ಸಾಸ್ವೆಹಳ್ಳಿ: ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಈ ಹಿಂದಿನ ಕಾರ್ಯದರ್ಶಿ ರಾಮನ ಗೌಡ ಅವರು ಗ್ರಾಮದ ಶಿವನಗೌಡ ಎಂಬವರಿಗೆ ಶಾಲೆಗೆ ಸೇರಿದ ಜಾಗವನ್ನೂ ಸೇರಿಸಿ ಹೆಚ್ಚುವರಿ ಜಾಗಕ್ಕೆ ಇ–ಸ್ವತ್ತು ನೀಡಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿಗೆ ದೂರು ನೀಡಿದ್ದಾರೆ.
ದೂರುದಾರ ಬಿ.ವೈ ಪರಮೇಶ್ವರಪ್ಪ ಮಾತನಾಡಿ, ಬೀರಗೊಂಡನಹಳ್ಳಿ ಶಾಲಾ ಕಾಂಪೌಂಡ್ ಒಳಗೆ ತಿಪ್ಪೆಗಳು, ಕಸ, ಕಲ್ಲು, ಮಣ್ಣು, ಹುಲ್ಲಿನ ಬಣವೆ ರಾಶಿಯನ್ನು ಹಾಕಿಕೊಂಡಿದ್ದರು.ಶಿವನಗೌಡ ಎಂಬುವವರು ಶಾಲಾ ಕಾಂಪೌಂಡ್ ಒತ್ತುವರಿ ಮಾಡಿ ಅದಕ್ಕೆ ಹೊಂದಿಕೊಂಡಂತೆ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದರು. ಅಧಿಕಾರಿಗಳು ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ತಿಪ್ಪೆಗಳನ್ನು ಹಾಗೂ ಕಲ್ಲಿನ ರಾಶಿಯನ್ನು ತೆರವುಗೊಳಿಸಿ ಶಾಲಾ ಮೈದಾನವನ್ನು ಸ್ವಚ್ಛಗೊಳಿಸಿದ್ದರು ಎಂದರು.
ಆದರೆ ಶಾಲಾ ಕಾಂಪೌಂಡ್ ಅತಿಕ್ರಮಿಸಿದವರ ವಿರುದ್ಧ ಯಾವುದೆ ಕ್ರಮ ಕೈಗೊಂಡಿಲ್ಲ. ಹಳೆಯ ದಾಖಲೆಗಳನ್ನು ಪರಿಶೀಲಿಸಿ, ದಾಖಲೆ ತಿದ್ದೀರುವ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ಸಾರ್ವಜನಿಕ ಆಸ್ತಿಯನ್ನು ಉಳಿಸ ಬೇಕು ಎಂದು ಹೊನ್ನಾಳಿ ತಾಲ್ಲೂಕುವ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.
ಗ್ರಾಮಸ್ಥರಾದ ಎಂ. ಕಿರಣ್ ಕುಮಾರ್, ಕೆ.ನಾಗರಾಜ್, ಮಳಲಿ ಹನುಮಂತಪ್ಪ, ಹರಮಘಟ್ಟ ರಮೇಶಣ್ಣ, ಟಿ.ಬಿ ಗಣೇಶಪ್ಪ, ಗುರುಬಸಪ್ಪ ಗೌಡ ಉಪಸ್ಥಿತರಿದ್ದರು.
ಬೀರಗೊಂಡನಹಳ್ಳಿಯಲ್ಲಿ ಕಾರ್ಯ ನಿರ್ವಹಿಸಿ, ದಾಖಲೆ ತಿದ್ದುಪಡಿ ಮಾಡಿದ್ದ ಅಲ್ಲಿನ ಹಿಂದಿನ ಕಾರ್ಯದರ್ಶಿ ರಾಮನ ಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್ ಎಂ. ಆರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.