ADVERTISEMENT

ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲಿ

ಪೊಲೀಸರ ಕುರಿತ ಹೇಳಿಕೆಗೆ ದಿನೇಶ ಶೆಟ್ಟಿ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 12:27 IST
Last Updated 2 ಅಕ್ಟೋಬರ್ 2019, 12:27 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ದಾವಣಗೆರೆ: ‘ಪೊಲೀಸರನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸುವ ತಾಕತ್ತು ಕಾರ್ಯಕರ್ತರಿಗಿದೆ’ ಎಂದು ಹೇಳಿಕೆ ನೀಡುವ ಮೂಲಕ ಪೊಲೀಸರ ಗೌರವ ಹಾಗೂ ಆತ್ಮಸ್ಥೈರ್ಯವನ್ನು ಕುಗ್ಗಿಸಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಒತ್ತಾಯಿಸಿದರು.

‘ರೇಣುಕಾಚಾರ್ಯ ಅವರಿಗೆ ಅಧಿಕಾರದ ಅಮಲು ನೆತ್ತಿಗೇರಿದೆ. ಕಾನೂನು ಕೈಗೆತ್ತಿಕೊಂಡರೆ ರಾಜ್ಯದಲ್ಲಿ ಅರಾಜಕತೆ ತಲೆದೋರುತ್ತದೆ. ಪೊಲೀಸರಿಗೂ ಅವರದ್ದೇ ಆದ ಆತ್ಮಗೌರವ ಇದೆ. ಇಡೀ ಪೊಲೀಸ್‌ ಸಮುದಾಯವನ್ನು ಅವಮಾನಿಸಿರುವುದು ಖಂಡನೀಯ. ರೇಣುಕಾಚಾರ್ಯರ ವಿರುದ್ಧ ಡಿಜಿಪಿಗೆ ದೂರು ನೀಡಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ರೇಣುಕಾಚಾರ್ಯರ ‘ಲೀಲೆ’ ಜನರಿಗೆ ಗೊತ್ತಿದೆ. ಅವರೊಬ್ಬ ಹಾಸ್ಯಾಸ್ಪದ ನಾಯಕ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಿ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ’ ಎಂದು ಟೀಕಿಸಿದ ದಿನೇಶ್‌ ಶೆಟ್ಟಿ, ‘ರೇಣುಕಾಚಾರ್ಯರನ್ನು ತೆಗೆದುಹಾಕಬೇಕು. ಹಿರಿಯರಾದ ಎಸ್‌.ಎ. ರವೀಂದ್ರನಾಥ ಇಲ್ಲವೇ ಮಾಡಾಳ ವಿರೂಪಾಕ್ಷಪ್ಪ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳಲಿ’ ಎಂದು ಸಲಹೆ ನೀಡಿದರು.

ADVERTISEMENT

ಮುಖಂಡರಾದ ಎ. ನಾಗರಾಜ್‌, ಯೋಗರಾಜ್‌, ಮುಜಾಹಿದ್‌ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

**

ಹೇಳಿಕೆಗೆ ಬದ್ಧ: ರೇಣುಕಾಚಾರ್ಯ

‘ಈ ಹಿಂದೆ ಕೆಲವರ ಏಜೆಂಟರಂತೆ ಕೆಲಸ ಮಾಡಿ ಪಕ್ಷದ ಕಾರ್ಯಕರ್ತರನ್ನು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿದ್ದ ಪೊಲೀಸರನ್ನು ಉದ್ದೇಶಿಸಿ ಒಂಟಿ ಕಾಲಿನ ಮೇಲೆ ನಿಲ್ಲಿಸುವ ಶಕ್ತಿ ಇದೆ ಎಂದು ಹೇಳಿದ್ದೆ. ನನ್ನ ಈ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ಜಿಲ್ಲೆಯಲ್ಲಿ ಡಿಸಿ, ಸಿಇಒ ಹಾಗೂ ಎಸ್‌ಪಿ ಗುಲಾಮರಂತೆ ಕೆಲಸ ಮಾಡುತ್ತಿದ್ದರು. ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಈಗಿನ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಹೇಳಿದರು.

‘ಸೇಡಿನ ರಾಜಕಾರಣ ಮಾಡುವುದಿಲ್ಲ. ಆದರೆ, ಪಕ್ಷದ ಕಾರ್ಯಕರ್ತರಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ ಸಹಿಸುವುದಿಲ್ಲ’ ಎಂದು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.