ADVERTISEMENT

ರಾಜಕಾಲುವೆ, ಕುಡಿಯುವ ನೀರಿನ ಸ್ಥಾವರ ನಿರ್ಮಾಣ

ಜಗಳೂರು ಪಟ್ಟಣ ಪಂಚಾಯಿತಿ ಉಳಿತಾಯ ಬಜೆಟ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:27 IST
Last Updated 8 ಮಾರ್ಚ್ 2024, 16:27 IST
ಜಗಳೂರು ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಬಜೆಟ್ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ, ಆಡಳಿತಾಧಿಕಾರಿ ಚಂದ್ರಶೇಖರ್ ನಾಯ್ಕ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಭಾಗವಹಿಸಿದ್ದರು.
ಜಗಳೂರು ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಬಜೆಟ್ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ, ಆಡಳಿತಾಧಿಕಾರಿ ಚಂದ್ರಶೇಖರ್ ನಾಯ್ಕ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಭಾಗವಹಿಸಿದ್ದರು.   

ಜಗಳೂರು: ಇಲ್ಲಿನ ಪಟ್ಟಣ ಪಂಚಾಯಿತಿಯ 2024–25ನೇ ಸಾಲಿನ ಉಳಿತಾಯ ಬಜೆಟ್‌ಗೆ ಗುರುವಾರ ಅನುಮೋದನೆ ನೀಡಲಾಯಿತು.

ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಚಂದ್ರಶೇಖರನಾಯ್ಕ ಅವರು ₹20.31 ಕೋಟಿ ಆದಾಯ ನಿರೀಕ್ಷೆಯ ಆಯವ್ಯಯವನ್ನು ಮಂಡಿಸಿದರು.

ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು. 15ನೇ ಹಣಕಾಸು ಯೋಜನೆಯಡಿ ₹ 1 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ದೀಪ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿ, ಎಸ್‍ಎಫ್‍ಸಿ ವಿಶೇಷ ಅನುದಾನದಡಿ ₹ 1.50 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಸ್ಥಾವರ, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ₹ 44 ಲಕ್ಷ ವೆಚ್ಚದಲ್ಲಿ ರಾಜಕಾಲುವೆ, ರಸ್ತೆ, ಚರಂಡಿ, ವಿದ್ಯುತ್ ದೀಪ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಸೇರಿ ವಿವಿಧ ಯೋಜನೆಗಳಿಗೆ ₹ 2.29 ಕೋಟಿ ಖರ್ಚು ಮಾಡಲಾಗುತ್ತದೆ ಎಂದು ಆಡಳಿತಾಧಿಕಾರಿ ಚಂದ್ರಶೇಖರನಾಯ್ಕ ತಿಳಿಸಿದರು.

ADVERTISEMENT

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ‘ಕಳೆದ ಬಾರಿ ₹ 16 ಕೋಟಿ ಮೊತ್ತದ ಆಯವ್ಯಯ ಇತ್ತು. ಈ ಬಾರಿ ₹ 20 ಕೋಟಿಗೆ ಏರಿಕೆಯಾಗಿರುವುದು ಸೂಕ್ತವಾಗಿದೆ. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಪಕ್ಷಬೇಧ ಮರೆತು 18 ಸದಸ್ಯರು ಹೆಚ್ಚು ಒತ್ತು ನೀಡುವ ಮೂಲಕ ಸುಂದರ ನಗರವನ್ನಾಗಿ ಪರಿವರ್ತಿಸಬೇಕಿದೆ. ಜೆಸಿಆರ್ ಬಡಾವಣೆಯ ರಸ್ತೆ ಸಂಪೂರ್ಣ ಕಿತ್ತು ಹೋಗಿ ವಾಹನ ಸೇರಿ ಪಾದಚಾರಿಗಳು ಸಹ ಸಂಚರಿಸದಂತಾಗಿದೆ. ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು’ ಎಂದರು.

‘ಮುಕ್ತಿ ವಾಹನದ ಅವಶ್ಯಕತೆ ಇದ್ದು, ಸ್ವಂತ ಖರ್ಚಿನಲ್ಲಿ ಎರಡು ವಾಹನಗಳನ್ನು ಕೊಡುಗೆಯಾಗಿ ನೀಡಲಾಗುವುದು. ಒಂದು ವಾಹನ ಮುಕ್ತಿವಾನವಾಗಿದ್ದು, ಇನ್ನೊಂದು ವಾಹನದಲ್ಲಿ ಅಪಘಾತವಾಗಿ ಸಾವನ್ನಪ್ಪಿದ ವ್ಯಕ್ತಿಯ ಶವವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ನಿವೇಶನ ರಹಿತರನ್ನು ಗುರುತಿಸಿ ಅರ್ಹರಿಗೆ ನಿವೇಶನ ಕಲ್ಪಿಸಿಕೊಡಬೇಕು. ನೂತನ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ನೇರ ರಸ್ತೆ ನಿರ್ಮಿಸಬೇಕಿದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದರು.

ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಹಾಗೂ ಎಲ್ಲ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.