ADVERTISEMENT

ದಾವಣಗೆರೆ: ಶಿಕ್ಷಣ, ಶಿಕ್ಷಕರಿಗೆ ಬೆಲೆ ಕಟ್ಟಲಾಗದು

ಶಿಕ್ಷಕರ ದಿನಾಚರಣೆ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 5:41 IST
Last Updated 6 ಸೆಪ್ಟೆಂಬರ್ 2022, 5:41 IST
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು   

ದಾವಣಗೆರೆ: ಜಗತ್ತಿನಲ್ಲಿ ಯಾವುದಕ್ಕಾದರೂ ಬೆಲೆ ಕಟ್ಟಬಹುದು. ಆದರೆ ಶಿಕ್ಷಣಕ್ಕೆ, ಶಿಕ್ಷಕರಿಗೆ ಬೆಲೆ ಕಟ್ಟಲಾಗದು. ಶಿಕ್ಷಕರು ಉತ್ತಮ ಸಮಾಜವನ್ನು ನಿರ್ಮಿಸುವವರನ್ನು ತಯಾರು ಮಾಡುವಂಥವರು. ಅವರು ದೇಶದ ಆಸ್ತಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿಯೇ ಓದಿ ಉನ್ನತ ಸಾಧನೆಗಳನ್ನು ಮಾಡಿದವರು ಅನೇಕರಿದ್ದಾರೆ. ಆದರೂ ಇತ್ತೀಚೆಗೆ ಕಾನ್ವೆಂಟ್‌ ಕಡೆ ಒಲವು ಜಾಸ್ತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಶಿಕ್ಷಕರು ರಾಧಾಕೃಷ್ಣನ್ ಅವರಂತೆ ಉನ್ನತ ಸ್ಥಾನಕ್ಕೆ ತಲುಪಲು ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲಿ ಹೊಸ ಕನಸು ಹಾಗೂ ಚಿಂತನೆಗಳನ್ನು ಬಿತ್ತುವ ಮೂಲಕ ಕನಸುಗಳನ್ನು ನನಸಾಗಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಜಿಲ್ಲೆಯಲ್ಲಿ 6,800 ಶಿಕ್ಷಕರಿದ್ದಾರೆ. 2.06 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಂದೊಂದು ಶಾಲೆಯಲ್ಲೂ ಒಬ್ಬೊಬ್ಬ ರಾಧಾಕೃಷ್ಣನ್, ಅಬ್ದುಲ್ ಕಲಾಂ, ಸರ್.ಎಂ ವಿಶ್ವೇಶ್ವರಯ್ಯ ನವರಂತಹ ಮಹಾಚೇತನಗಳನ್ನು ತಯಾರು ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ.ದಾದಾಪೀರ್ ನವಿಲೇಹಾಳ್ ಉಪನ್ಯಾಸ ನೀಡಿ, ‘ಜ್ಞಾನದಾನಕ್ಕಿಂತ ದೊಡ್ಡ ದಾನವಿಲ್ಲ. ಶಿಕ್ಷಕರು ಪಾಠ, ಪರೀಕ್ಷೆ, ಪ‍ರಿಶೀಲನೆ, ಫಲಿತಾಂಶಕ್ಕೆ ಸೀಮಿತವಾಗಬಾರದು. ಪಠ್ಯದ ಆಚೆಗೆ ಹೋಗಬೇಕು. ಪಠ್ಯೇತರ ವಿಷಯಗಳ ಬಗ್ಗೆಯೂ ಅಧ್ಯಯನ ಮಾಡಬೇಕು. ನಿರಂತರ ಅಧ್ಯಯನ ಮತ್ತು ಶ್ರಮ ಇದ್ದರೆ ಮಾತ್ರ ಇದು ಸಾಧ್ಯ. ಇಷ್ಟಕ್ಕೆ ಸೀಮಿತವಾಗದೇ ಸಮಾಜದ ಸಮಸ್ಯೆಗಳ ಮೂಲ ಕಂಡು ಹಿಡಿದು ಸತ್ಯ ಸಂಶೋಧನೆ, ಸತ್ಯ ಪ್ರತಿಪಾದನೆ ಮಾಡುವವರು ಆಗಬೇಕು. ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ ಅಂಥ ಗುರುಗಳಾಗಿದ್ದರು’ ಎಂದು ವಿಶ್ಲೇಷಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ್, ಮೇಯರ್ ಜಯಮ್ಮ ಗೋಪಿನಾಯ್ಕ್, ಸದಸ್ಯೆ ಗೀತಾ ದಿಳ್ಯಪ್ಪ ಮಾತನಾಡಿದರು.

ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ವರ್ಷ ನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಡಿಡಿಪಿಐ ಜಿ.ಆರ್ ತಿಪ್ಪೇಶಪ್ಪ, ಡಯಟ್ ಉಪನಿರ್ದೇಶಕ ಕಂಪ್ಲಿ ರಾಮನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಅಂಬಣ್ಣ, ಎಂ.ನಿರಂಜನಮೂರ್ತಿ ಮುಂತಾದವರು ಇದ್ದರು.

ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಸನ್ಮಾನ
ಫಯಿಜ್‌ ಉರ್‌ ರಹಮಾನ್‌, ಅಶ್ವಥ್‌ ಕುಮಾರ್‌, ನೇಮಾವತಿ, ಕೆ.ಎನ್‌. ಸಾವಿತ್ರಮ್ಮ, ಶಶಿಕಲಾ ಎಂ., ಪ್ರಹ್ಲಾದ್‌ ಜಿ.ಎಚ್‌., ಸರ್ವಮಂಗಳಮ್ಮ, ತನುಜಾ ಎ., ಪ್ರಕಾಶ ಮಡಿವಾಳ, ಪದ್ಮಾ ಟಿ., ಮಂಗಳ ಕೆ., ಬಸವರಾಜ ಬಿ.ಎಸ್‌., ಇಮ್ತಿಯಾಜ್ ಅಹಮ್ಮದ್‌ ಖತೀಬ್‌, ಜಯಲಕ್ಷ್ಮೀ ಜಿ.ಎಚ್‌., ಪುಂಡಲೀಕ ಎಂ.ಕೆ., ವಾಗೀಶ್‌ ಮುಲ್ಕಿ ಒಡೆಯರ್‌, ಶಕುಂತಲಾ ಎಂ.ವಿ., ಸುರೇಶ್‌ ಎಸ್‌. ಮೂಲಿಮನಿ, ಮಂಜುನಾಥ ಎಂ.ವಿ., ಅರುಣಕುಮಾರ್‌ ಆರ್‌.ಎಂ., ಮಂಜುನಾಥ ಡಿ.ಎಸ್‌., ಮಹಾಂತೇಶ ಡಿ., ಸುಜಾತಾ ಬಿ. ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.