ADVERTISEMENT

ಅಧಿವೇಶನಕ್ಕೆ ಅಡ್ಡಿ: ವಿರೋಧ ಪಕ್ಷಗಳಿಂದ ಪ್ರಜಾಪ್ರಭುತ್ವ ವಿರೋಧಿ ಧೋರಣೆ

ಎಲ್ಲ ಪ್ರಶ್ನೆಗೆ ಉತ್ತರ ಕೊಡಲು ಸರ್ಕಾರ ಸಿದ್ಧವಿದ್ದರೂ ಕಲಾ‍ಪ ನಡೆಸಲು ಬಿಡುತ್ತಿಲ್ಲ: ಸಂಸದ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 4:09 IST
Last Updated 9 ಆಗಸ್ಟ್ 2021, 4:09 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ‘ಕೋವಿಡ್‌ ಸಂದರ್ಭದಲ್ಲಿ ದೇಶದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಗಂಭೀರ ಚರ್ಚೆಗಳಾಗಬೇಕಿತ್ತು. ಪೆಗಾಸಿಸ್‌, ಕೃಷಿ ಕಾಯ್ದೆಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಅಧಿವೇಶನಕ್ಕೆ ಬರುತ್ತಿಲ್ಲ. ಪೆಗಾಸಿಸ್‌, ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಲು, ಪ್ರಶ್ನೆಗಳಿಗೆ ಉತ್ತರ ನೀಡಲು ತಯಾರಿದ್ದೇವೆ ಎಂದು ಸರ್ಕಾರ ಹೇಳಿದರೂ ಕೇಳುತ್ತಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಟೀಕಿಸಿದರು.

ಲೋಕಸಭೆ ಅಧಿವೇಶನದಲ್ಲಿ ಕೋವಿಡ್, ಆರ್ಥಿಕ ಸಮಸ್ಯೆ, ಉತ್ಪಾದನಾ ಕ್ಷೇತ್ರದ ಸವಾಲು, ಆಂತರಿಕ ಭದ್ರತೆ, ಗಡಿಯಾಚೆಗೆ ಉಲ್ಭಣಿಸುತ್ತಿರುವ ಪಾಕ್-ಚೀನಾ ಷಡ್ಯಂತ್ರಗಳ ಚರ್ಚೆ ಮಾಡಬೇಕಿತ್ತು. ಪಾಕಿಸ್ತಾನದಲ್ಲಿ ಗಣಪತಿ ದೇವಸ್ಥಾನವನ್ನು ನೆಲಸಮ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಬೇಕಿತ್ತು. ಈ ಕಾಂಗ್ರೆಸ್‌ ಭಯೋತ್ಪಾದಕರ ಜತೆಗೆ ಶಾಮೀಲಾಗಿದೆ. ಅದಕ್ಕೆ ಕಲಾಪವನ್ನು ಹಾಳು ಮಾಡುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್ 3ನೇ ಅಲೆ ತಡೆಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಸಂಘ ಪರಿವಾರದಿಂದ ದೇಶದ 4 ಲಕ್ಷ ಸ್ವಯಂ ಸೇವಕರ ಸಭೆ ನಡೆಸಿ, ಪ್ರತಿ ಕ್ಷೇತ್ರದಲ್ಲೂ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ಇನ್ನು ಮುಂದೆ ಆಗುವುದಿಲ್ಲ. ಜಿಲ್ಲಾ ಆಸ್ಪತ್ರೆ, ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊರೊನಾ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಂಧ್ಯಾ ಸುರಕ್ಷಾ ಮಾಸಾಶನ ಹೆಚ್ಚಿಸಿದ್ದಾರೆ. ಇಎಸ್‍ಐ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. 3ನೇ ಅಲೆ ತಡೆಗೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಟುವಳ್ಳಿಯ ಇಎಸ್‍ಐ ಆಸ್ಪತ್ರೆಗೆ ಶೀಘ್ರವೇ ₹ 15 ಕೋಟಿ ಅನುದಾನ ಕೇಂದ್ರದಿಂದ ಬರಲಿದೆ. ಸಿಆರ್‌ಸಿ ಸೆಂಟರ್‌ ಆರಂಭಿಸಲು ಒತ್ತಾಯಿಸಿದ್ದೇನೆ’ ಎಂದು ಡಾ.
ಸಿದ್ದೇಶ್ವರ ತಿಳಿಸಿದರು.

ಟ್ರ್ಯಾಕ್ಟರ್‌ಗಳಿಗೆ ಎಂಆರ್‌ಪಿ ಇರಲಿಲ್ಲ. ಟ್ರ್ಯಾಕ್ಟರ್‌ ಒದಗಿಸುವ ಏಜೆನ್ಸಿಗಳು ಹೆಚ್ಚು ಬೆಲೆ ತೋರಿಸಿ ರಿಯಾಯಿತಿ ನೀಡುವಂತೆ ಮಾಡುತ್ತಿದ್ದರು. ಇನ್ನು ಮುಂದೆ ಎಂಆರ್‌ಪಿಗೇ ಮಾರಬೇಕು ಎಂದು ಸಚಿವರಾದ ಶೋಭಾ ಕರಂದ್ಲಾಜೆ, ತೋಮರ್‌ ಜತೆ ಮಾತನಾಡಿದ್ದೆ. ಅದೀಗ ಜಾರಿಗೆ ಬಂದಿದೆ ಎಂದರು.

ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಮೇಯರ್ ಎಸ್.ಟಿ. ವೀರೇಶ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಡಿ.ಎಸ್. ಶಿವಶಂಕರ, ದೇವರಮನಿ ಶಿವಕುಮಾರ, ಕೊಂಡಜ್ಜಿ ಜಯಪ್ರಕಾಶ, ಎನ್.ಜಿ. ಪುಟ್ಟಸ್ವಾಮಿ, ಎಚ್.ಪಿ. ವಿಶ್ವಾಸ್‌ ಇದ್ದರು.

‘ಜಿಲ್ಲೆಗೊಂದು ಸಚಿವ ಸ್ಥಾನ ಕೊಡಿಸಲು ನಾನೂ ಪ್ರಯತ್ನಿಸುವೆ’

ದಾವಣಗೆರೆ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ದಾವಣಗೆರೆ ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಯಾರಿಗಾದರೂ ಒಬ್ಬರಿಗೆ ನೀಡಬೇಕು ಎಂಬುದು ನನ್ನ ಒತ್ತಾಯ. ಇಂಥವರಿಗೇ ನೀಡಿ ಎಂದು ನಾನು ಹೇಳಕ್ಕಾಗಲ್ಲ. ಜಿಲ್ಲೆಯ ಐವರು ‌ಶಾಸಕರು ಒಬ್ಬರ ಹೆಸರನ್ನೇ ಹೇಳಿದರೆ ಇನ್ನೂ ಒಳ್ಳೆಯದು’ ಎಂದು ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ನನ್ನ ಕೈಯಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನ ಕೊಡಿಸಲಾಗಿಲ್ಲ. ಉಪಯೋಗ ಇಲ್ಲದ ಸಂಸದ ಅಂತಾನೇ ತಿಳಿದುಕೊಳ್ಳಿ’ ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಉತ್ತರಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರಿಗೂ ಅವಕಾಶ ನೀಡಬೇಕಿತ್ತು. ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಸಚಿವಸ್ಥಾನಗಳನ್ನು ಹಂಚಿಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾರು ಸಚಿವರಾದರೂ ಪರವಾಗಿಲ್ಲ ಎಂದು ಹೇಳುತ್ತಲೇ ಐವರು ಶಾಸಕರಲ್ಲಿ ಪ್ರೊ. ಲಿಂಗಣ್ಣ ಅವರನ್ನು ಬಿಟ್ಟು ಉಳಿದ ನಾಲ್ವರು ಲಾಬಿ ಮಾಡಿದ್ದಾರೆ. ಆದರೆ ಸಿಕ್ಕಿಲ್ಲ. ಇನ್ನೂ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಬಾಕಿ ಇದೆ. ಅದರಲ್ಲಿ ಒಂದನ್ನು ಜಿಲ್ಲೆಗೆ ನೀಡಬೇಕು ಎಂದು ಒತ್ತಾಯಿಸುತ್ತೇನೆ’ ಎಂದು ತಿಳಿಸಿದರು.

‘75 ವರ್ಷ ದಾಟಿದವರಿಗೆ ನಮ್ಮಲ್ಲಿ ಅವಕಾಶ ನೀಡುವುದಿಲ್ಲ. ಅದೊಂದೆ ಕಾರಣದಿಂದ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಅದು ಬಿಟ್ಟು ಬೇರೆ ಯಾವ ಒತ್ತಡವೂ ಇರಲಿಲ್ಲ' ಎಂದು ಸಮಜಾಯಿಷಿ ನೀಡಿದರು. ಕೇರಳದಲ್ಲಿ 85 ವರ್ಷ ದಾಟಿರುವ ಶ್ರೀಧರನ್‌ ಅವರನ್ನು ಕಣಕ್ಕಿಳಿಸಿದಾಗ ವಯಸ್ಸಿನ ವಿಚಾರ ಬರಲಿಲ್ಲ ಎಂಬ ಪ್ರಶ್ನೆಗೆ, ‘ಶ್ರೀಧರನ್‌ ವಿಚಾರ ನನಗೆ ಗೊತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.