ADVERTISEMENT

ಜನರ ನಡುವೆ ಇರುವ ಅಧಿಕಾರಿ ಹೆಚ್ಚು ಇಷ್ಟ; ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ

ಹೊನ್ನಾಳಿ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ವಾರದ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:58 IST
Last Updated 15 ಜೂನ್ 2022, 6:58 IST
ಹೊನ್ನಾಳಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕುಂದಗೋಳದಿಂದ ಬಂದಿದ್ದ ರೈತಮುಖಂಡರೊಂದಿಗೆ ಚರ್ಚಿಸಿದರು.
ಹೊನ್ನಾಳಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕುಂದಗೋಳದಿಂದ ಬಂದಿದ್ದ ರೈತಮುಖಂಡರೊಂದಿಗೆ ಚರ್ಚಿಸಿದರು.   

ಹೊನ್ನಾಳಿ: ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ದರ್ಬಾರ್ ಮಾಡುವ ಅಧಿಕಾರಿಗಳಿಗಿಂತ ಜನರ ನಡುವೆ ಇದ್ದು ಸಮಸ್ಯೆಗಳಿಗೆ ಪರಿಹಾರ ನೀಡುವ ಅಧಿಕಾರಿಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಕಾರ್ಯಕ್ರಮ ಹೆಚ್ಚು ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಗೆ ವಾರದ ಭೇಟಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಆರ್‍ಆರ್ ಸೆಕ್ಷನ್‌ಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸ್ವತಃ ಜಿಲ್ಲಾಧಿಕಾರಿ ಅವರೇ ತಾಲ್ಲೂಕು ಕಚೇರಿಗೆ ಬಂದು ಕುಳಿತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಚುರುಕಾಗುತ್ತಾರೆ. ಸರ್ಕಾರದ ಈ ಚಿಂತನೆಯನ್ನು ಅಭಿನಂದಿಸುತ್ತೇನೆ’ ಎಂದು ಮಹಾಂತೇಶ ಬೀಳಗಿ ಹೇಳಿದರು.

ADVERTISEMENT

‘ಕಳೆದ ಬಾರಿ ನಾನು ಸರ್ವೆ ಇಲಾಖೆಗೆ ಬಂದಿದ್ದ ದೂರುಗಳನ್ನು ಆಲಿಸಿದ್ದೆ. ಹದ್ದುಬಸ್ತು ಸೇರಿ ಹಲವು ಕಾರ್ಯಗಳು ಪ್ರಗತಿ ಕಂಡಿವೆ. ಬಗರ್‌ಹುಕುಂ ಸಾಗುವಳಿದಾರರ ಸಭೆ ಕರೆದು
ಹಕ್ಕುಪತ್ರ ನೀಡುವ ವಿಚಾರವನ್ನು ಸಮಿತಿ ಮುಂದೆ ಇಡುವಂತೆ ಸೂಚಿಸಿದ್ದೆ. ಆ ಕೆಲಸ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಆರ್‍ಆರ್ ಸೆಕ್ಷನ್‌ನಲ್ಲಿ ಜೆರಾಕ್ಸ್ ಯಂತ್ರವನ್ನು ಸ್ಥಾಪಿಸಿರುವುದರಿಂದ ಕಡತಗಳ ಜೆರಾಕ್ಸ್‌ ಮಾಡಿಸಲು ಹೊರಗಡೆ ಹೋಗುವ ಅವಶ್ಯಕತೆ ಇಲ್ಲ. ಕಚೇರಿಯಲ್ಲಿಯೇ ಜೆರಾಕ್ಸ್ ಮಾಡಿಕೊಡಲಾಗುತ್ತಿದೆ. 32 ದಿನಗಳಿಗೆ ಮ್ಯೂಟೇಶನ್ ಕೊಡಿಸುವ ಪ್ರಯತ್ನಗಳು ನಡೆದಿವೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಚ್.ಜೆ. ರಶ್ಮೀ, ಗ್ರೇಡ್ -2 ತಹಶೀಲ್ದಾರ್ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಸೇರಿ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.