ADVERTISEMENT

ದಾವಣಗೆರೆ| ಡಿಜಿಟಲ್‌ ಪರದೆಯ ಅಪಾಯ ದೊಡ್ಡದು: ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಕಳವಳ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 13:14 IST
Last Updated 14 ನವೆಂಬರ್ 2025, 13:14 IST
   

ದಾವಣಗೆರೆ: ಡಿಜಿಟಲ್‌ ಉಪಕರಣಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆ, ಜೀವನಶೈಲಿಯ ಕಾಯಿಲೆಗಳು ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ‘ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌’, ಸಮೀಪ ದೃಷ್ಟಿದೋಷ ಮತ್ತು ರೆಟಿನಾ, ಕಾರ್ನಿಯಾ ಸಮಸ್ಯೆಗಳು ತಲೆದೋರುತ್ತಿವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ದಾವಣಗೆರೆ ನೇತ್ರತಜ್ಞರ ಸಂಘವು ಎಸ್‌.ಎಸ್‌. ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ ನೇತ್ರತಜ್ಞರ ರಾಜ್ಯಮಟ್ಟದ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಡಿಜಿಟಲ್‌ ಪರದೆಗಳ ವೀಕ್ಷಣೆಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮಧುಮೇಹ ಮತ್ತು ಕಣ್ಣಿನ ನಿಯಮಿತ ಪರೀಕ್ಷೆಯಿಂದಲೂ ಅಂಧತ್ವ ತಡೆಗಟ್ಟಲು ಸಾಧ್ಯವಿದೆ. ಗ್ರಾಮೀಣ ಪ್ರದೇಶ, ಶಾಲೆ, ಕಾಲೇಜುಗಳಲ್ಲಿ ನೇತ್ರ ತಪಾಸಣೆ ನಡೆಸುವ ಮೂಲಕ ಆರಂಭಿಕ ದೃಷ್ಟಿ ಸಮಸ್ಯೆಯನ್ನು ಪತ್ತೆ ಮಾಡುವ ಜರೂರು ಇದೆ’ ಎಂದು ಹೇಳಿದರು.

ADVERTISEMENT

‘ನೇತ್ರ ಆರೈಕೆಗೆ ಸಂಬಂಧಿಸಿದಂತೆ ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ, ಪರಿಣತ ವೈದ್ಯರ ಕೊರತೆ ಇದೆ. ಹಳ್ಳಿಗಳಲ್ಲಿ ಕಣ್ಣಿನ ತಪಾಸಣಾ ಕೇಂದ್ರಗಳನ್ನು ಬಲಪಡಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಉತ್ಸುಕತೆ ತೋರುವ ನೇತ್ರತಜ್ಞರನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

‘ವೈದ್ಯಕೀಯ ಕ್ಷೇತ್ರದಲ್ಲಿನ ಕೊರತೆಗಳನ್ನು ನೀಗಿಸಲು ತಂತ್ರಜ್ಞಾನ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶದ ಬಡವರನ್ನು ತಲುಪಲು ಟೆಲಿಮೆಡಿಸಿನ್‌, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನಗಳ ನೆರವು ಪಡೆಯುವ ಅವಕಾಶಗಳಿವೆ. ಎಐ ಚಾಲಿತ ಇಮೇಜಿಂಗ್‌, ನವೀನ ತಂತ್ರಜ್ಞಾನಗಳು ರೋಗನಿರ್ಣಯವನ್ನು ಹೆಚ್ಚು ನಿಖರವಾಗಿಸಿದ್ದು, ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತವಾಗಿಸಿವೆ’ ಎಂದು ಅಭಿಪ್ರಾಯಪಟ್ಟರು.

‘ಅಗತ್ಯವಿರುವವರಿಗೆ ಕಣ್ಣಿನ ತಪಾಸಣೆ, ಮಧುಮೇಹ ರೆಟಿನಾ, ಗ್ಲುಕೋಮಾ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ನೀಡುತ್ತಿವೆ. ಕಣ್ಣಿನ ಆರೋಗ್ಯ, ಆರೈಕೆ ಹಾಗೂ ತಪಾಸಣೆಗೆ ಸಂಬಂಧಿಸಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿಗಳನ್ನು ನೀಡಬೇಕಿದೆ. ಜಾಗೃತಿ ಅಭಿಯಾನಗಳನ್ನು ನಡೆಸಿದರೆ ಅನುಕೂಲವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ದೇಶದಲ್ಲಿ ಗುಣಮಟ್ಟದ ಕಣ್ಣಿನ ಆರೈಕೆಗೆ ಬೇಡಿಕೆ ಹೆಚ್ಚುತ್ತಿದೆ. ಕಣ್ಣಿನ ಆರೈಕೆ ವಲಯವು ಗಣನೀಯವಾಗಿ ಬೆಳೆದಿದೆ. 2029ರ ಹೊತ್ತಿಗೆ ಈ ಕ್ಷೇತ್ರ ಇನ್ನೂ ಆಗಾಧವಾಗಿ ಬೆಳೆಯುವ ಲಕ್ಷಣಗಳು ಗೋಚರಿಸಿವೆ. ಅಂಧತ್ವ ತಡೆಗಟ್ಟುವ ಪ್ರಯತ್ನಕ್ಕೆ ಪ್ರತಿಯೊಬ್ಬ ನೇತ್ರತಜ್ಞರೂ ಪ್ರಯತ್ನಿಸಬೇಕಿದೆ. ನಗರ ಮತ್ತು ಗ್ರಾಮೀಣ ಪ್ರದೇಶವೆಂಬ ಭಿನ್ನತೆ ಇಲ್ಲದೇ ಸೇವೆಯನ್ನು ನೀಡಬೇಕಿದೆ’ ಎಂದು ಸಲಹೆ ನೀಡಿದರು.

‘ವೈದ್ಯರ ಬಗ್ಗೆ ಜನಪ್ರತಿನಿಧಿಗಳಿಗೆ ತಪ್ಪು ಅಭಿಪ್ರಾಯಗಳಿವೆ. ವೈದ್ಯರು ಸಮಾಜ ಸೇವಕರಂತೆ ಕೆಲಸ ಮಾಡುತ್ತಿದ್ದಾರೆ. ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ವೈದ್ಯರ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸುವೆ’ ಎಂದು ನೇತ್ರತಜ್ಞರೂ ಆಗಿರುವ ಕೂಡ್ಲಗಿ ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್‌ ಭರವಸೆ ನೀಡಿದರು.

ಕರ್ನಾಟಕ ನೇತ್ರತಜ್ಞರ ಸೊಸೈಟಿ ಅಧ್ಯಕ್ಷ ಡಾ.ರವೀಂದ್ರ ಬಣಕಾರ್‌, ಉಪಾಧ್ಯಕ್ಷ ಡಾ.ಅನಂತ್‌ ಭಂಡಾರಿ, ಕಾರ್ಯದರ್ಶಿ ಡಾ.ಚೈತ್ರಾ ಜಯದೇವ್‌, ಡಾ.ನಮ್ರತಾ ಶರ್ಮಾ, ಡಾ.ಕೃಷ್ಣಪ್ರಸಾದ್‌ ಕೂಡ್ಲ, ಡಾ.ಶುಕ್ಲಾ ಶೆಟ್ಟಿ, ಡಾ.ಶಶಿಕಲಾ, ಡಾ.ಎಚ್.ಎಂ. ರವೀಂದ್ರನಾಥ್, ಡಾ.ಎ.ವಿ. ಸೂರ್ಯಪ್ರಕಾಶ್ ಹಾಜರಿದ್ದರು.

ಯಶಸ್ವಿನಿ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ಒದಗಿಸುವ ವೈದ್ಯಕೀಯ ಸೇವೆಯ ದರ ಪರಿಷ್ಕರಣೆಯ ಪ್ರಯತ್ನ ನಡೆಯುತ್ತಿದೆ. ವೈದ್ಯರಿಗೆ ಅನುಕೂಲವಾಗುವ ಘೋಷಣೆ ಮುಂದಿನ ಬಜೆಟ್‌ನಲ್ಲಿ ಹೊರಬೀಳಲಿದೆ
ಡಾ.ಎನ್‌.ಟಿ.ಶ್ರೀನಿವಾಸ್‌, ಶಾಸಕ ಕೂಡ್ಲಿಗಿ

60ಕ್ಕೂ ಹೆಚ್ಚು ಮಳಿಗೆ

ಕಣ್ಣಿನ ಆರೈಕೆಗೆ ಸಂಬಂಧಿಸಿದ ಲೋಕವೊಂದು ಜೆಜೆಎಂ ವೈದ್ಯಕೀಯ ಕಾಲೇಜು ಆವರಣದಲ್ಲಿ ಸೃಷ್ಟಿಯಾಗಿದೆ. ಆಧುನಿಕ ತಂತ್ರಜ್ಞಾನ ಹೊಂದಿದ ಉಪಕರಣಗಳಿರುವ ಮಳಿಗೆ ಸೇರಿದಂತೆ 60ಕ್ಕೂ ಹೆಚ್ಚು ಮಳಿಗೆಗಳು ಇಲ್ಲಿವೆ.

ಸಮ್ಮೇಳನದಲ್ಲಿ 1 ಸಾವಿರ ವೈದ್ಯರು ಪಾಲ್ಗೊಂಡಿದ್ದಾರೆ. ತಮಿಳುನಾಡು, ಕೇರಳ, ಗೋವಾ, ಆಂಧ್ರಪ್ರದೇಶದಿಂದಲೂ ವೈದ್ಯರು ಆಗಮಿಸಿದ್ದಾರೆ. ನೇತ್ರ ತಪಾಸಣೆ, ಆರೈಕೆ, ಶಸ್ತ್ರಚಿಕಿತ್ಸೆಯ ವಿಭಾಗದಲ್ಲಿನ ಸುಧಾರಿತ ಯಂತ್ರಗಳು, ಉಪಕರಣಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.