ADVERTISEMENT

ದಾವಣಗೆರೆ: ಮುಸುಕಿದ ಮೋಡ, ಮುಂದುವರಿದ ಮಳೆ

ನಾಲ್ಕೈದು ದಿನಗಳಿಂದ ಬಂದು ಹೋಗುತ್ತಿದ್ದ ಮಳೆ ಬುಧವಾರ ಎಡೆಬಿಡದೆ ಸುರಿದಿದೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 4:55 IST
Last Updated 7 ಅಕ್ಟೋಬರ್ 2021, 4:55 IST
ದಾವಣಗೆರೆಯ ಎಂಸಿಸಿ ಬಡಾವಣೆ ರಸ್ತೆಯಲ್ಲಿ ಬುಧವಾರ ಸುರಿದ ಜೋರು ಮಳೆಯನ್ನು ಆನಂದಿಸುತ್ತ ಸಾಗುತ್ತಿರುವ ಸವಾರರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಎಂಸಿಸಿ ಬಡಾವಣೆ ರಸ್ತೆಯಲ್ಲಿ ಬುಧವಾರ ಸುರಿದ ಜೋರು ಮಳೆಯನ್ನು ಆನಂದಿಸುತ್ತ ಸಾಗುತ್ತಿರುವ ಸವಾರರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ದಾವಣಗೆರೆಯಲ್ಲಿಯೂ ಕಾಣಿಸಿದೆ. ದಿನಪೂರ್ತಿ ಮೋಡ ಮುಸುಕಿದ ಬಾನು, ಹನಿ ಕಡಿಯದ ಮಳೆ ಕಂಡು ಬಂತು.

ಕಳೆದ ಶುಕ್ರವಾರ ರಾತ್ರಿ ಜೋರಾಗಿ ಮಳೆ ಸುರಿದಿತ್ತು. ಅಲ್ಲಿಂದ ಮಂಗಳವಾರದವರೆಗೆ ಆಗಾಗ ಮಳೆ ಸುರಿದು ಹೋಗುತ್ತಿತ್ತು. ಬುಧವಾರ ಬೆಳಿಗ್ಗೆ ಶುರುವಾದ ಮಳೆ ರಾತ್ರಿವರೆಗೆ ನಿರಂತರ ಸುರಿದಿದೆ. ಮಧ್ಯೆ ಸ್ವಲ್ಪ ಬಿಡುವು ನೀಡಿದರೂ ಮೋಡ ಮುಸುಕಿದ್ದರಿಂದ ಬಾನು ಕಪ್ಪಾಗಿತ್ತು.

ಜಿಲ್ಲೆಯಲ್ಲಿ ಮನೆಗಳು ಹಾನಿಗೀಡಾಗಿದ್ದು, ಬೆಳೆಗಳು ನಷ್ಟವಾಗಿವೆ. ಮಂಗಳವಾರ ಸಂಜೆವರೆಗೆ ಸುಮಾರು ₹ 29 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿದೆ. ಅಶೋಕ ರಸ್ತೆ ಸಹಿತ ಹಲವು ಕಡೆಗಳಲ್ಲಿ ರಸ್ತೆಗಳೇ ಕೆರೆಗಳಂತಾಗಿವೆ. ರಸ್ತೆ ಯಾವುದು? ಚರಂಡಿ ಯಾವುದು ಎಂಬುದು ಗೊತ್ತಾಗದಂತೆ ಜಲಾವೃತವಾಗಿದೆ. ಬೈಕ್ ಸವಾರರೊಬ್ಬರು ನಗರದ ಈರುಳ್ಳಿ ಮಾರುಕಟ್ಟೆ ಬಳಿ ಚರಂಡಿಗೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಜನರು ಅವರನ್ನು ಚರಂಡಿಯಿಂದ ಮೇಲೆತ್ತಿ ಕಾಪಾಡಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 13.80 ಮಿ.ಮೀ ಮಳೆಯಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 19.60 ಮಿ.ಮೀ., ಚನ್ನಗಿರಿ ತಾಲ್ಲೂಕಿನಲ್ಲಿ 14.73 ಮಿ.ಮೀ., ಹರಿಹರ ತಾಲ್ಲೂಕಿನಲ್ಲಿ 14.05 ಮಿ.ಮೀ., ಜಗಳೂರು ತಾಲ್ಲೂಕಿನಲ್ಲಿ 12.08 ಮಿ. ಮೀ. ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ 8.58 ಮಿ.ಮೀ. ಮಳೆಯಾಗಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ, 10 ಕಚ್ಚಾಮನೆ, ಹರಿಹರ ತಾಲ್ಲೂಕಿನಲ್ಲಿ 1 ಪಕ್ಕಾ ಮನೆ, 1 ಕಚ್ಚಾ ಮನೆ, ನ್ಯಾಮತಿ ತಾಲ್ಲೂಕಿನಲ್ಲಿ 3 ಪಕ್ಕಾ ಮನೆಗಳಿಗೆ ಹಾನಿಯಾಗಿದೆ. ಸರ್ಕಾರದ ನಿಯಮಾನಸುಸಾರ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಮಳೆ ನಿರಂತರವಾಗಿ ಬರುತ್ತಿದೆ. ಆದರೆ ಭಾರಿ ಪ್ರಮಾಣದಲ್ಲಿ ಬರುತ್ತಿಲ್ಲ. ಹಾಗಾಗಿ ದೊಡ್ಡಮಟ್ಟದ ಹಾನಿ ಉಂಟಾಗಿಲ್ಲ. ಸಣ್ಣಪ್ರಮಾಣದಲ್ಲಿ ತೊಂದರೆಯಾಗಿದೆ ಎಂದು ತಹಶೀಲ್ದಾರ್‌ ಬಿ.ಎನ್‌. ಗಿರೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ವಿವಿಧೆಡೆ ಮಳೆ ಮತ್ತು ಗಾಳಿಗೆ ಮೆಕ್ಕೆಜೋಳ ನೆಲಕ್ಕೆ ಒರಗಿದೆ. ಮುರಿಯಲೂ ಆಗದೇ, ತಿನ್ನಲೂ ಆಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಅಡಿಕೆ ತೋಟ, ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಜೋಳ, ಮಕ್ಕೆಜೋಳ, ಈರುಳ್ಳಿ ಬೆಳೆ ಕೊಳೆಯುವಂತಾಗಿದೆ.

ನಗರದ ಬನಶಂಕರಿ ಬಡಾವಣೆಗೆ ರಾಷ್ಟ್ರೀಯ ಹೆದ್ದಾರಿಯ ನೀರು ನುಗ್ಗಿ ಬಡಾವಣೆಯೇ ಕೆರೆಯಂತಾಗಿದೆ. ವಿದ್ಯಾನಗರ, ವಿಮಾನ್‌ಮಟ್ಟಿ ಎರಡೂ ಕಡೆಗಳಿಂದ ನೀರು, ಕಸಕಡ್ಡಿಗಳು ಬಂದು ಬಿದ್ದಿವೆ. ಈ ಬಗ್ಗೆ ಜಿಲ್ಲಾಡಳಿತ, ಪಾಲಿಕೆಯ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದಾರೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬನಶಂಕರಿ ಬಡಾವಣೆಯ ನಾಗರಿಕ ರಕ್ಷಣಾ ಸಮಿತಿಯ ಭರಮಪ್ಪ ಮೈಸೂರು ದೂರಿದ್ದಾರೆ.

‘ಮಳೆ ಬಂದರೆ ಬಯಲಲ್ಲಿ ನೆನೆಯುತ್ತಾ ಹೂವಿನ ವ್ಯಾಪಾರ ಮಾಡುವ ‍ಪರಿಸ್ಥಿತಿ ಉಂಟಾಗಿದೆ. ವಿಸ್ತಾರವಾದ ಬಯಲಿದ್ದರೂ ಲಾರಿ, ಆಟೊ, ದ್ವಿಚಕ್ರ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ. ಶೌಚಾಲಯ ಕೊಠಡಿ ಇದ್ದರೂ ಬೀಗ ಹಾಕಲಾಗಿದೆ. ಹೋಟೆಲ್‌ ಕಟ್ಟಡ ಇದ್ದರೂ ಊಟದ ವ್ಯವಸ್ಥೆ ಇಲ್ಲ. ವಿದ್ಯುತ್‌ ಸಂಪರ್ಕ ಇದ್ದರೂ ವಿದ್ಯುತ್‌ ಇಲ್ಲ. ಈಗ ಮಳೆ ಬಂದರೆ ಚಾವಣಿ ಇಲ್ಲದೇ ಒದ್ದೆಯಾಗುತ್ತಿದ್ದೇವೆ. ಕೂಡಲೇ ಚಾವಣಿ ವ್ಯವಸ್ಥೆ ಮತ್ತು ಇತರ ಬೇಡಿಕೆಗಳನ್ನು ನೆರವೇರಿಸಿಕೊಡಬೇಕು’ ಎಂದು ಜಿಲ್ಲಾ ಹೂವಿನ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.