ADVERTISEMENT

ಡಿಬಿ ಕೆರೆ ಪಿಕಪ್ ಜಲಾಶಯದಿಂದ ಉಕ್ಕಿ ಹರಿದ ನೀರು: 1000 ಎಕರೆಗೆ ನೀರು

ಕೆರೆಗೆ ಹರಿದು ಬರುತ್ತಿರುವ ಕಲುಷಿತ ನೀರು ಅಪಾಯಕ್ಕೆ ಸಿಲುಕಿದ ಜಲಚರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:00 IST
Last Updated 3 ಅಕ್ಟೋಬರ್ 2022, 4:00 IST
ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯಕ್ಕೆ ಭದ್ರಾನಾಲೆ ಒಡೆದ ಪರಿಣಾಮ ಕಲುಷಿತ ನೀರು ಹರಿದು ಬರುತ್ತಿದೆ.
ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯಕ್ಕೆ ಭದ್ರಾನಾಲೆ ಒಡೆದ ಪರಿಣಾಮ ಕಲುಷಿತ ನೀರು ಹರಿದು ಬರುತ್ತಿದೆ.   

ಮಲೇಬೆನ್ನೂರು: ದಾವಣಗೆರೆ ಶಾಖಾನಾಲೆ ಅಕ್ವಾಡಕ್ಟ್ ಒಡೆದಿರುವ ಕಾರಣ 800 ಕ್ಯುಸೆಕ್‌ ಹೆಚ್ಚಿನ ಪ್ರಮಾಣದ ನೀರು ಭಾನುವಾರ ದೇವರಬೆಳಕೆರೆ ಪಿಕಪ್ ಜಲಾಶಯದಿಂದ ಉಕ್ಕಿ ಹರಿಯುತ್ತಿದ್ದು, ಹಿಂಭಾಗದ 1000 ಎಕರೆ ಜಮೀನುಗಳಿಗೆ ಹಿನ್ನೀರು ನುಗ್ಗಿದೆ.

‘ಕಳೆದ 3 ತಿಂಗಳಿನಿಂದ ಜಮೀನು ನೀರಿನಲ್ಲಿ ಮುಳುಗಿ ಬೆಳೆ ನಷ್ಟವಾಗಿದೆ. ಸಂಕ್ಲೀಪುರ ಮುಕ್ತೇನಹಳ್ಳಿ ರಸ್ತೆ ಜಲಾವೃತವಾಗಿದೆ. ಒಮ್ಮೆ ಅಣೆಕಟ್ಟಿನಲ್ಲಿ ಬಿರುಕು ಮೂಡಿ ದುರಸ್ತಿ ಮಾಡಲಾಗಿದೆ’ ಎಂದು ರೈತ ಮುಖಂಡ ಸಿ. ನಾಗೇಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಒಂದು ವೇಳೆ ಅಣೆಕಟ್ಟೆಗೆ ಹಾನಿಯಾದರೆ ಯಾರು ಹೊಣೆ? ಎಂದು ಸಂಕ್ಲೀಪುರ, ಗುಳದಳ್ಳಿ, ಬೂದಿಹಾಳ್, ದೇವರಬೆಳಕೆರೆ, ಕನಗೊಂಡಹಳ್ಳಿ, ಬಲ್ಲೂರು ಗ್ರಾಮದ ರೈತರು ಎಂಜಿನಿಯರ್‌ಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು.

ADVERTISEMENT

‘ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ರಸಾಯನಿಕಯುಕ್ತ ಕಲುಷಿತ ನೀರು ಹರಿದುಬರುತ್ತಿದ್ದು ಜಲಮಾಲಿನ್ಯ ಎದುರಾಗಿದೆ. ಮೀನುಗಳು ಸಾವು ನಿಶ್ಚಿತ’ ಎಂದು ಮೀನು ಸಾಗಣಿಕೆದಾರರು ಬೇಸರ ವ್ಯಕ್ತಪಡಿಸಿದರು.

‘ಅಣೆಕಟ್ಟಿನ ಸುರಕ್ಷತಾ ದೃಷ್ಠಿಯಿಂದ ಈಗಲಾದರೂ ಗೇಟು ತೆರೆಯಬೇಕು’ ಎಂದು ನಂದಿತಾವರೆ ಎಂಜನಿಯರ್ ಪೂಜಾರ್ ಗದ್ದಿಗೆಪ್ಪ ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರು, ಮುಖ್ಯ ಎಂಜಿನಿಯರ್ ಅವರು ನಿರ್ಲಕ್ಷ್ಯ ವಹಿಸಿದ ಕಾರಣ ರೈತರು ಬೆಳೆದ ಬೆಳೆ ಜಲಾವೃತವಾಗಿದ್ದು, ನಷ್ಟ ಅನುಭವಿಸುವಂತಾಗಿದೆ. ಗಾಂಜೀ ವೀರಪ್ಪ, ಸಿದ್ಧವೀರಪ್ಪ ನಾಲೆ ಗೇಟ್ ತೆರೆದು ನಾಲೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವಂತೆ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಎಂಜಿನಿ ಯರ್‌ಗಳು ಸಮಸ್ಯೆ ಪರಿಹರಿಸಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.