ADVERTISEMENT

ದಾವಣಗೆರೆ | ರಕ್ತದಾನ ಮಾಡಿ ಜೀವ ಉಳಿಸಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 17:10 IST
Last Updated 28 ಜೂನ್ 2020, 17:10 IST
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ದಾವಣಗೆರೆಯ ಲೈಫ್‌ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಸಂಸ್ಥೆಯಿಂದ ಭಾನುವಾರ ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಅಭಿನಂದಿಸಲಾಯಿತು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ದಾವಣಗೆರೆಯ ಲೈಫ್‌ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಸಂಸ್ಥೆಯಿಂದ ಭಾನುವಾರ ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಅಭಿನಂದಿಸಲಾಯಿತು.   

ದಾವಣಗೆರೆ: ಜಗತ್ತು ತಾಂತ್ರಿಕವಾಗಿ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯವಾಗಿ ಏನೂ ಇಲ್ಲ. ಒಬ್ಬರು ನೀಡುವ ರಕ್ತ ಇನ್ನೊಬ್ಬರ ಜೀವ ಉಳಿಸಲಿದ್ದು, ರಕ್ತದಾನದಂತಹ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಲೈಫ್‌ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ರಕ್ತದಾನ ಕುರಿತು ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕು. ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಸಿಬ್ಬಂದಿ ರಕ್ತದಾನಿಗಳಿದ್ದಾರೆ. ಕಷ್ಟದಲ್ಲಿದ್ದವರಿಗೆ ಹೋಗಿ ರಕ್ತ ನೀಡಿ ಬರುವ ಮೂಲಕ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ಕೊರೊನಾ ವೈರಸ್ ಇಡೀ ಜಗತನ್ನೇ ಭಯದಲ್ಲಿ ಇರಿಸಿದೆ. ದಾವಣಗೆರೆಯಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಕಂಡು ಬರುತ್ತಿದೆ. ಮಾಸ್ಕ್ ಧರಿಸದಿದ್ದರೆ ದಂಡ ಎಂದು ತಿಳಿದು ಜನರು ಸ್ವಲ್ಪ ಜಾಗೃತರಾಗುತ್ತಿದ್ದಾರೆ. ಆದರೆ, ಕಲಬುರಗಿಯಲ್ಲಿ ಮಾಸ್ಕ್ ಧರಿಸಿದವರನ್ನು ಹುಡುಕಬೇಕಾಗಿದೆ. ಹೆಲ್ಮೆಟ್, ಮಾಸ್ಕ್ ಬಳಸಿ ನಿಮ್ಮ ಜೀವವನ್ನು ನೀವೇ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೈಫ್‌ಲೈನ್ ಅಧ್ಯಕ್ಷ ಡಾ.ಎ.ಎಂ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಡಾ. ದೇವೆಂದ್ರಪ್ಪ, ಡಾ.ಜಗದೀಶ್ವರಿ, ಡಾ.ಜಿ.ಯು. ಕವಿತಾ, ಅನಿಲ್ ಬಾರಂಗಳ್, ಸಂತೋಷಕುಮಾರ್ ಗಾಯಕವಾಡ್, ಪೃಥ್ವಿ ಬಾದಾಮಿ, ಇನಾಯತ್‌ವುಲ್ಲಾ, ಮಾಧವ ಪದಕಿ, ಗೋಪಾಲಕೃಷ್ಣ, ಮಾಧವಿ ಗೋಪಾಲಕೃಷ್ಣ, ಡಿ. ಶೇಷಾಚಲ ಇತರರು ಇದ್ದರು.

ಲಾಕ್‌ಡೌನ್ ಸಂದರ್ಭದಲ್ಲಿ ರಕ್ತದಾನ ಮಾಡಿದ 55 ರಕ್ತದಾನಿಗಳಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.