ADVERTISEMENT

ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು: ವೀರಸೋಮೇಶ್ವರ ಶ್ರೀ

ಧರ್ಮ ಜಾಗೃತಿ ಸಭೆಯಲ್ಲಿ ರಂಭಾಪುರಿ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:24 IST
Last Updated 17 ಜುಲೈ 2025, 6:24 IST
ಹರಿಹರದಲ್ಲಿ ಬುಧವಾರ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ರಂಭಾಪುರಿ ಶ್ರೀಗಳು ಮಾತನಾಡಿದರು. ಅವಧೂತ ಕವಿ ಗುರುರಾಜ ಗುರೂಜಿ, ಡಿ.ಜಿ.ಶಿವಾನಂದಪ್ಪ, ಡಿ.ಹೇಮಂತರಾಜ್ ಇದ್ದರು.
ಹರಿಹರದಲ್ಲಿ ಬುಧವಾರ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ರಂಭಾಪುರಿ ಶ್ರೀಗಳು ಮಾತನಾಡಿದರು. ಅವಧೂತ ಕವಿ ಗುರುರಾಜ ಗುರೂಜಿ, ಡಿ.ಜಿ.ಶಿವಾನಂದಪ್ಪ, ಡಿ.ಹೇಮಂತರಾಜ್ ಇದ್ದರು.   

ಹರಿಹರ: ‘ಬದುಕು ಭಗವಂತ ಕೊಟ್ಟ ಅಮೂಲ್ಯ ಸಂಪತ್ತು. ಸತ್ಯ, ಶಾಂತಿ, ಸಾಮರಸ್ಯ ಸದ್ಭಾವನೆಗಳನ್ನು ಹೊಂದಿ ಬಾಳಬೇಕು. ಭೌತಿಕ ಜೀವನ ಸಮೃದ್ಧಗೊಂಡರೆ ಸಾಲದು. ಅದರೊಂದಿಗೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.

ನಗರದ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಕೊನೆಯ ದಿನದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮನುಷ್ಯನ ದೈಹಿಕ ಬೆಳವಣಿಗೆಗೆ ಆಹಾರ ನೀರು ಮುಖ್ಯವಾಗಿರುವಂತೆ ಬದುಕಿನ ವಿಕಾಸಕ್ಕೆ ಮತ್ತು ಅಭಿವೃದ್ಧಿಗೆ ಧರ್ಮಾಚರಣೆ ಅಗತ್ಯವಾಗಿದೆ. ಜೀವನದಲ್ಲಿ ಸಂಪತ್ತು ಗಳಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಂಡು ಬಾಳಬೇಕು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ’ ಎಂದರು.

ADVERTISEMENT

‘ವೀರಶೈವ ಧರ್ಮದಲ್ಲಿ ಜ್ಞಾನ, ಕ್ರಿಯೆ ಮತ್ತು ಸಾಮಾಜಿಕ ಚಿಂತನೆಗಳಿಗೆ ಆದ್ಯತೆ ಕೊಟ್ಟಿದೆ. ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ತತ್ವ ಸಿದ್ಧಾಂತದ ಚಿಂತನೆಗಳು ಜೀವಾತ್ಮ ಪರಮಾತ್ಮನಾಗಲು ಬೇಕಾದ ಸಾಧನಾ ಮಾರ್ಗದ ಅರಿವನ್ನು ಉಂಟು ಮಾಡುತ್ತವೆ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಎಲ್ಲರಲ್ಲೂ ಬೆಳೆದು ಬರುವ ಅವಶ್ಯಕತೆಯಿದೆ. ಮೂರು ದಿನಗಳ ಕಾಲ ಹರಿಹರ ನಗರದಲ್ಲಿ ಜರುಗಿದ ಕಾರ್ಯಕ್ರಮಗಳು ತಮಗೆ ತೃಪ್ತಿ ಸಂತೃಪ್ತಿ ತಂದಿವೆ’ ಎಂದರು.

‘ವೀರಶೈವ ಧರ್ಮದ ಮೂಲ ಪೀಠಗಳು ಪಂಚ ಪೀಠಗಳು. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಲಿಂ.ರಂಭಾಪುರಿ ವೀರಗಂಗಾಧರ ಶ್ರೀಯವರು ಪೂಜಾ ವೈಭವ ಅದ್ಭುತ’ ಎಂದು ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.

‘ಸಂಪತ್ತು ಬೆಳೆದಂತೆ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಮನುಷ್ಯನಲ್ಲಿ ಮಾನವೀಯತೆ ಕರುಣೆ ಮತ್ತು ಪರೋಪಕಾರ ಮನೋಭಾವನೆಗಳು ಬೆಳೆಯಬೇಕು’ ಎಂದು ಅವಧೂತ ಕವಿ ಗುರುರಾಜ ಗುರೂಜಿ ಹೇಳಿದರು.

ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಶ್ರೀ ನೇತೃತ್ವ ವಹಿಸಿದ್ದರು. ಹರಿಹರ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ನಗರಸಭೆ ಮಾಜಿ ಸದಸ್ಯ ಡಿ.ಹೇಮಂತರಾಜ್, ಜವಳಿ ಸಮಾಜದ ಅಧ್ಯಕ್ಷ ಕೊಂಡಜ್ಜಿ ಈಶ್ವರಪ್ಪ, ಗಿರೀಶ ಹೆಗ್ಗಪ್ಪನವರ, ಮಲ್ಲಪ್ಪ ಹೆಗ್ಗಪ್ಪನವರ, ಟಿ.ಜೆ.ಮುರುಗೇಶಪ್ಪ ಅವರಿಗೆ ಶ್ರೀಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಸೃಷ್ಟಿ ಯೋಗ ಪ್ರದರ್ಶನ ಮಾಡಿದರು. ಐಶ್ವರ್ಯಾ ಸ್ವಾಗತಿಸಿದರು. ಶಿಕ್ಷಕ ವಿ.ಬಿ.ಕೊಟ್ರೇಶ ನಿರೂಪಿಸಿದರು. ಕಾಂತರಾಜ ಮತ್ತು ವೀರೇಶ್ ಸಂಗಡಿಗರು ಭಕ್ತಿ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.