ADVERTISEMENT

ಸದ್ದು ಮಾಡಲಿದೆ ಇ–ಆಟೊ, ಬೈಸಿಕಲ್‌

ಸ್ಮಾರ್ಟ್‌ ಸಿಟಿ ಯೋಜನೆ ಪ್ರಗತಿ ವಿವರ ನೀಡಿದ ವ್ಯವಸ್ಥಾಪಕ ನಿರ್ದೇಶಕ ಷರೀಫ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 16:40 IST
Last Updated 26 ಜೂನ್ 2019, 16:40 IST
ದಾವಣಗೆರೆಯಲ್ಲಿ ಫಲಾನುಭವಿಗಳಿಗೆ ವಿತರಿಸಲು ತಂದಿರುವ ಬ್ಯಾಟರಿ ಚಾಲಿತ ‘ಇ–ಆಟೊ’ವನ್ನು ಸ್ಮಾರ್ಟ್‌ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶಾದ್‌ ಷರೀಫ್‌ ಅವರು ಬುಧವಾರ ಓಡಿಸಿದರು.
ದಾವಣಗೆರೆಯಲ್ಲಿ ಫಲಾನುಭವಿಗಳಿಗೆ ವಿತರಿಸಲು ತಂದಿರುವ ಬ್ಯಾಟರಿ ಚಾಲಿತ ‘ಇ–ಆಟೊ’ವನ್ನು ಸ್ಮಾರ್ಟ್‌ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶಾದ್‌ ಷರೀಫ್‌ ಅವರು ಬುಧವಾರ ಓಡಿಸಿದರು.   

ದಾವಣಗೆರೆ: ‘ಪರಿಸರ ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ಹಾಗೂ ಉದ್ಯೋಗ ನೀಡಲು ಆಧುನಿಕ ತಂತ್ರಜ್ಞಾನವುಳ್ಳ ಬ್ಯಾಟರಿ ಚಾಲಿತ ಇ–ಆಟೊಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ’ ಎಂದು ‘ಸ್ಮಾರ್ಟ್‌ ಸಿಟಿ’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶಾದ್‌ ಷರೀಫ್‌ ತಿಳಿಸಿದರು.

‘ಸ್ಮಾರ್ಟ್‌ ಸಿಟಿ’ ಯೋಜನೆ ಆರಂಭಗೊಂಡು ನಾಲ್ಕು ವರ್ಷಗಳಾದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾಮಗಾರಿಗಳ ಪ್ರಗತಿ ಹಾಗೂ ಉದ್ದೇಶಿತ ಯೋಜನೆಗಳ ಮಾಹಿತಿ ಹಂಚಿಕೊಂಡರು.

‘ಮೊದಲ ಹಂತದಲ್ಲಿ 20 ‘ಇ–ಆಟೊ’ಗಳನ್ನು ಫಲಾನುಭವಿಗಳಿಗೆ ವಿತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ₹ 36 ಲಕ್ಷ ಮೀಸಲಿಡಲಾಗಿದೆ. ಒಂದು ಇ–ಆಟೊಕ್ಕೆ ₹ 1.80 ಲಕ್ಷ ಬೆಲೆ ಇದೆ. ಶೇ 60ರಷ್ಟು ನಾವು ಸಬ್ಸಿಡಿ ಕೊಡುತ್ತೇವೆ. ಉಳಿದ ಪಾಲಿನ ಹಣಕ್ಕೆ ಸಾಲಸೌಲಭ್ಯವನ್ನೂ ಕಲ್ಪಿಸುತ್ತೇವೆ. ಸದ್ಯ ನಾಲ್ಕು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅವರಿಗೆ ವಿತರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 80 ಇ–ಆಟೊಗಳನ್ನು ವಿತರಿಸುವ ಗುರಿ ಇದೆ’ ಎಂದು ತಿಳಿಸಿದರು.

ADVERTISEMENT

‘ಹೆಣ್ಣುಮಕ್ಕಳಿಗೆ ಶೇ 75ರಷ್ಟು ಸಬ್ಸಿಡಿ ನೀಡಲಾಗುವುದು. ರೈಲು ನಿಲ್ದಾಣ, ಬಸ್‌ನಿಲ್ದಾಣದಿಂದ ಮಹಿಳಾ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ‘ಪಿಂಕ್‌ ಇ–ಆಟೊ’ ಸೇವೆಯನ್ನು ಆರಂಭಿಸಲು ಮುಂದೆ ಬಂದರೆ ಹೆಣ್ಣುಮಕ್ಕಳಿಗೆ ಅವಕಾಶ ಮಾಡಿಕೊಡಲಾಗುವುದು. ಒಮ್ಮೆ ಬ್ಯಾಟರಿ ಚಾರ್ಜ್‌ ಮಾಡಿದರೆ 60ರಿಂದ 75 ಕಿ.ಮೀ ದೂರ ಚಲಾಯಿಸಬಹುದು. ಗರಿಷ್ಠ 30 ಕಿ.ಮೀ ವೇಗದಲ್ಲಿ ಇದು ಸಂಚರಿಸುತ್ತದೆ’ ಎಂದು ಅಶಾದ್‌ ಷರೀಫ್‌ ಮಾಹಿತಿ ನೀಡಿದರು.

ನಗರದಲ್ಲಿ ₹ 9.90 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಬೈಸಿಕಲ್‌ ಷೇರಿಂಗ್‌ ಸಿಸ್ಟಂ ಆರಂಭಿಸಲಾಗುವುದು. 20 ಕಡೆ ಸೈಕಲ್‌ಗಳನ್ನು ನಿಲ್ಲಿಸುವ ಸ್ಥಳ ಮಾಡಲಾಗುವುದು. 100 ಬೈಸಿಕಲ್‌ ವಿದ್ಯುತ್‌ ಚಾಲಿತ ಹಾಗೂ ಉಳಿದ ನೂರು ಪ್ಯಾಡಲ್‌ ಮಾಡುವ ಸೈಕಲ್‌ ಇಡಲಾಗುವುದು. ಈಗಾಗಲೇ ಗುತ್ತಿಗೆ ನೀಡಲಾಗಿದ್ದು, 20 ದಿನಗಳಲ್ಲಿ ಕೆಲಸ ಆರಂಭಿಸಲಾಗುವುದು’ ಎಂದು ತಿಳಿಸಿದರು.

ನದಿಗೆ ಬ್ಯಾರೇಜ್‌ ನಿರ್ಮಾಣ: ‘ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಗೆ ಪೂರಕವಾಗಿ ₹ 76.11 ಕೋಟಿ ವೆಚ್ಚದಲ್ಲಿ ರಾಜನಹಳ್ಳಿ ಜಾಕ್‌ವೆಲ್‌ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್‌ ನಿರ್ಮಿಸಲಾಗುತ್ತಿದೆ. 0.20 ಟಿಎಂಸಿ ಅಡಿ ನೀರು ಸಂಗ್ರಹಗೊಳ್ಳಲಿದ್ದು, ಬೇಸಿಗೆಯ ಮೂರು ತಿಂಗಳು ನೀರು ಪೂರೈಕೆಗೆ ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘ಸ್ಮಾರ್ಟ್‌ ಸಿಟಿ’ಯ ಮುಖ್ಯ ಎಂಜಿನಿಯರ್‌ ಎಂ. ಸತೀಶ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಗುರುಪಾದಯ್ಯ ಕೆ.ಎಂ., ಮುಖ್ಯ ಹಣಕಾಸು ಅಧಿಕಾರಿ ಪ್ರಭಾವತಿ, ಐ–ಡೆಕ್‌ನ ಪ್ರೊಜೆಕ್ಟ್‌ ಮ್ಯಾನೇಜರ್‌ ಶ್ರೀನಾಥ್‌ ರೆಡ್ಡಿ ಇದ್ದರು.

ವರ್ಷದಿಂದ ಚುರುಕುಗೊಂಡ ಕಾಮಗಾರಿ

ಸ್ಮಾರ್ಟ್‌ ಸಿಟಿ ಆರಂಭಗೊಂಡು ನಾಲ್ಕು ವರ್ಷಗಳಾದರೂ ಮೊದಲು ಮೂರು ವರ್ಷಗಳಿಗೆ ಆಡಳಿತಾತ್ಮಕ ಕೆಲಸಗಳೇ ಹೆಚ್ಚು ನಡೆದವು. ಒಂದು ವರ್ಷದಿಂದ ಕಾಮಗಾರಿಗಳ ಅನುಷ್ಠಾನ ಕಾರ್ಯ ಚುರುಕಿನಿಂದ ಆಗುತ್ತಿದೆ ಎಂದು ಅಶಾದ್‌ ಷರೀಫ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಳೆದ ವರ್ಷದ ಅಂತ್ಯಕ್ಕೆ ಯಾವುದೇ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಆಗ ₹ 93 ಕೋಟಿ ವೆಚ್ಚದ 15 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಈ ವರ್ಷ ₹ 5.88 ಕೋಟಿ ವೆಚ್ಚದಲ್ಲಿ ಒಟ್ಟು 12 ಕಾಮಗಾರಿಗಳು ಪೂರ್ಣಗೊಂಡಿವೆ. 41 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ಗುತ್ತಿಗೆದಾರರೊಬ್ಬರು ಎರಡು ಪ್ರತ್ಯೇಕ ಕಾಮಗಾರಿಗಳಿಗೆ ತಮ್ಮ ಆದಾಯ ವಿವರಗಳನ್ನು ಬೇರೆ ಬೇರೆಯಾಗಿ ಸಲ್ಲಿಸಿರುವ ಕುರಿತ ಪ್ರಶ್ನೆಗೆ, ‘ರಿಂಗ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ಈ ಪ್ರಕರಣ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯದಲ್ಲಿ ಜೂನ್‌ 29ಕ್ಕೆ ವಿಚಾರಣೆ ನಡೆಯಲಿದೆ. ಅಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ತಕ್ಕಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.