ADVERTISEMENT

ದಂಡಿ ದುರ್ಗಮ್ಮ ಜಾತ್ರೆ ನಾಳೆಯಿಂದ

ಉತ್ಸವದಲ್ಲಿ ಭಕ್ತರ ಬೆನ್ನ ಮೇಲೆ ನಡೆಯುವ ದೇವಿ ಪೂಜಾರಿ * ಜಾತಿ ಭೇದವಿಲ್ಲದ ಸಹಪಂಕ್ತಿ ಭೋಜನ

ರಾಮಚಂದ್ರ ನಾಗತಿಕಟ್ಟೆ
Published 2 ಜನವರಿ 2019, 19:45 IST
Last Updated 2 ಜನವರಿ 2019, 19:45 IST
ಭಕ್ತರ ಬೆನ್ನ ಮೇಲೆ ದೇವಿ ಪೂಜಾರಿ ನಡೆದುಕೊಂಡು ಹೋಗುತ್ತಿರುವುದು. (ಸಂಗ್ರಹ ಚಿತ್ರ)
ಭಕ್ತರ ಬೆನ್ನ ಮೇಲೆ ದೇವಿ ಪೂಜಾರಿ ನಡೆದುಕೊಂಡು ಹೋಗುತ್ತಿರುವುದು. (ಸಂಗ್ರಹ ಚಿತ್ರ)   

ಉಚ್ಚಂಗಿದುರ್ಗ: ವಿಶಿಷ್ಟ ಆಚರಣೆಯಿಂದಲೇ ಪ್ರಸಿದ್ಧಿ ಪಡೆದ ದಂಡಿ ದುರ್ಗಮ್ಮ ದೇವಿ ಜಾತ್ರೋತ್ಸವದ ಸಂಭ್ರಮ ಸಮೀಪದ ಅರಸೀಕೆರೆ ಗ್ರಾಮದಲ್ಲಿ ಗದಿಗೆದರಿದೆ.

ಜ. 4ರಿಂದ 6ರವರೆಗೆ ಜಾತ್ರೆ ನಡೆಯಲಿದ್ದು, ಗ್ರಾಮದಲ್ಲಿ ಈಗಾಗಲೇ ಸಂಭ್ರಮದ ವಾತಾವತಣ ಮನೆ ಮಾಡಿದೆ. ಗ್ರಾಮಸ್ಥರ ಸಂಬಂಧಿಕರು, ದೇವಿಯ ಭಕ್ತರು ಅರಸೀಕೆರೆಯತ್ತ ಮುಖಮಾಡಿದ್ದಾರೆ.

ಜಾತ್ರೆಯ ಕೊನೆಯ ದಿನದಂದು ಬೆಳಗಿನ ಜಾವ ದೇವಸ್ಥಾನದಿಂದ ದಂಡಿನ ದುರ್ಗಮ್ಮ ದೇವಿ ಉತ್ಸವ ಮೂರ್ತಿಯನ್ನು 2 ಕಿ.ಮೀ. ದೂರವಿರುವ ಹೊಳೆ (ಹೊಂಡ) ಪೂಜೆಗೆ ಕರೆ ತರಲಾಗುತ್ತದೆ. ಪೂಜೆ ಮುಗಿಸಿಕೊಂಡು ದೇವಿಯ ಕೇಲು (ಪೂಜಾ ಸಾಮಗ್ರಿಗಳುಳ್ಳ ಮಡಿಕೆ) ಹೊತ್ತ ಇಬ್ಬರು ಪೂಜಾರಿಗಳು ಮತ್ತೆ ದೇಗುಲದತ್ತ ಸಾಗುತ್ತಾರೆ.

ADVERTISEMENT

ಈ ಕೇಲು ಹೊತ್ತ ಪೂಜಾರಿಗಳ ಪಾದಸ್ಪರ್ಶದಿಂದ ಕಾಯಿಲೆಗಳು ದೂರವಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಕುಲ ಭೇದವಿಲ್ಲದೇ ಸಾಲಾಗಿ ಮಲಗಿದ್ದ ಸಾವಿರಾರು ಭಕ್ತರ ಬೆನ್ನ ಮೇಲೆ ದಲಿತ ಪೂಜಾರಿಗಳು ನಡೆದು ಹೋಗುತ್ತಾರೆ. ಈ ಆಚರಣೆಯಲ್ಲಿ ಭಾಗವಹಿಸಲೆಂದೇ ದಾವಣಗೆರೆ, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಚಿತ್ರದುರ್ಗದಿಂದಲೂ ಅಲ್ಲದೆ ನೆರೆರಾಜ್ಯ ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತರು ಬರುತ್ತಾರೆ.

ಹೊಳೆ ಪೂಜೆ ನಂತರ ಇಬ್ಬರು ಪೂಜಾರಿಗಳು ಕೇಲು ಹೊತ್ತ ಸಾಗುತ್ತಾರೆ. ಉಳಿದ ಆರು ಮಂದಿ ವಾದ್ಯಗಳ ಸದ್ದಿನೊಂದಿಗೆ ಭಕ್ತರ ಅಕ್ಕ-ಪಕ್ಕ ನಡೆದು ಹೋಗುತ್ತಾರೆ.

ಆರೋಗ್ಯದಾತೆ ದುರ್ಗಮ್ಮ: ‘ಜೀವನದ ಜಂಜಾಟದಲ್ಲಿ ನೊಂದವರು ‘ಜಾತ್ರೆಯಲ್ಲಿ ನಿನಗೆ ಅಡ್ಡ ಮಲಗುತ್ತೇವೆ’ ಎಂದು ದೇವಿಗೆ ಹರಕೆ ಹೊತ್ತಿರುತ್ತಾರೆ. ಅದನ್ನು ದೇವಿಯ ಜಾತ್ರೆಯಲ್ಲಿ ತೀರಿಸುತ್ತಾರೆ. ದೇವಿಗೆ ಶರಣಾಗುತ್ತಾರೆ. ಕೇಲು ಹೊತ್ತು ಬರುವ ದಲಿತ ಪೂಜಾರಿಗಳ ಪಾದ ಸ್ಪರ್ಶ ಮಾಡಿಸಿಕೊಂಡರೆ ದೇವಿಯ ಪಾದ ಸ್ಪರ್ಶವೇ ಆದಂತೆ ಎಂಬ ಪ್ರತೀತಿಯಿದೆ. ಕಾಯಿಲೆಗಳು, ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆಯಿಂದ ಈ ಆಚರಣೆ ಅನಾದಿ ಕಾಲದಿಂದಲೂ ನಡೆಯುತ್ತಿದೆ’ ಎನ್ನುತ್ತಾರೆ ದೇವಸ್ಥಾನದ ಅರ್ಚಕ ದುರ್ಗದಯ್ಯ ಪೂಜಾರಿ.

ಪ್ರಾಣಿ ಬಲಿ ನಿಷೇಧ: ಹೊಳೆ ಪೂಜೆ ಮುಗಿಸಿ ದೇವಸ್ಥಾನಕ್ಕೆ ಹಿಂದಿರುವಾಗ ದೇವಿಗೆ ಪ್ರಾಣಿ ಬಲಿ ಕೊಡಲಾಗುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಕುರಿ, ಕೋಳಿಗಳನ್ನು ದೇವಿಗೆ ಅರ್ಪಿಸಲಾಗುತ್ತಿತ್ತು. ಗ್ರಾಮದ ಕರಿಗಲಿನಿಂದ ಆರಂಭವಾಗುತ್ತಿದ್ದ ಪ್ರಾಣಿಬಲಿ ದೇವಸ್ಥಾನದ ದಾರಿಯುದ್ದಕ್ಕೂ ನಡೆಯುತ್ತಿತ್ತು. ಈ ಆಚರಣೆಯನ್ನು 4 ವರ್ಷಗಳಿಂದ ನಿಷೇಧಿಸಲಾಗಿದೆ. ಪ್ರಾಣಿ ಬಲಿ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಜಾತ್ರೆ ಹಿನ್ನಲೆ: ‘ನೂರಾರು ವರ್ಷಗಳ ಹಿಂದೆ ಬಳ್ಳಾರಿ ಸೀಮೆಯಲ್ಲಿ ಸಂಭವಿಸಿದ ಭೀಕರ ಕಾಯಿಲೆ ತಲ್ಲಣ ಸೃಷ್ಟಿಸಿತ್ತು. ಸಾವು, ನೋವು ಸಂಭವಿಸಿದವು. ಆಗ ಪಾರ್ವತಿ ದೇವಿ ದುರ್ಗೆಯಾಗಿ ಬಂದು ಬಳ್ಳಾರಿಯಲ್ಲಿ ನೆಲೆಸಿದಳು. ರಾಜರ ಓಲೆ ಮುಟ್ಟಿಸಲು ಹೋದ ಅರಸೀಕೆರೆಯ ಮರಿಯಜ್ಜನ ಕಟ್ಟಿಗೆಯಲ್ಲಿ ದೇವಿಯು ಅರಸಿಕೇರಿಗೆ ಬಂದು ನೆಲೆಸಿ, ಪವಾಡಗಳನ್ನು ಸೃಷ್ಟಿಸಿದಳು ಎಂಬ ನಂಬಿಕೆಯಿದೆ. ನಂತರ ಇಲ್ಲಿ ದೇವಸ್ಥಾನ ನಿರ್ಮಾಣವಾಗಿ, ಜಾತ್ರೆ ನಡೆಯುತ್ತಿದೆ’ ಎನ್ನುತ್ತಾರೆ ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜಾರಿ ಮರಿಯಪ್ಪ.

ದುರ್ಗಿಯರ ಊಟ:ಜಾತ್ರೆಗೆ ಬರುವ ಭಕ್ತರು ನೀಡುವ ಅಕ್ಕಿ, ಹಾಲು, ಮೊಸರು ಬಳಸಿ, ಪ್ರಸಾದ ತಯಾರಿಸಲಾಗುತ್ತದೆ. ಜಾತ್ರೆಯ ಕೊನೆಯ ದಿನದಂದು ಜಾತಿ, ಮತ, ಮೇಲು-ಕೀಳು ಎನ್ನದೇ ದೇವಸ್ಥಾನದ ಮುಂಭಾಗದ ಆವರಣದಲ್ಲಿ ದುರ್ಗಿಯರ ಊಟ ಎನ್ನುವ ಹೆಸರಿನಲ್ಲಿ ಎಲ್ಲಾ ಸಮುದಾಯವರು ಸಹಪಂಕ್ತಿಯಲ್ಲಿ ಪ್ರಸಾದ ಸೇವಿಸುವುದು ಜಾತ್ರೆಯ ವಿಶೇಷ.

ಪ್ರತಿ ವರ್ಷದಂತೆ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಜ. 4ರಂದು ಕಾರ್ತಿಕೋತ್ಸವ, 5ರಂದು ಅರ್ಚನೆ, ಭಜನೆ, ದೀಡು ನಮಸ್ಕಾರ ನಡೆಯಲಿವೆ. 6ರಂದು ಹೊಳೆ ಪೂಜೆ ನೆರೆವೇರಿಸಗುವುದು.
–ದುರ್ಗದಯ್ಯ ಪೂಜಾರಿ, ದೇವಸ್ಥಾನದ ಅರ್ಚಕ

* * *
ಜಾತ್ರೆಯಲ್ಲಿ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಜ. 5ರಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರ 67ನೇ ಸಂವತ್ಸರದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಗಾಯಕ ರಾಜೇಶ್ ಕೃಷ್ಣನ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
–ಎಸ್.ವಿ. ರಾಮಚಂದ್ರ, ಶಾಸಕ

* * *
ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಾರೆ. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಹೆಚ್ಚುವರಿಯಾಗಿ ಸಿಬ್ಬಂದಿ ನಿಯೋಜನೆಗೆ ಮನವಿ ಸಲ್ಲಿಸಲಾಗಿದೆ. ಪ್ರಾಣಿ ಬಲಿ ಸೇರಿ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗಿದೆ.
–ಸಿದ್ದೇಶ್, ಪಿಎಸ್ಐ, ಅರಸೀಕೆರೆ ಪೊಲೀಸ್ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.