ADVERTISEMENT

ದೇವರ ಹೆಸರಲ್ಲಿ ಆಹಾರ ಚೆಲ್ಲದಿರಿ

‘ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಕಾರ್ಯಕ್ರಮದಲ್ಲಿ ಕೂಡಲಸಂಗಮ ಶ್ರೀ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:25 IST
Last Updated 1 ಆಗಸ್ಟ್ 2019, 14:25 IST
ದಾವಣಗೆರೆ ಕೊಂಡಜ್ಜಿ ರಸ್ತೆಯ ಬಿ.ಜೆ.ಎಂ. ಸ್ಕೂಲ್‌ನಲ್ಲಿ ಗುರುವಾರ ನಡೆದ 22ನೇ ವರ್ಷದ ‘ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಸಪ್ತಾಹದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಶಾಲಾ ಮಕ್ಕಳಿಗೆ ಹಾಲು ಮತ್ತು ಬನ್‌ ವಿತರಿಸಿದರು
ದಾವಣಗೆರೆ ಕೊಂಡಜ್ಜಿ ರಸ್ತೆಯ ಬಿ.ಜೆ.ಎಂ. ಸ್ಕೂಲ್‌ನಲ್ಲಿ ಗುರುವಾರ ನಡೆದ 22ನೇ ವರ್ಷದ ‘ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಸಪ್ತಾಹದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಶಾಲಾ ಮಕ್ಕಳಿಗೆ ಹಾಲು ಮತ್ತು ಬನ್‌ ವಿತರಿಸಿದರು   

ದಾವಣಗೆರೆ: ಆಹಾರವನ್ನು ಹೊರಗೆ ಚೆಲ್ಲಿದರೆ ಎಲ್ಲರೂ ಬೈಯ್ಯುತ್ತಾರೆ. ಆದರೆ, ದೇವರ ಹೆಸರಲ್ಲಿ ವ್ಯರ್ಥ ಮಾಡಿದರೆ ಸುಮ್ಮನಿರುತ್ತಾರೆ. ದೇವರ ಹೆಸರಲ್ಲಿಯೂ ಆಹಾರ ಚೆಲ್ಲುವುದು ಮೌಢ್ಯ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಿ.ಎಲ್‌.ಇ. ಟ್ರಸ್ಟ್‌, ಬಿ.ಜೆ.ಎಂ. ಸ್ಕೂಲ್‌, ಜಿ.ಎನ್‌.ಬಿ. ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಹಯೋಗದಲ್ಲಿ ಗುರುವಾರ ಬಿ.ಜೆ.ಎಂ. ಸ್ಕೂಲ್‌ನಲ್ಲಿ ನಾಗರ ಪಂಚಮಿ ಪ್ರಯುಕ್ತ ನಡೆದ 22ನೇ ವರ್ಷದ ‘ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಹಬ್ಬಹರಿದಿನಗಳ ಸಾಂಸ್ಕೃತಿಕ ರಾಷ್ಟ್ರ. 4000ಕ್ಕೂ ಅಧಿಕ ಜಾತಿಗಳಿರುವ ಈ ದೇಶದಲ್ಲಿ ಪ್ರತಿ ಸಮುದಾಯವೂ ಭಿನ್ನ ಹಬ್ಬಗಳನ್ನು ಮಾಡುತ್ತವೆ. ಸಂಸ್ಕೃತಿಯು ಸಂಸ್ಕಾರಕ್ಕೆ ಪೂರಕವಾಗಿರಬೇಕು. ಮಾನವೀಯತೆಗೆ ಹತ್ತಿರವಾಗಿರಬೇಕು. ಎಂದೋ ಹುಟ್ಟಿದ ಹಬ್ಬಗಳು ಈ ಶತಮಾನಕ್ಕೆ ಹೊಂದುತ್ತವೆಯೋ ಎಂದು ನೋಡಿ ಆಚರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಹಾಲಿನಂಥ ಮನಸ್ಸಿನವರು ವಿಷದ ಮನಸ್ಸಿರುವವನ್ನು ಪರಿವರ್ತಿಸಬೇಕು ಎಂಬ ಸಂಕೇತದ ಹಬ್ಬ ಇದು. ಬಸವಣ್ಣ ಕೂಡ ಹೇಳಿರುವುದು ಜಗತ್ತಲ್ಲಿ ಇರುವುದು ಒಳ್ಳೆಯವರು ಮತ್ತು ಕೆಟ್ಟವರು ಎಂಬ ಎರಡೇ ಕುಲ ಎಂದು. ಇದನ್ನು ಅರ್ಥ ಮಾಡಿಕೊಳ್ಳದೇ ಹಾಲು ಕುಡಿಯದ ಹಾವಿಗೆ ಹಾಲು ಎರೆದು ವ್ಯರ್ಥ ಮಾಡುತ್ತಿದ್ದೇವೆ. ಹಾಲನ್ನು ಹಾವು ಕುಡಿದರೆ ಅದು ಜೀರ್ಣವಾಗುವುದಿಲ್ಲ ಎಂಬುದು ವೈಜ್ಞಾನಿಕ ಸತ್ಯ. ಹಾಲು ಇಟ್ಟು ಪೂಜಿಸಬೇಕು ಎಂದು ನಿಮಗೆ ಅನ್ನಿಸಿದರೆ ಪೂಜಿಸಿ ಹಾಲನ್ನು ಕುಡಿಯಿರಿ ಚೆಲ್ಲಬೇಡಿ ಎಂದು ತಿಳಿಸಿದರು.

ಉತ್ತರಭಾರತ, ಮುಂಬೈ ಇನ್ನಿತರ ಕಡೆಗಳಲ್ಲಿ ನಾಗರ ಪಂಚಮಿಯ ದಿನ 10 ದಶಲಕ್ಷ ಲೀಟರ್‌ ಹಾಲು ವ್ಯರ್ಥವಾಗಿ ಹೋಗುತ್ತದೆ. ಅದೇ ಹೊತ್ತಿಗೆ ಅಪೌಷ್ಟಿಕತೆಯಿಂದ ಬಳಲುವ, ಉಣ್ಣಲು ಆಹಾರವಿಲ್ಲದ ಲಕ್ಷಾಂತರ ಜನ ಬೀದಿಯಲ್ಲಿರುತ್ತಾರೆ ಎಂದರು.

ಮದ್ಯಬೇಡ ನೀರುಬೇಕು, ಮೌಢ್ಯಬೇಡ ಮರಬೇಕು ಎಂಬ ಅಭಿಯಾನವನ್ನು ಮಠದಿಂದ ಮಾಡಲಾಗುತ್ತಿದೆ. ಅಲ್ಲದೇ ಹಾಲನ್ನು ಕಲ್ಲಿಗೆ ಎರೆಯದೇ ಮಕ್ಕಳಿಗೆ ಕುಡಿಸುವ ಸಪ್ತಾಹವನ್ನು ರಾಜ್ಯದ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ. ನಮ್ಮ ಕಣ್ಣ ಮುಂದಿರುವವರ ಹಸಿವನ್ನು ತಣಿಸಿದರೆ ದೇವರು ಸಂತೃಪ್ತನಾಗುತ್ತಾನೆ ಎಂಬುದನ್ನು ತಿಳಿಯಿರಿ ಎಂದು ತಿಳಿಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಭಕ್ತಿ ಮತ್ತು ಮೌಢ್ಯದ ನಡುವೆ ಸಣ್ಣ ಗೆರೆ ಇದೆ. ಭಕ್ತಿಯಿಂದ ಪೂಜಿಸುವುದು, ಗೌರವಿಸುವುದು ತಪ್ಪಲ್ಲ. ಆದರೆ ಭಕ್ತಿಯ ಹೆಸರಲ್ಲಿ ಮೌಢ್ಯಕ್ಕೆ ಎಳೆಯುವುದು ತಪ್ಪು. ಆಹಾರ, ನೀರು ಸೇರಿದಂತೆ ಯಾವುದೇ ಸಂಪತ್ತನ್ನು ಮೌಢ್ಯದ ಹೆಸರಲ್ಲಿ ಹಾಳು ಮಾಡಬಾರದು. ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಹಸಿವಿನಿಂದ ಬಂದವನ್ನು ಓಡಿಸುತ್ತೇವೆ. ತಿನ್ನದ ದೇವರಿಗೆ ಭಕ್ಷ್ಯ ಇಡುತ್ತೇವೆ. ಓದಬೇಕು ಎಂಬ ಹಂಬಲ ಇರುವ ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ಓದಲು ಸಾಧ್ಯವಿಲ್ಲದವರಿಗೆ ನೆರವಾಗುವುದಿಲ್ಲ. ಆದರೆ ಓದಲು ಮನಸ್ಸಿಲ್ಲದವರಿಗೆ ಒತ್ತಡ ಹಾಕಿ ಓದಿಸುತ್ತೇವೆ. ಇಂಥ ವೈರುಧ್ಯಗಳನ್ನು ಬಿಡಬೇಕು. ಬಸವಣ್ಣನ ಹಾದಿಯಲ್ಲಿ ಸಾಗಬೇಕು’ ಎಂದರು.

ವಿದ್ಯಾರ್ಥಿಗಳಿಗೆ ಹಾಲು, ಬನ್‌ ವಿತರಿಸಲಾಯಿತು. ಬಿಜೆಪಿ ಮುಖಂಡ ಕೆ.ಆರ್‌. ಪ್ರಭು, ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಉಪಸ್ಥಿತರಿದ್ದರು. ಟ್ರಸ್ಟ್‌ ಕಾರ್ಯದರ್ಶಿ ಕೆ.ಎಸ್‌. ಮಂಜುನಾಥ್‌ ಅಗಡಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಲಲಿತಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.