ದಾವಣಗೆರೆ: ನಗರವನ್ನು ಹಳೆ ದಾವಣಗೆರೆ, ಹೊಸ ದಾವಣಗೆರೆಯನ್ನಾಗಿ ಬೇರೆಯಾಗಿಸಿ ತಾರತಮ್ಯ ಮಾಡಲಾಗುತ್ತಿದೆ. ಹಳೆ ದಾವಣಗೆರೆಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ್ ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಾಗಿ 20 ವರ್ಷ ಕಳೆದರೂ ನಗರ ಸಮರ್ಪಕವಾಗಿ ಅಭಿವೃದ್ಧಿ ಕಂಡಿಲ್ಲ. ಹಳೆ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಎರಡು ವರ್ಷಗಳಿಂದ ಹಳೆ ಭಾಗದ ಅಭಿವೃದ್ಧಿಗೆ ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.
‘ಹಳೆ ಭಾಗಕ್ಕೆ ದಾವಣಗೆರೆ ಒನ್ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಪಾಲಿಕೆಗೆ ಮನವಿ ಸಲ್ಲಿಸಿದ್ದೆವು. ಆದರೂ ಇದುವರೆಗೆ ಕೇಂದ್ರ ಸ್ಥಾಪಿಸಿಲ್ಲ. ರಿಂಗ್ ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ಹೋರಾಟ ಮಾಡಿದರೂ ಪಾಲಿಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ಹಳೆ ಭಾಗದಲ್ಲಿ ಸಮರ್ಪಕ ರಸ್ತೆ, ಚರಂಡಿ, ನೀರಿನ ಸೌಲಭ್ಯ ಇಲ್ಲ’ ಎಂದು ಅವರು ಆರೋಪಿಸಿದರು.
‘ಆರ್‌ಟಿಇ ಕಚೇರಿಯಿಂದ ಅಕ್ತರ್ ರಜಾ ಸರ್ಕಲ್‌ವರೆಗೆ ರಿಂಗ್ ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ರಸ್ತೆತಡೆ ಮಾಡುತ್ತೇವೆ. ಹಳೆ ಭಾಗದ ಎಲ್ಲ ವಾರ್ಡ್‌ಗಳ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ ರಚಿಸಬೇಕು. ಮೂರು ತಿಂಗಳಿಗೊಮ್ಮೆ ಸಾರ್ವಜನಿಕರ ಸಭೆ ಕರೆದು ಕುಂದುಕೊರತೆ ಆಲಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.
ಆಮ್ ಆದ್ಮಿ ಪಾರ್ಟಿಯ ಸಹ ಸಂಚಾಲಕ ಆದಿಲ್ ಖಾನ್ ಎಸ್.ಕೆ., ‘ಹಳೆ ಭಾಗದ ಪ್ರತಿ ವಾರ್ಡ್‌ಗೆ ಭೇಟಿ ನೀಡಿ ಸಮಸ್ಯೆ ಗುರುತಿಸಿ ಪಟ್ಟಿ ಮಾಡಲಾಗುವುದು. ವಾರ್ಡ್ ಸದಸ್ಯರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ. ಸ್ಪಂದಿಸದಿದ್ದರೆ ಸದಸ್ಯರ ಮನೆ ಎದುರು ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ವಾರ್ಡ್ ನಿವಾಸಿಗಳು ಸಮಸ್ಯೆ ತಿಳಿಸಲು 8880240432, 7406331046ಗೆ ಕರೆ ಮಾಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸೋಷಿಯಲ್ ಸರ್ವೀಸ್ ಸಂಘಟನೆಯ ಮಹ್ಮದ್ ಹಯಾತ್, ಟಿಪ್ಪು ಟ್ರಸ್ಟ್‌ನ ಮೆಹಬೂಬ್ ಬಾಷಾ, ಅಣ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.