ಆಗುತ್ತಿಲ್ಲ. ಅವರ ಕಾಲೇಜಿನ ಮುಂದೆ ಹೋಗಿ ನಿಂತರೆ ದಿನನಿತ್ಯ ನೂರಾರು ಪಾಲಕರಿಗೆ ತಲಾ ₹ 25,000 ದಂಡ ವಿಧಿಸಬಹುದಾಗಿದೆ ಎಂದು ನಗರದ ಆಂಜನೇಯ ಬಡಾವಣೆಯ ನಿವಾಸಿ ಶ್ರೀನಿವಾಸಮೂರ್ತಿ ಸಲಹೆ ನೀಡುತ್ತಾರೆ.

ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಸಾಗುವ ಟಿಪ್ಪರ್ ಕಿವಿಗಡಚಿಕ್ಕುವ ಹಾರ್ನ್‌ ಹಾಕುತ್ತ ವೇಗವಾಗಿ ಸಾಗುತ್ತವೆ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.