ADVERTISEMENT

20ಕ್ಕೆ ಅಗಸನಹಳ್ಳಿ ಗ್ರಾಮದಲ್ಲಿ ಡಿಸಿ, ಸಿಇಒ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 4:24 IST
Last Updated 17 ಫೆಬ್ರುವರಿ 2021, 4:24 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಜಗಳೂರು ತಾಲ್ಲೂಕಿನ ಸೊಕ್ಕೆ ಹೋಬಳಿಯ ಅಗಸನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಕಂದಾಯ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಫೆ.20ರಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

‘ಅಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಅಗಸನಹಳ್ಳಿಗೆ ತಲುಪಲಿದ್ದೇವೆ. ಗ್ರಾಮವನ್ನು ಪ್ರದಕ್ಷಿಣೆ ಮಾಡಿ ಎಲ್ಲ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತೇವೆ. ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುತ್ತೇವೆ. ಆಧಾರ್‌ ಕಾರ್ಡ್‌ ದೋಷ, ಪಡಿತರ ಚೀಟಿ ವ್ಯತ್ಯಾಸ, ಪೌತಿ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ ಎಲ್ಲ ಮಾಡಿಕೊಡಲಾಗುವುದು. ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಂಚಣಿ ಸೌಲಭ್ಯ, ವೃದ್ಧಾಪ್ಯ ವೇತನ ಸೌಲಭ್ಯಗಳು ಅರ್ಹರಿಗೆ ಸಿಗದೇ ಇದ್ದರೆ ನೀಡುವ ವ್ಯವಸ್ಥೆ ಮಾಡಲಾಗುವುದು. ಪ್ರವಾಹ, ಬರ ಪರಿಹಾರದ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸಣ್ಣ ಸಣ್ಣ ವಿಚಾರಕ್ಕೂ ಜನರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವಂತಾಗಬಾರದು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಫೆ.20ರಂದು ರಾತ್ರಿ ಕೂಡ ಅಲ್ಲಿಯೇ ಉಳಿಯುತ್ತೇವೆ. ಮರುದಿನ ಬೆಳಿಗ್ಗೆ ವಾಪಸ್ಸಾಗಲಿದ್ದೇವೆ’ ಎಂದು ವಿವರಿಸಿದರು.

ADVERTISEMENT

ಸಾರ್ವಜನಿಕರು ಈ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕಂದಾಯ ಇಲಾಖೆಯ ವಿವಿಧ ಸೇವೆಗಳು, ಯೋಜನೆಗಳ ದೋಷಗಳನ್ನು ಸರಿಪಡಿಸಿಕೊಳ್ಳಲು ತಿದ್ದುಪಡಿ ಮಾಡಿಕೊಳ್ಳಲು, ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಈಗಾಗಲೇ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಅಲ್ಲಿ ಇತ್ಯರ್ಥಪಡಿಸಲಾಗುವುದು ಎಂದರು.

ವಿವಿಧೆಡೆ ಗ್ರಾಮ ವಾಸ್ತವ್ಯ: ಸರ್ಕಾರದ ಸೂಚನೆಯಂತೆ ಅದೇ ದಿನ ಉಳಿದ ತಾಲ್ಲೂಕುಗಳಲ್ಲಿ ತಹಶೀಲ್ದಾರರು ಹಾಗೂ ತಾಲ್ಲೂಕು ಮಟ್ಟದ ಇತರೆ ಅಧಿಕಾರಿಗಳು ವಿವಿಧೆಡೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿಯ ಅತ್ತಿಗೆರೆ ಗ್ರಾಮ, ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿಯ ನಿಟ್ಟೂರು ಗ್ರಾಮ, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ-2 ಹೋಬಳಿಯ ಕೂಲಂಬಿ ಗ್ರಾಮ, ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ದುರ್ವಿಗೆರೆ ಗ್ರಾಮ, ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಚಿನ್ನಿಕಟ್ಟಿ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.