ದಾವಣಗೆರೆ: ಅವಳಿ ನಗರದಲ್ಲಿ 50 ಎಕರೆ ಜಮೀನು ಲಭ್ಯವಾದರೆ ಬಡಾವಣೆ ನಿರ್ಮಿಸಲು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ಸಿದ್ಧವಿದೆ. ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಕಡಿಮೆ ದರದಲ್ಲಿ ನಿವೇಶನ ನೀಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ನೂತನ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ತಿಳಿಸಿದರು.
‘ಧೂಡಾ’ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಅವರು, ‘ಸಂಕಷ್ಟದಲ್ಲಿರುವ ಆಟೊ, ಟ್ಯಾಕ್ಸಿ ಚಾಲಕರು, ಬಸ್ ಕಾರ್ಮಿಕರು, ಚಿತ್ರಮಂದಿರದ ಕಾರ್ಮಿಕರಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲಾಗುವುದು. ಶಾಮನೂರು ಕುಟುಂಬದ ನೆರವಿನೊಂದಿಗೆ ಬಡಾವಣೆ ನಿರ್ಮಾಣ ಹಾಗೂ ನಿವೇಶನ ವಿತರಣೆಗೆ ಕೆಲಸ ಮಾಡುತ್ತೇನೆ’ ಎಂದರು.
‘ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಧಿಕಾರವಧಿಯಲ್ಲಿ ‘ಧೂಡಾ’ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ನಿವೇಶನ ಹಂಚಿಕೆಯಾಗಿವೆ. ಶಾಮನೂರು ಕುಟುಂಬವೇ ಅಧಿಕಾರದಲ್ಲಿರುವ ಕಾರಣಕ್ಕೆ ಬಡಾವಣೆ ನಿರ್ಮಾಣ ಹಾಗೂ ನಿವೇಶನ ಹಂಚಿಕೆ ಸುಲಭವಾಗಲಿದೆ. ನಗರವನ್ನು ನಾಲ್ಕು ದಿಕ್ಕುಗಳಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಧೂಡಾ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷಾಂತರಿಗಳಿಗೆ ಮಣೆ ಹಾಕಿತ್ತು. ಕಾಂಗ್ರೆಸ್ ಇಂತಹ ತಪ್ಪು ಎಂದಿಗೂ ಮಾಡುವುದಿಲ್ಲ. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಹರ್ಷದಾಯಕ ಸಂಗತಿ. ಬಡವರ ಪರವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.
‘ದಾವಣಗೆರೆ ನಗರ ವ್ಯಾಪ್ತಿಗೆ 500 ಆಶ್ರಯ ಮನೆಗಳು ಮಂಜೂರಾಗಿವೆ. ವಸತಿ ಸೌಲಭ್ಯ ಕೋರಿ 400 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಮತ್ತೆ ಅರ್ಜಿ ಪಡೆದು ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮಾಂತರ ವ್ಯಾಪ್ತಿಗೆ 1,000 ಮನೆಗಳು ಲಭ್ಯವಾಗಿವೆ. ನಿವೇಶನ ಇರುವವರಿಗೆ ವಸತಿ ಸೌಲಭ್ಯ ಸಿಗಲಿದೆ’ ಎಂದು ಮಾಹಿತಿ ನೀಡಿದರು.
‘ಧೂಡಾ’ ಸದಸ್ಯರಾದ ಎಂ.ಮಂಜುನಾಥ್, ಎಂ.ಆರ್.ವಾಣಿ, ಎಚ್.ಗಿರೀಶ್, ಎಚ್.ಜಬ್ಬರ್ ಖಾನ್, ಆಯುಕ್ತ ಹುಲ್ಮನಿ ತಿಮ್ಮಣ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.