ದಾವಣಗೆರೆಯ ಗೃಹರಕ್ಷಕ ದಳದ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ರೈಫಲ್ ಡ್ರೀಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ಡಿ.ಮಂಗಳಾ ಮತ್ತು ಎಂ.ಸಿ. ಮಂಜುಳಾ ಅವರಿಗೆ ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ್ ಅವರು ಪ್ರಶಸ್ತಿಪತ್ರ ವಿತರಿಸಿದರು
ದಾವಣಗೆರೆ: ಕ್ರೀಡೆ, ಸಾಹಿತ್ಯ, ಕಲೆ, ಸಂಗೀತಕ್ಕೆ ದೇಶ ದೇಶಗಳ ನಡುವಿನ ವೈರತ್ವ ಮರೆಸಿ ಬಾಂಧವ್ಯ ಬೆಸೆಯುವ ಸಾಮರ್ಥ್ಯವಿದೆ ಎಂದು ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ವಾಸ್ಥ್ಯವೂ ಲಭ್ಯವಾಗುತ್ತದೆ. ದೇಶದ ಗಡಿ ರಕ್ಷಣೆಯಲ್ಲಿ ಸೈನಿಕರು, ದೇಶದೊಳಗೆ ಕಾನೂನು, ಶಿಸ್ತು, ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿರುವಂತೆ ಸಾಮಾಜಿಕ ಸುವ್ಯವಸ್ಥೆಯ ಸಾಕಾರದಲ್ಲಿ ಗೃಹರಕ್ಷಕರ ಸೇವೆಯೂ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
‘1940ರಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ನಡುವೆ ಸಮರ ನಡೆಯುತ್ತಿದ್ದಾಗ ಬ್ರಿಟನ್ ಸೈನ್ಯದ ಸಹಕಾರಕ್ಕೆ ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರು ಬರುವಂತೆ ಸೇನೆಯ ಕಾರ್ಯದರ್ಶಿ ಆಂತೋನಿ ಈಡನ್ ಕರೆ ಕೊಟ್ಟರು. ಅದು ‘ಲೋಕಲ್ ಡಿಫೆನ್ಸ್ ವಾಲೆಂಟೈರ್ಸ್’ ಜನ್ಮತಾಳು ಕಾರಣವಾಯಿತು. ಮುಂದೆ ಇದೇ ‘ಹೋಂ ಗಾರ್ಡ್’ ಹೆಸರನ್ನು ಪಡೆಯಿತು. ನಮ್ಮ ದೇಶದಲ್ಲೂ ಇದು ಆರಂಭವಾಯಿತು. ಸದ್ಯ ದೇಶದಲ್ಲಿ ಸುಮಾರು 5,74,000 ಹೋಂಗಾರ್ಡ್‌ಗಳು ಕಾರ್ಯನಿರ್ವಹಿಸುತ್ತಿದ್ದು 1962ರ ಹೋಂ ಗಾರ್ಡ್ ಕಾಯ್ದೆ–35ರಂತೆ ರಾಜ್ಯದಲ್ಲೂ 420 ಘಟಕಗಳಲ್ಲಿ ಗೃಹರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕ ದಳದವರು ತ್ಯಾಗ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರು ರಾಜ್ಯಮಟ್ಟದಲ್ಲೂ ಜಯಶೀಲರಾಗಲಿ’ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಸುಜಿತ್‌ಕುಮಾರ್ ಎಸ್.ಎಚ್. ಹಾರೈಸಿದರು.
ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅಂಬರೀಶ್, ಆಶಾ, ಶೋಭಾ, ಸರಸ್ವತಿ, ಮನ್ಸೂರ್ ಅಹಮದ್, ತಿಪ್ಪೇಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.