ADVERTISEMENT

ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ: ಎಂ.ಪಿ. ರೇಣುಕಾಚಾರ್ಯ

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:20 IST
Last Updated 21 ಸೆಪ್ಟೆಂಬರ್ 2020, 2:20 IST
ಹೊನ್ನಾಳಿ ತಾಲ್ಲೂಕು ಎಚ್. ಕಡದಕಟ್ಟೆ ಸಮೀಪದಲ್ಲಿರುವ ಕಿತ್ತೂರು ಚನ್ನಮ್ಮ ವಸತಿಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಭಾನುವಾರ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದರು.‌
ಹೊನ್ನಾಳಿ ತಾಲ್ಲೂಕು ಎಚ್. ಕಡದಕಟ್ಟೆ ಸಮೀಪದಲ್ಲಿರುವ ಕಿತ್ತೂರು ಚನ್ನಮ್ಮ ವಸತಿಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಭಾನುವಾರ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದರು.‌   

ಹೊನ್ನಾಳಿ: ‘ನಾನು ಎರಡು ಬಾರಿ ದೆಹಲಿಗೆ ಭೇಟಿ ನೀಡಿದ್ದು, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿಯೇ ವಿನಾ ಸಚಿವ ಸ್ಥಾನಕ್ಕೆ ಲಾಬಿ ಮಾಡಲು ಅಲ್ಲ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕು ಎಂಬು‌ದು ಜಿಲ್ಲೆಯ ಎಲ್ಲಾ ಶಾಸಕರ ಒತ್ತಾಯ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯಾಧ್ಯಕ್ಷರು, ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

‘ರಾಜಕಾರಣದಲ್ಲಿ ಯಾರೂ ಸನ್ಯಾಸಿ
ಗಳಲ್ಲ. ಸಚಿವ ಸ್ಥಾನಕ್ಕಾಗಿ ಅವಕಾಶ ಕೇಳುವುದು ತಪ್ಪಲ್ಲ. ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಏನು ಕ್ರಮ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ’ ಎಂದರು.

ADVERTISEMENT

‘ಶಾಸಕ ಎಸ್.ಎ. ರವೀಂದ್ರನಾಥ್ ನಿವಾಸ ಹಾಗೂ ಬೆಂಗಳೂರಿನ ನನ್ನ ಮನೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಿಗೆ ಸೇರಿ ಸಭೆ ಮಾಡಿದ್ದು ನಿಜ. ಜಿಲ್ಲೆಗೊಂದು ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದರು.

‘ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಕೋವಿಡ್, ಡಿ.ಜೆ.ಹಳ್ಳಿ ಗಲಭೆ ಸೇರಿ ಹಲವು ಸವಾಲುಗಳನ್ನು ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ತಾಲ್ಲೂಕಿನ ರಾಂಪುರ ಗೋವಿನಕೋವಿ ಗ್ರಾಮದ ನಡುವಿನ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಸೇರಿ ವಿವಿಧ ರಸ್ತೆಗಳ ಅಭಿವೃದ್ಧಿಗೆ ಅನುದಾನ ಕೇಳಿದ್ದೇನೆ. ₹ 600 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಸಂಬಂಧ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.