ADVERTISEMENT

ದಾವಣಗೆರೆ: ಮತ್ತೆ ಎದ್ದಿದೆ ‘ರಾಷ್ಟ್ರಕವಿ’ ಅಭಿದಾನದ ಕೂಗು

ಕನ್ನಡದ ಶ್ರೇಷ್ಠ ಕವಿ ಗುರುತಿಸಿ, ಗೌರವಿಸುವುದಕ್ಕೆ ತಡೆ ಸಲ್ಲದು ಎಂಬ ಅಭಿಯಾನ ಆರಂಭ

ಬಾಲಕೃಷ್ಣ ಪಿ.ಎಚ್‌
Published 1 ನವೆಂಬರ್ 2020, 2:23 IST
Last Updated 1 ನವೆಂಬರ್ 2020, 2:23 IST
ರಾಷ್ಟ್ರಕವಿ ಅಭಿದಾನ ನೀಡುವುದನ್ನು ಮುಂದುವರಿಸಬೇಕು ಎಂದು ಯುವಲೇಖಕರಾದ ಸಂತೇಬೆನ್ನೂರು ಫೈಜ್ನಟ್ರಾಜ್ ಹಾಗೂ ಎಲ್.ಜಿ ಮಧುಕುಮಾರ್ ಬಸವಾಪಟ್ಟಣ ಅವರು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು
ರಾಷ್ಟ್ರಕವಿ ಅಭಿದಾನ ನೀಡುವುದನ್ನು ಮುಂದುವರಿಸಬೇಕು ಎಂದು ಯುವಲೇಖಕರಾದ ಸಂತೇಬೆನ್ನೂರು ಫೈಜ್ನಟ್ರಾಜ್ ಹಾಗೂ ಎಲ್.ಜಿ ಮಧುಕುಮಾರ್ ಬಸವಾಪಟ್ಟಣ ಅವರು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು   

ದಾವಣಗೆರೆ: ಜೀವಂತ ಇರುವ ಕನ್ನಡದ ಶ್ರೇಷ್ಠ ಕವಿಯೊಬ್ಬರನ್ನು ಗುರುತಿಸಿ ಅವರಿಗೆ ‘ರಾಷ್ಟ್ರಕವಿ’ ಅಭಿದಾನವನ್ನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ನಿಲ್ಲಿಸಿದೆ. ಈ ಪ್ರಕ್ರಿಯೆ ಮತ್ತೆ ಆರಂಭಗೊಳ್ಳಬೇಕು ಎಂಬ ಅಭಿಯಾನ ಈಗ ಹುಟ್ಟಿಕೊಂಡಿದೆ.

ಗೋವಿಂದ ಪೈ ಅವರನ್ನು ರಾಷ್ಟ್ರಕವಿ ಎಂದು ಮೊದಲ ಬಾರಿಗೆ 1949ರಲ್ಲಿ ಗುರುತಿಸಲಾಗಿತ್ತು. ಆಗ ದಕ್ಷಿಣ ಕನ್ನಡವು ಮದ್ರಾಸ್‌ ಸರ್ಕಾರದ ಅಡಿಯಲ್ಲಿ ಇತ್ತು. 1956ರಲ್ಲಿ ಏಕೀಕರಣಗೊಂಡಾಗ ದಕ್ಷಿಣ ಕನ್ನಡ ಮೈಸೂರು ರಾಜ್ಯಕ್ಕೆ ಸೇರಿತ್ತು.

ಒಮ್ಮೆ ಈ ಅಭಿದಾನವನ್ನು ನೀಡಿದ ಮೇಲೆ ಅವರು ಜೀವಂತ ಇರುವವರೆಗೆ ಮತ್ತೊಬ್ಬರಿಗೆ ನೀಡಲಾಗುವುದಿಲ್ಲ. 1963ರಲ್ಲಿ ಗೋವಿಂದ ಪೈ ನಿಧನರಾದರು. ಒಂದು ವರ್ಷದ ಬಳಿಕ 1964ರಲ್ಲಿ ಕುವೆಂಪು ಅವರನ್ನು ಮೈಸೂರು ರಾಜ್ಯ ಸರ್ಕಾರ (ಈಗ ಕರ್ನಾಟಕ ಸರ್ಕಾರ) ರಾಷ್ಟ್ರಕವಿ ಎಂದು ಗುರುತಿಸಿ ಗೌರವಿಸಿತು.

ADVERTISEMENT

1994ರಲ್ಲಿ ಕುವೆಂಪು ನಿಧನರಾದರು. ಅಲ್ಲಿಂದ 12 ವರ್ಷಗಳ ಕಾಲ ಯಾರನ್ನೂ ರಾಷ್ಟ್ರಕವಿ ಎಂದು ಗುರುತಿಸುವ ಕಾರ್ಯ ನಡೆಯಲಿಲ್ಲ. 2006ರಲ್ಲಿ ಜಿ.ಎಸ್‌. ಶಿವರುದ್ರಪ್ಪ ಅವರಿಗೆ ಈ ಅಭಿದಾನವನ್ನು ನೀಡಲಾಯಿತು. 2013ರಲ್ಲಿ ಅವರು ನಿಧನರಾದರು.

ಜಿಎಸ್‌ಎಸ್‌ ನಿಧನರಾದ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಷ್ಟ್ರಕವಿ ಆಯ್ಕೆಗಾಗಿ ಕೋ ಚೆನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿಯು ರಾಷ್ಟ್ರಕವಿ ಸ್ಥಾನಮಾನವೇ ಅಪ್ರಸ್ತುತ. ಅದು ರಾಜ ಪ್ರಭುತ್ವದ ಪಳೆಯುಳಿಕೆ ಎಂದು ವರದಿ ನೀಡಿತ್ತು. ಆಗ ಹಲವು ಸಾಹಿತಿಗಳು ಇದರ ಪರ ಮತ್ತು ವಿರೋಧ ಹೇಳಿಕೆಗಳನ್ನು ನೀಡಿದ್ದರು. ಆಮೇಲೆ ನನೆಗುದಿಗೆ ಬಿದ್ದಿದೆ.

‘ರಾಷ್ಟ್ರಕವಿ ಅಂದರೆ ರಾಷ್ಟ್ರೀಯ ಕವಿ ಅಂತಲ್ಲ. ಕನ್ನಡದ ರಾಷ್ಟ್ರಕವಿ. ಒಬ್ಬ ಶ್ರೇಷ್ಠ ಕವಿಗೆ ಸಲ್ಲಿಸುವ ಗೌರವ
ವಿದು. ಕನ್ನಡದ ಹಿರಿಮೆಯನ್ನು ಸಾರುವ ಕೆಲಸ ಇದು. ಹೀಗಾಗಿ ರಾಷ್ಟ್ರಕವಿ ಅಭಿದಾನವನ್ನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು’ ಎಂದು ಎಲ್.ಜಿ ಮಧುಕುಮಾರ್ ಬಸವಾಪಟ್ಟಣ, ಸಂತೇಬೆನ್ನೂರು ಫೈಜ್ನಟ್ರಾಜ್, ದಾವಣಗೆರೆಯ ಜಿ.ಮುದ್ದುವೀರಸ್ವಾಮಿ ಮುಂತಾದ ಯುವಲೇಖಕರು ಅಭಿಯಾನ ಆರಂಭಿಸಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕನ್ನಡದ ಶ್ರೇಷ್ಠ ಕವಿಯನ್ನು
ಗುರುತಿಸಿ ಸಲ್ಲಿಸುವ ಗೌರವಕ್ಕೆ ತಡೆ ಸಲ್ಲದು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.