ADVERTISEMENT

ಅಭಿವೃದ್ಧಿಗೆ ಶಿಕ್ಷಣ ಕ್ಷೇತ್ರದ ಬದಲಾವಣೆ ಅಗತ್ಯ

ವಿಚಾರ ಸಂಕಿರಣದಲ್ಲಿ ಡಯಟ್‌ ಪ್ರಾಚಾರ್ಯ ಎಚ್‌.ಕೆ. ಲಿಂಗರಾಜು

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 17:07 IST
Last Updated 15 ಜುಲೈ 2019, 17:07 IST
ದಾವಣಗೆರೆಯ ಡಯಟ್‌ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ–2019 ಕುರಿತುಸೋಮವಾರ ನಡೆದ ವಿಚಾರ ಸಂಕಿರಣವನ್ನು ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೈಲಜಾ ಬಸವರಾಜ್ ಉದ್ಘಾಟಿಸಿದರು. ಡಯಟ್‌ ಪ್ರಾಚಾರ್ಯ ಎಚ್.ಕೆ.ಲಿಂಗರಾಜು, ಡಿಡಿಪಿಐ ಸಿ.ಆರ್‌.ಪರಮೇಶ್ವರಪ್ಪ, ಪ್ರೊ.ಎನ್‌.ಬಿ. ರಂಗನಾಥ್‌, ಡಾ. ವೈ. ವೃಷಭೇಂದ್ರಪ್ಪ, ವಾಮದೇವಪ್ಪ ಇದ್ದರು.
ದಾವಣಗೆರೆಯ ಡಯಟ್‌ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ–2019 ಕುರಿತುಸೋಮವಾರ ನಡೆದ ವಿಚಾರ ಸಂಕಿರಣವನ್ನು ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೈಲಜಾ ಬಸವರಾಜ್ ಉದ್ಘಾಟಿಸಿದರು. ಡಯಟ್‌ ಪ್ರಾಚಾರ್ಯ ಎಚ್.ಕೆ.ಲಿಂಗರಾಜು, ಡಿಡಿಪಿಐ ಸಿ.ಆರ್‌.ಪರಮೇಶ್ವರಪ್ಪ, ಪ್ರೊ.ಎನ್‌.ಬಿ. ರಂಗನಾಥ್‌, ಡಾ. ವೈ. ವೃಷಭೇಂದ್ರಪ್ಪ, ವಾಮದೇವಪ್ಪ ಇದ್ದರು.   

ದಾವಣಗೆರೆ: ಒಂದು ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಕ್ಷೇತ್ರದ ಉನ್ನತಿಯೂ ಕಾರಣ. ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಶಿಕ್ಷಣ ನೀತಿ ರೂಪಿಸುವುದು ಅಗತ್ಯ ಎಂದು ಡಯಟ್‌ ಪ್ರಾಚಾರ್ಯ ಎಚ್‌.ಕೆ. ಲಿಂಗರಾಜು ಹೇಳಿದರು.

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌)ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ–2019ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘1968ರಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಯಿತು. ಬಳಿಕ 1986ರಲ್ಲಿ ಎರಡನೇ ಶಿಕ್ಷಣ ನೀತಿ ಬಂತು. ಇದು 3ನೇ ಶಿಕ್ಷಣ ನೀತಿ. ಮೊದಲ ಶಿಕ್ಷಣ ನೀತಿಯ ಮುಖ್ಯಾಂಶದಲ್ಲೇ ಶಿಕ್ಷಣ ವ್ಯವಸ್ಥೆಯ ರೂಪರೇಷೆ ಬಗ್ಗೆ ಉತ್ತಮ ಅಂಶಗಳಿದ್ದವು. ಶಿಕ್ಷಣ ಕ್ಷೇತ್ರ ಹೇಗಿರಬೇಕು. ಏನೇನು ಬದಲಾವಣೆ ಅಗತ್ಯ ಎಂಬುದಕ್ಕೆ ಕೊಠಾರಿ ಆಯೋಗವೇ ಅಡಿಪಾಯ’ ಎಂದು ಹೇಳಿದರು.

ADVERTISEMENT

1986ರ ನಂತರ ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ನಡೆಯುತ್ತಿರುವುದು ಪ್ರಸಕ್ತ ವರ್ಷದಲ್ಲಿ. ಶಿಕ್ಷಣ ನೀತಿ ಬದಲಾವಣೆಗೆ ಇಷ್ಟು ವರ್ಷಗಳ ನಂತರ ಚಿಂತನೆ ನಡೆಯುತ್ತಿರುವುದು ಆಶಾದಾಯಕ ಎಂದರು.

ರಾಜೀವಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಮುಂದಾದರು. ಆದರೆ ಇದು ಸಮಗ್ರವಾಗಿ ಕಾರ್ಯರೂಪಕ್ಕೆ ಬಂದದ್ದು ಪಿ.ವಿ. ನರಸಿಂಹರಾವ್‌ ಪ್ರಧಾನಿಯಾಗಿದ್ದ ಕಾಲದಲ್ಲಿ. ನರಸಿಂಹರಾವ್‌ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಿದ್ದರು ಎಂದು ನೆನಪಿಸಿದರು.

ಹಿಂದೆ ವಿದೇಶಗಳಲ್ಲಿ ಭಾರತದ ಬಗ್ಗೆ ಉತ್ತಮ ಅಭಿಪ್ರಾಯ ಇರಲಿಲ್ಲ. ಆದರೆ ಇಂದು ಪ್ರಪಂಚ ಭಾರತದತ್ತ ನೋಡುತ್ತಿದೆ. ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಕಾರಣ. ಜನಸಂಖ್ಯೆಯಂತಹ ಫಸಲು ನಮ್ಮಲ್ಲಿದೆ. ಇದನ್ನು ಉತ್ತಮವಾಗಿ ಕಟಾವು ಮಾಡಬೇಕು. ದೇಶವನ್ನು ಉನ್ನತ ಸ್ಥಾನದತ್ತ ಕೊಂಡೊಯ್ಯುವ ಆಶಯ ಇಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ –2019 ರೂಪಿಸಲಾಗಿದೆ ಎಂದು ಹೇಳಿದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಡಾ. ವೈ.ವೃಷಭೇಂದ್ರಪ್ಪ, ‘ಇಂದಿನ ಶಿಕ್ಷಣ ಪದ್ಧತಿಯಲ್ಲಿ ಫಲಿತಾಂಶಕ್ಕೆ ಒತ್ತು ನೀಡುತ್ತಾರೆ ವಿನಾ ಅಧ್ಯಯನಕ್ಕಲ್ಲ. ಇದು ಬದಲಾಗಬೇಕು. ಒಂದು ಪಠ್ಯಪುಸ್ತಕದಲ್ಲಿ ಮಗುವಿನ ಸಮಗ್ರ ಕಲಿಕೆಗೆ ಅಗತ್ಯವಾದ ವಿಷಯಗಳು ಇರಬೇಕೇ ಹೊರತು ವಿಷಯ ಅಸಮರ್ಪಕವಾಗಿರಬಾರದು. ಈ ಬಗ್ಗೆ ತಜ್ಞರು ಗಮನಹರಿಸಬೇಕು’ ಎಂದರು.

ಇಂದು ಮಕ್ಕಳಲ್ಲಿ ಭಾಷೆ ಮೇಲೆ ಪ್ರಭುತ್ವ ಇಲ್ಲ. ಪದವಿ ಪಡೆದರೂ ಕನ್ನಡ ಭಾಷೆಯ ಕಾಗುಣಿತ ಗೊತ್ತಿರುವುದಿಲ್ಲ. ಇದಕ್ಕೆ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯನ್ನು ಅನುಕರಿಸುತ್ತಿರುವುದು ಕಾರಣ. ಇದು ಬದಲಾಗಬೇಕು. ಇಂದು ಶಿಕ್ಷಣ ಪದ್ಧತಿಯಲ್ಲಿ ಕಾಗುಣಿತ ಹಾಗೂ ಗಣಿತಕ್ಕೆ ಒತ್ತು ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಇಂದು ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರು, ಉಪನ್ಯಾಸಕರ ಕೊರತೆ ಕಾಣುತ್ತಿದೆ. ಇದರಿಂದ ಹೊರ ರಾಜ್ಯದ ಶಿಕ್ಷಕರು ರಾಜ್ಯದಲ್ಲಿ ವಿಜ್ಞಾನ ವಿಷಯ ಕಲಿಸಲು ಬರುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾದರೆ ನಮ್ಮ ಶಿಕ್ಷಣದ ಸುಧಾರಣೆ ಸಾಧ್ಯವೇ? ದೇಶದಲ್ಲಿ ಶಿಕ್ಷಣ ಕ್ಷೇತ್ರ ಹೊರತುಪಡಿಸಿ ಇತರೆ ವಿಷಯಗಳ ಮೇಲೆ ನಡೆಯುವ ಪ್ರತಿಭಟನೆಗೆ ಶಾಲಾ, ಕಾಲೇಜುಗಳಿಗೆ ರಜೆ ನೀಡುವ ಪರಿಪಾಠ ಬದಲಾಗಬೇಕು. ಶಿಕ್ಷಕರಿಗೆ ಬೋಧನೆ ಜೊತೆ ಇತರೆ ಕೆಲಸಗಳ ಹೊರೆ ಹೆಚ್ಚಾಗಿದೆ. ಶಿಕ್ಷಣ ನೀತಿಯಲ್ಲಿ ಈ ವಿಷಯಗಳ ಚರ್ಚೆ ನಡೆಯಬೇಕು ಎಂದು ಸಲಹೆ ನೀಡಿದರು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರೊ.ಎನ್‌.ಬಿ. ರಂಗನಾಥ್‌, ‘ಶಿಕ್ಷಣ ನಿಂತ ನೀರಲ್ಲ. ಕಾಲಕಾಲಕ್ಕೆ ಬದಲಾವಣೆ ಅಗತ್ಯ. ಅಂಗೈನಲ್ಲಿ ವಿಶ್ವ ಕಾಣುವ ಇಂದಿನ ಇಂಟರ್‌ನೆಟ್‌ ಯುಗಕ್ಕೆ ನಮ್ಮ ಮಕ್ಕಳನ್ನು ಅಣಿಗೊಳಿಸುವ ಕೆಲಸವಾಗಬೇಕಿದೆ’ ಎಂದರು.

ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಾಮದೇವಪ್ಪ, ರಂಗಸ್ವಾಮಿ, ದಾವಣಗೆರೆ ವಿಶ್ವವಿದ್ಯಾಲಯದ ಮುರಿಗೇಂದ್ರಪ್ಪ ಸೇರಿ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು, ಉಪನ್ಯಾಸಕರು ಇದ್ದರು. ಉಪನ್ಯಾಸಕ ಲೇಪಾಕ್ಷಪ್ಪ ಸ್ವಾಗತಿಸಿದರು. ಎನ್‌.ಲೋಲಾಕ್ಷಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.