
ತಗ್ಗಿಹಳ್ಳಿ(ನ್ಯಾಮತಿ): ತಾಲ್ಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ 26 ವರ್ಷಗಳ ನಂತರ ದುರ್ಗಮ್ಮ ದೇವಿಯ ಜಾತ್ರೆಗೆ ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಗ್ರಾಮಸ್ಥರು ಚಾಲನೆ ನೀಡಿದ್ದಾರೆ.
ಮಂಗಳವಾರ ಗ್ರಾಮದ ಬಸವೇಶ್ವರಸ್ವಾಮಿ ಕೆಂಡಾರ್ಚನೆ ನೆರವೇರಿತು. ವಿವಿಧ ವಾದ್ಯಮೇಳಗಳೊಂದಿಗೆ ಮುತೈದೆಯರು ಗಂಗೆ ಪೂಜೆಯನ್ನು ನೆರವೇರಿಸಿದರು. ನಂತರ ವೀರಗಾಸೆಯ ಕಲಾತಂಡಗಳೊಂದಿಗೆ ಗ್ರಾಮದ ದೇವರುಗಳು ಮತ್ತು ಸ್ವಾಮಿಯ ಭಕ್ತರು ಕೆಂಡವನ್ನು ತುಳಿದರು.
ಬುಧವಾರ ಹುರಳೇಹಳ್ಳಿ ಗ್ರಾಮದ ದೊಣ್ಣೆ ಕೆಂಚಮ್ಮ ದೇವತೆಯ ಸಮ್ಮುಖದಲ್ಲಿ ಭಕ್ತರು ಮತ್ತು ಮುತೈದೆಯರು ದುರ್ಗಮ್ಮ ದೇವಿಗೆ ಉಡಿ ತುಂಬುವ ಶಾಸ್ತ್ರವನ್ನು ನೆರವೇರಿಸಲಿದ್ದಾರೆ. ಅಂದು ಮುಂಜಾನೆಯಿಂದಲೇ ಭಕ್ತರು ದೇವಿಗೆ ಶ್ರದ್ಧಾಭಕ್ತಿಯಿಂದ ಹರಕೆ ಸಲ್ಲಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ.
ಗ್ರಾಮ ಸುಭಿಕ್ಷಾ: ‘ಅಂದಾಜು ₹60 ಲಕ್ಷ ವೆಚ್ಚದಲ್ಲಿ ದುರ್ಗಮ್ಮ ದೇವಿಯ ನೂತನ ದೇವಸ್ಥಾನವನ್ನು ನಿರ್ಮಿಸಿದ್ದು, ದೇವಿಯ ಜಾತ್ರೆ ಆಚರಿಸಿದರೆ ಗ್ರಾಮದವರಿಗೆ ಯಾವುದೇ ರೋಗ-ರುಜಿನಗಳು ಬರುವುದಿಲ್ಲ. ಗ್ರಾಮವು ಸುಭಿಕ್ಷವಾಗಿರುತ್ತದೆ ಎಂಬುದು ನಮ್ಮ ಪೂರ್ವಿಕರ ನಂಬಿಕೆ’ ಎಂದು ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವದ ಸಮಿತಿ ಅಧ್ಯಕ್ಷ ಎಚ್.ಎನ್.ನಾಗರಾಜ ಮಾಹಿತಿ ನೀಡಿದರು.
ಕುಸ್ತಿ ಪಂದ್ಯಾವಳಿ: ಹಬ್ಬದ ಪ್ರಯುಕ್ತ ಅಂತರರಾಜ್ಯ ಮಟ್ಟದ ಹೊನಲು-ಬೆಳಕಿನ ಕುಸ್ತಿ ಪಂದ್ಯಾವಳಿಯನ್ನು ಜ. 16 ರಂದು ಆಯೋಜಿಸಿದ್ದು, ಈ ಕುಸ್ತಿಯಲ್ಲಿ ಸೆಣಸಾಡಲು ಬೇರೆ- ಬೇರೆ ರಾಜ್ಯದ ಪ್ರಮುಖ ಕುಸ್ತಿ ಪಟುಗಳು ಆಗಮಿಸಲಿದ್ದಾರೆ ಎಂದು ಗ್ರಾಮದ ಪೈಲ್ವಾನ್ ನಾಗರಾಜ್ ತಿಳಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿಯ ಮುಖಂಡರಾದ ಮಂಜಪ್ಪ, ದಾನಪ್ಪ, ಶಿಕ್ಷಕ ಈಶ್ವರಪ್ಪ, ಆಹಾರ ನಿರೀಕ್ಷಕ ಎ.ಎಸ್.ನಾಗರಾಜ್, ರವಿಕುಮಾರ್, ಶಂಕ್ರಪ್ಪ, ಮಂಜಪ್ಪಾರ ಬಸವರಾಜಪ್ಪ, ಗಣೇಶ, ಮಂಜಪ್ಪ, ಕುಬೇರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.