ADVERTISEMENT

ದಾವಣಗೆರೆ | ‘ಡಿಸಿಸಿ ಬ್ಯಾಂಕ್‌ಗೆ ₹1.33 ಕೋಟಿ ಲಾಭ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 6:41 IST
Last Updated 13 ಸೆಪ್ಟೆಂಬರ್ 2023, 6:41 IST
ದಾವಣಗೆರೆ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಬಿ.ಹಾಲೇಶಪ್ಪ ಉದ್ಘಾಟಿಸಿದರು.
ದಾವಣಗೆರೆ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಬಿ.ಹಾಲೇಶಪ್ಪ ಉದ್ಘಾಟಿಸಿದರು.   

ದಾವಣಗೆರೆ: ‘ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.33 ಕೋಟಿ ಲಾಭಗಳಿಸಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಬಿ. ಹಾಲೇಶಪ್ಪ ಹೇಳಿದರು.

ಬ್ಯಾಂಕ್‌ನ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ‘ಜಿಲ್ಲೆಯ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ರೈತರಿಗೆ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲ ನೀಡಲಾಗಿದೆ. ಪ್ರತಿ ಸಂಘಕ್ಕೂ ಹೊಸ ಹಾಗೂ ಹೆಚ್ಚುವರಿ ಕೃಷಿ ಸಾಲವೂ ಸೇರಿ ₹3.75 ಕೋಟಿಗೂ ಅಧಿಕ ಕೃಷಿ ಸಾಲ ನೀಡಲಾಗಿದೆ’ ಎಂದರು.  

‘ರಾಜ್ಯ ಸರ್ಕಾರದ ಸೂಚನೆಯಂತೆ ₹ 784 ಕೋಟಿಗಳ ಅಲ್ಪಾವಧಿ ಹಾಗೂ ಮಧ್ಯಮಾವಧಿ ಕೃಷಿ ಸಾಲ ನೀಡುವ ಗುರಿ ಇದ್ದು, ಅದರಂತೆ ಇತ್ತೀಚಿನವರೆಗೆ ಒಟ್ಟಾರೆ 34,538 ರೈತ ಸದಸ್ಯರಿಗೆ ₹256.99 ಕೋಟಿ ಕೆಸಿಸಿ ಹಾಗೂ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದ್ದು, ಈ ಪೈಕಿ ₹20.88 ಕೋಟಿಯನ್ನು ಹೊಸ ಸದಸ್ಯರಿಗೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕುಕ್ಕುವಾಡದ ದಾವಣಗೆರೆ ಶುಗರ್, ಶಾಮನೂರು, ದುಗ್ಗಾವತಿ ಶುಗರ್ ಕಾರ್ಖಾನೆಗಳು ಬ್ಯಾಂಕಿನಲ್ಲಿ ವ್ಯವಹರಿಸುತ್ತಿರುವುದರಿಂದ ಬ್ಯಾಂಕ್‌ಗೆ ಸಾಕಷ್ಟು ಅನುಕೂಲವಾಗಿದೆ’ ಎಂದು ಅಧ್ಯಕ್ಷ ಹಾಲೇಶಪ್ಪ ಹೇಳಿದರು.

ಏಳು ಹೊಸ ಶಾಖೆ:

‘ಬಾಡ, ಶಾಮನೂರು, ಪಲ್ಲಾಗಟ್ಟೆ, ಬಿಳಿಚೋಡು, ಪಾಂಡೋಮಟ್ಟಿ, ಹೊಳೆಸಿರಿಗೆರೆ, ಕುಂದೂರುಗಳಲ್ಲಿ ಡಿಸಿಸಿ ಬ್ಯಾಂಕ್‌ನ ಹೊಸ ಶಾಖೆ ಪ್ರಾರಂಭಿಸಲಾಗಿದೆ’ ಎಂದರು.

ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರಾದ ಉಪಾಧ್ಯಕ್ಷ ಬಿ.ಶೇಖರಪ್ಪ, ನಿರ್ದೇಶಕರಾದ ಡಾ.ಜೆ.ಆರ್.ಷಣ್ಮುಖಪ್ಪ, ಜೆ.ಎಸ್. ವೇಣುಗೋಪಾಲರೆಡ್ಡಿ, ಕೆ.ಎಚ್. ಷಣ್ಮುಖಪ್ಪ, ಜಗದೀಶಪ್ಪ ಬಣಕಾರ್, ಆರ್.ಜಿ. ಶ್ರೀನಿವಾಸಮೂರ್ತಿ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಎಚ್.ಕೆ. ಪಾಲಾಕ್ಷಪ್ಪ, ವೃತ್ತಿಪರ ನಿರ್ದೇಶಕ ಜಿ. ಮುರುಗೇಂದ್ರಪ್ಪ, ಎಚ್. ದಿವಾಕರ್, ಸಹಕಾರ ಸಂಘಗಳ ಉಪನಿಬಂಧಕಿ ಎಚ್.ಅನ್ನಪೂರ್ಣ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎನ್. ನಂಜುಂಡೇಗೌಡ, ಮ್ಯಾನೇಜರ್ ತ್ಯಾವರ್‌ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.