ADVERTISEMENT

ದಾವಣಗೆರೆ | ಬೀಡಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಆಗ್ರಹ

ಕಾರ್ಮಿಕ ಆಯುಕ್ತ ಎಚ್.ಎನ್. ಗೋಪಾಲಕೃಷ್ಣಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 16:10 IST
Last Updated 19 ಡಿಸೆಂಬರ್ 2023, 16:10 IST
ಬೀಡಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ದಾವಣಗೆರೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾ ಖಾನಂ ಹಾಗೂ ಕರಿಬಸಪ್ಪ ಅವರು ಮಂಗಳವಾರ ಬೆಂಗಳೂರಿನಲ್ಲಿ ಕಾರ್ಮಿಕ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಬೀಡಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ದಾವಣಗೆರೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾ ಖಾನಂ ಹಾಗೂ ಕರಿಬಸಪ್ಪ ಅವರು ಮಂಗಳವಾರ ಬೆಂಗಳೂರಿನಲ್ಲಿ ಕಾರ್ಮಿಕ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.   

ದಾವಣಗೆರೆ: ಜಿಲ್ಲೆಯಲ್ಲಿನ ಬೀಡಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ವತಿಯಿಂದ ಮಂಗಳವಾರ ಬೆಂಗಳೂರಿನಲ್ಲಿ ಕಾರ್ಮಿಕ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಅವರಿಗೆ ಮನವಿ  ಸಲ್ಲಿಸಲಾಯಿತು.

‘ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಎಫ್, ಬೋನಸ್, ಗ್ರ್ಯಾಜ್ಯುಟಿ ಹಾಗೂ ಗುರುತಿನ ಚೀಟಿಗೆ ಆಗ್ರಹಿಸಿ ಹಲವು ಹೋರಾಟಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ. ದಾವಣಗೆರೆ ಸಹಾಯಕ ಕಾರ್ಮಿಕರ ಆಯುಕ್ತರ ನೇತೃತ್ವದಲ್ಲಿ ಗುತ್ತಿಗೆದಾರರು ಮತ್ತು ಬೀಡಿ ಕಂಪನಿಗಳ ಮಾಲೀಕರೊಂದಿಗೆ ಹಲವು ಬಾರಿ ‘ಸಂಧಾನ ಸಭೆ’ಗಳನ್ನು ನಡೆಸಿದ್ದರೂ ಬೀಡಿ ಕಾರ್ಮಿಕರ ಸಮಸ್ಯೆಗಳು ಪರಿಹಾರವಾಗಿಲ್ಲ’ ಎಂದು ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಮನವಿಯಲ್ಲಿ ತಿಳಿಸಿದ್ದಾರೆ.

‘ಜಿಲ್ಲೆ ಸೇರಿದಂತೆ ರಾಜ್ಯದಲ್ಲಿರುವ ಬೀಡಿ ಕಾರ್ಮಿಕರ ಸಮೀಕ್ಷೆಯಾಗಬೇಕು. ಹಾಗೂ ಗುರುತಿನ ಚೀಟಿ ನೀಡಬೇಕು.
ಕನಿಷ್ಠ ವೇತನವನ್ನು ₹281.77 ಹಾಗೂ ಒಂದು ಸಾವಿರ ಬೀಡಿಗಳಿಗೆ ನೀಡುವಂತೆ ಬೀಡಿ ಕಂಪನಿಗಳಿಗೆ ನೋಟಿಸ್‍ ನೀಡಬೇಕು. ಬೀಡಿ ಮತ್ತು ಸಿಗಾರ್ ಕಾರ್ಮಿಕರು (ಉದ್ಯೋಗದ ಷರತ್ತುಗಳು) ಕಾಯ್ದೆ - 1966 ಅನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬೀಡಿ ಕಾರ್ಮಿಕರಿಗೆ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಬೇಕು. ಕಾರ್ಮಿಕ ಇಲಾಖೆಗಳಲ್ಲಿ ಬೀಡಿ ಕಾರ್ಮಿಕರ, ಕಂಪನಿಗಳ, ಗುತ್ತಿಗೆದಾರರ ಮಾಹಿತಿ ಲಭ್ಯವಾಗಬೇಕು. ಸಹಾಯಕ ಕಾರ್ಮಿಕ ಆಯುಕ್ತರು (ಎಎಲ್‍ಸಿ) ಕಡ್ಡಾಯವಾಗಿ ಬೀಡಿ ಕಾರ್ಮಿಕರ ಜೊತೆ ಕುಂದುಕೊರತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಬೇಕು. ಬೀಡಿ ಕಾರ್ಮಿಕರಿಗೆ ಗುಣಮಟ್ಟದ ಎಲೆ, ತಂಬಾಕು ನೀಡುವಂತೆ ಕಂಪನಿ ಮಾಲೀಕರಿಗೆ ನಿರ್ದೇಶನ ನೀಡಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಯೂನಿಯನ್ ಕಾರ್ಯದರ್ಶಿ ಕರಿಬಸಪ್ಪ ಎಂ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.