ADVERTISEMENT

ಚೇತರಿಕೆ ಹಾದಿಯಲ್ಲಿ ಆರ್ಥಿಕತೆ: ಆರ್ಥಿಕ ತಜ್ಞ ಎಸ್‌. ವಿಶ್ವನಾಥ ಭಟ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 15:53 IST
Last Updated 28 ಡಿಸೆಂಬರ್ 2019, 15:53 IST
ದಾವಣಗೆರೆಯ ರೇಣುಕ ಮಂದಿರಲ್ಲಿ ಶನಿವಾರ ಭಾರತ ವಿಕಾಸ ಪರಿಷತ್ತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆರ್ಥಿಕ ತಜ್ಞ ಎಸ್‌. ವಿಶ್ವನಾಥ್‌ ಭಟ್‌ ಮಾತನಾಡಿದರು
ದಾವಣಗೆರೆಯ ರೇಣುಕ ಮಂದಿರಲ್ಲಿ ಶನಿವಾರ ಭಾರತ ವಿಕಾಸ ಪರಿಷತ್ತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆರ್ಥಿಕ ತಜ್ಞ ಎಸ್‌. ವಿಶ್ವನಾಥ್‌ ಭಟ್‌ ಮಾತನಾಡಿದರು   

ದಾವಣಗೆರೆ: ಕಳೆದ ಮೂರು ತ್ರೈಮಾಸಿಕದಲ್ಲಿಭಾರತದ ಆರ್ಥಿಕತೆ ಕುಸಿದಿದೆ. ಆರ್ಥಿಕತೆ ನಿಧಾನಗತಿಯಲ್ಲಿದೆ ನಿಜ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆರ್ಥಿಕತೆ ದಿವಾಳಿಯಾಗಿದೆ ಎಂದು ಗೂಬೆ ಕೂರಿಸಲಾಗುತ್ತಿದೆ ಎಂದು ಆರ್ಥಿಕ ತಜ್ಞ ಎಸ್‌. ವಿಶ್ವನಾಥ ಭಟ್‌ ದೂರಿದರು.

ಇಲ್ಲಿನ ರೇಣುಕ ಮಂದಿರದಲ್ಲಿ ಭಾರತ ವಿಕಾಸ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ‘ಭಾರತದ ಪ್ರಸಕ್ತ ಆರ್ಥಿಕತೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಜಿಡಿಪಿ ಶೇ 4.5ಕ್ಕೆ ಇಳಿದಿದೆ. ಇದು ಮೋದಿ ಸರ್ಕಾರದ ಐದೂವರೆ ಆಡಳಿತದಲ್ಲಿ ಇದು ಇತಿ ಕಡಿಮೆ ಪ್ರಗತಿ. ಉತ್ಪಾದನೆ, ಖರೀದಿ ಕಡಿಮೆಯಾಗಿರುವುದು, ಖಾಸಗಿ ಹೂಡಿಕೆ ಕಡಿಮೆ ಇರುವುದು. ಆಟೊಮೊಬೈಲ್‌ ಕ್ಷೇತ್ರದ ಕಡಿಮೆ ಸಾಧನೆ. ಇದೆಲ್ಲದರ ಪರಿಣಾಮ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಇದರ ಪರಿಣಾಮ ವಿತ್ತೀಯ ಕೊರತೆ ಹೆಚ್ಚಿದೆ ಎಂದು ಹೇಳಿದರು.

ADVERTISEMENT

ಟಾಟಾ ಮೋಟರ್ಸ್‌, ಮಾರುತಿ ಸುಜುಕಿ ಮಾರಾಟ ಕಡಿಮೆ ಆಗಿದೆ. ಇದೇ ವೇಳೆ ಕಿಯೋ ಮೋಟಾರ್ಸ್‌ನ ಮಾರಾಟ ಹೆಚ್ಚಾಗಿದೆ. ಇಕ್ವಿಟಿ ಮಾರುಕಟ್ಟೆಯಲ್ಲಿ ₹ 500 ಕೋಟಿ ವಹಿವಾಟು ಆಗಿದೆ.ಪಾರ್ಲೆ ಕಂಪನಿ ₹5ರ ಬಿಸ್ಕತ್‌ ಪಾಕೆಟ್‌ನಲ್ಲಿ ಬಿಸ್ಕತ್‌ ಕಡಿಮೆ ಮಾಡಿದ್ದು ಮಾರಾಟ ಕಡಿಮೆ ಆಗಲು ಕಾರಣ. ಆದರೆ ಇದನ್ನು ಮುಚ್ಚಿಹಾಕಲು ಸಲ್ಲದ ಹೇಳಿಕೆ ನೀಡುತ್ತಿದೆ. ದೀಪಾವಳಿ ವೇಳೆ ಜಿಯೊಮಿ ಕಂಪನಿಯ ₹ 1.20 ಕೋಟಿ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮಾರಾಟ ಆಗಿದೆ. ಅದರಲ್ಲಿ ₹ 80 ಲಕ್ಷ ಸ್ಮಾರ್ಟ್‌ಫೋನ್‌ ಮಾರಾಟ ಆಗಿದೆ. ಈ ಅಂಶಗಳನ್ನು ಮರೆಮಾಚಲಾಗುತ್ತಿದೆ ಎಂದು ದೂರಿದರು.

ಆರ್ಥಿಕ ತಜ್ಞರ ಪ್ರಕಾರ ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ಜಿಡಿಪಿ ಅತಿ ಕಡಿಮೆ ಇತ್ತು. ಈ ಅವಧಿಯಲ್ಲಿ ಜಪಾನ್‌ನ ಜಿಡಿಪಿ 26 ಪಟ್ಟು, ಕೋರಿಯಾ– 20 ಪಟ್ಟು, ಶ್ರೀಲಂಕಾ– 2 ಪಟ್ಟು ಅಭಿವೃದ್ಧಿಯಾಗಿದೆ.67 ವರ್ಷಗಳ ಕಾಲ ಆಳಿದ ಸರ್ಕಾರ ಮಾಡಿದ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.

ಸದ್ಯ ರೆಸ್ಟೊರಂಟ್‌ಗಳಲ್ಲಿ ಮಾರಾಟ ಹೆಚ್ಚಿದೆ. ಜೊಮಾಟೊದಲ್ಲಿ 2000 ಜನರಿಗೆ ಉದ್ಯೋಗ ಸಿಕ್ಕಿದೆ. 6 ತಿಂಗಳಲ್ಲಿ 51 ಲಕ್ಷ ಜನರಿಗೆ ಭವಿಷ್ಯ ನಿಧಿ ಮಾಡಿಸಲಾಗಿದೆ. ಇದು ಅಭಿವೃದ್ಧಿ ಅಲ್ಲವೇ? ಎಂದರು.

6 ತಿಂಗಳಲ್ಲಿ ಹಲವು ಕಂಪನಿಗಳಿಂದ ಹೂಡಿಕೆ ನಿರೀಕ್ಷಿಸಬಹುದು. ಮುಂದಿನ 3 ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿ ಖಚಿತ. 2032ರಲ್ಲಿ ಆರ್ಥಿಕತೆ 10 ದಶಲಕ್ಷ ಕೋಟಿಡಾಲರ್‌ ಆಗಲಿದೆ ಎಂದು ಹೇಳಿದರು.

ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಬಿ.ಕೆ. ತಿಪ್ಪೇಸ್ವಾಮಿ, ‘ಆರ್ಥಿಕತೆ ಸಂಕಷ್ಟದಲ್ಲಿದೆ ಎಂದು ವಿರೋಧ ಪಕ್ಷಗಳು ಗುಲ್ಲನ್ನು ಎಬ್ಬಿಸುತ್ತಿವೆ. ಆದರೆ ಅಂತಹ ಸ್ಥಿತಿ ಇಲ್ಲ’ ಎಂದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಶಿವಯೋಗಿಸ್ವಾಮಿ, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್, ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್‌, ಮೌನೇಶಪ್ಪ ಎನ್‌.ಪಿ., ಶೀಲಾ ನಾಯಕ್‌, ಭವಾನಿ ಶಂಭುಲಿಂಗಪ್ಪ, ಆರತಿ ಸುಂದರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.