ADVERTISEMENT

ದಾವಣಗೆರೆ ವಿ.ವಿ 6ನೇ ಘಟಿಕೋತ್ಸವ 30ರಂದು: ಸಾಧನೆಯಲ್ಲಿ ಮಹಿಳೆಯರ ಮೇಲುಗೈ

ಡಾ. ಎಸ್‌.ಎಂ. ಎಲಿಗೆ ಗೌರವ ಡಾಕ್ಟರೇಟ್‌ * 13 ಜನರಿಗೆ ಪಿಎಚ್‌ಡಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 14:39 IST
Last Updated 29 ಜನವರಿ 2019, 14:39 IST
ಪ್ರೊ. ಎಸ್‌.ವಿ. ಹಲಸೆ
ಪ್ರೊ. ಎಸ್‌.ವಿ. ಹಲಸೆ   

ದಾವಣಗೆರೆ: ಇಲ್ಲಿನ ತೋಣಹುಣಸೆಯ ಶಿವಗಂಗೋತ್ರಿ ಕ್ಯಾಂಪಸ್‌ನಲ್ಲಿ ಬುಧವಾರ (ಜ.30) ಬೆಳಿಗ್ಗೆ 11ಕ್ಕೆ ನಡೆಯಲಿರುವ ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ನಗರದ ‘ಬಡವರ ವೈದ್ಯ’ ಎಂದೇ ಖ್ಯಾತರಾಗಿರುವ ಡಾ. ಎಸ್‌.ಎಂ. ಎಲಿ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಕುಲಪತಿ ಪ್ರೊ. ಎಸ್‌.ವಿ. ಹಲಸೆ ಪ್ರಕಟಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವ ಕುರಿತು ಮಾಹಿತಿ ನೀಡಿದ ಅವರು, ‘ಪ್ರಸಕ್ತ ಸಾಲಿನಲ್ಲಿ 13 ವಿದ್ಯಾರ್ಥಿಗಳಿಗೆ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಎಸ್‌.ಎ, ಬಿ.ಎಸ್‌. ಡಬ್ಲ್ಯು, ಬಿ.ಎಫ್‌.ಡಿ, ಬಿ.ವಿ.ಎ, ಬಿ.ಇಡಿ ಹಾಗೂ ಬಿ.ಪಿ.ಇಡಿ ಪದವಿಗಳಲ್ಲಿ 2017–18ನೇ ಸಾಲಿನಲ್ಲಿ 6,443 ವಿದ್ಯಾರ್ಥಿನಿಯರು ಹಾಗೂ 4,205 ವಿದ್ಯಾರ್ಥಿಗಳು ಸೇರಿ ಒಟ್ಟು 10,648 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ’ ಎಂದರು.

‘ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ ಪದವಿಗಳಲ್ಲಿ 2017–18ನೇ ಸಾಲಿನಲ್ಲಿ 1,184 ವಿದ್ಯಾರ್ಥಿನಿಯರು ಹಾಗೂ 711 ವಿದ್ಯಾರ್ಥಿಗಳು ಸೇರಿ ಒಟ್ಟು 1,985 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಒಟ್ಟು 62 ಚಿನ್ನದ ಪದಕಗಳನ್ನು ಇಡಲಾಗಿದೆ. 24 ವಿದ್ಯಾರ್ಥಿನಿಯರು ಹಾಗೂ 8 ವಿದ್ಯಾರ್ಥಿಗಳು ಸೇರಿ ಒಟ್ಟು 32 ವಿದ್ಯಾರ್ಥಿಗಳು 62 ಪದಕಗಳನ್ನು ಹಂಚಿಕೊಂಡಿದ್ದಾರೆ. ಅತಿ ಹೆಚ್ಚು ಅಂಕ ಪಡೆದಿರುವ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಕೆ.ಸಿ. ತೇಜಸ್ವಿನಿ 6 ಪದಕಗಳನ್ನು ಪಡೆದು, ಮೊದಲ ಸ್ಥಾನದಲ್ಲಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘2017–18ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ಶೇ 44.92 ಫಲಿತಾಂಶ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 89.09 ಫಲಿತಾಂಶ ಬಂದಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿಗೆ ಪ್ರವೇಶ ಪಡೆಯುತ್ತಿರುವುದರಿಂದ ಫಲಿತಾಂಶದಲ್ಲೂ ಅವರೇ ಮುಂದಿದ್ದಾರೆ’ ಎಂದು ಕುಲಪತಿ ಅಭಿಪ್ರಾಯಪಟ್ಟರು.

‘ಗೌರವ ಡಾಕ್ಟರೇಟ್‌ ಪದವಿ ನೀಡಲು ಮೂವರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್‌ ನೀಡಲು ಅವಕಾಶ ಕಲ್ಪಿಸಿದ್ದರಿಂದ ಅಂತಿಮವಾಗಿ ಡಾ. ಎಸ್‌.ಎಂ. ಎಲಿ ಅವರನ್ನು ಆಯ್ಕೆ ಮಾಡಲಾಯಿತು’ ಎಂದ ಅವರು, ‘ಅನ್ಯ ಕಾರ್ಯನಿಮಿತ್ತ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆಯ ನಿರ್ದೇಶಕ ಪ್ರೊ. ಎಸ್‌.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪದವಿ ಫಲಿತಾಂಶ ಬಹಳ ಕಡಿಮೆ ಇರುವ ಬಗ್ಗೆ ಗಮನ ಸೆಳೆದಾಗ, ‘ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸುಮಾರು 70 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಂತಿಮ ವರ್ಷದಲ್ಲಿ 23 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಸುಮಾರು 10 ಸಾವಿರ ಮಾತ್ರ ಉತ್ತೀರ್ಣರಾಗಿದ್ದಾರೆ. ಮೂರು ವರ್ಷಗಳ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಪದವಿ ನೀಡಲಾಗುತ್ತಿರುವುದರಿಂದ ಸಹಜವಾಗಿಯೇ ಈ ಸಂಖ್ಯೆ ಕಡಿಮೆಯಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ಗಂಭೀರವಾಗಿ ಓದುವುದರಿಂದ ಉತ್ತೀರ್ಣ ಪ್ರಮಾಣ ಹೆಚ್ಚಿದೆ. ಈಚೆಗೆ ಕಾಲೇಜು ಪ್ರಾಂಶುಪಾಲರ ಜೊತೆಗೆ ನಡೆದ ಸಭೆಯಲ್ಲಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಕುಲಸಚಿವ ಪ್ರೊ. ಪಿ. ಕಣ್ಣನ್‌, ಪರೀಕ್ಷಾಂಗ ಕುಲಸಚಿವ ಪ್ರೊ. ಬಸವರಾಜ ಬಣಕಾರ, ಹಣಕಾಸು ಅಧಿಕಾರಿ ಜೆ.ಕೆ. ರಾಜು, ಕಲಾ ವಿಭಾಗದ ಡೀನ್‌ ಡಾ. ಬಿ.ಪಿ. ವೀರಭದ್ರಪ್ಪ, ವಾಣಿಜ್ಯ ವಿಭಾಗದ ಡೀನ್‌ ಡಾ. ಪಿ. ಲಕ್ಷ್ಮಣ್‌, ವಿಜ್ಞಾನ ವಿಭಾಗದ ಡೀನ್‌ ಡಾ. ಗಾಯತ್ರಿ ದೇವರಾಜ್‌ ಹಾಜರಿದ್ದರು.

ನೇಮಕಾತಿಗೆ ತಾತ್ಕಾಲಿಕ ತಡೆ

‘ವಿಶ್ವವಿದ್ಯಾಲಯಕ್ಕೆ ಮಂಜೂರಾಗಿದ್ದ 114 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಪರೀಕ್ಷೆ ನಡೆಸಲಾಗಿತ್ತು. ಆದರೆ, ನೇರ ನೇಮಕಾತಿಯನ್ನು ತಾತ್ಕಾಲಿಕವಾಗಿ ಮಾಡಿಕೊಳ್ಳದಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಬಂದಿರುವುದರಿಂದ ಸದ್ಯಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದೇವೆ. ಸರ್ಕಾರ ಅನುಮತಿ ನೀಡಿದ ಬಳಿಕ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಪ್ರೊ. ಎಸ್‌.ವಿ. ಹಲಸೆ ಸ್ಪಷ್ಟಪಡಿಸಿದರು.

‘2017ರ ಜುಲೈ 17ರ ಸರ್ಕಾರಿ ಆದೇಶದಂತೆ ಕುವೆಂಪು ವಿಶ್ವವಿದ್ಯಾಲಯ, ಮಹಿಳಾ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ದಾವಣಗೆರೆ ಹಾಗೂ ಧಾರವಾಡ ವಿಶ್ವವಿದ್ಯಾಲಯಗಳಲ್ಲೂ ಅದೇ ರೀತಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವಾಗ ನಿಲ್ಲಿಸುವಂತೆ ಆದೇಶ ಬಂದಿದೆ’ ಎಂದು ಹೇಳಿದರು.

‘371 ಜೆ’ ಕಲಂ ಅಡಿ ನಿಗದಿಯಾಗಿದ್ದ 14 ಹುದ್ದೆಗಳ ಪೈಕಿ ಎಂಟಕ್ಕೆ ನೇಮಕಾತಿ ಆದೇಶ ನೀಡಲಾಗಿತ್ತು. ಅವುಗಳ ಪೈಕಿ ಒಬ್ಬರು ಕೆಲಸಕ್ಕೆ ಹಾಜರಾಗಿಲ್ಲ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.