ADVERTISEMENT

ಶಿಕ್ಷಣ ದಂಧೆ ಆಗಬಾರದು

ಗ್ರಾಮಾಂತರ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವದಲ್ಲಿ: ಯೋಗರಾಜ್ ಭಟ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 12:52 IST
Last Updated 23 ಫೆಬ್ರುವರಿ 2019, 12:52 IST
ಸಂತೇಬೆನ್ನೂರಿನ ಗ್ರಾಮಾಂತರ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಸುವರ್ಣ ಮಹೋತ್ಸವದಲ್ಲಿ ನಿರ್ದೇಶಕ ಯೋಗರಾಜ್ ಭಟ್ 'ಗ್ರಾಮಾಂತರ ವಿಜಯ' ಸಂಚಿಕೆ ಬಿಡುಗಡೆ ಮಾಡಿದರು. ಶಾಂತವೀರ ಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇದ್ದರು
ಸಂತೇಬೆನ್ನೂರಿನ ಗ್ರಾಮಾಂತರ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಸುವರ್ಣ ಮಹೋತ್ಸವದಲ್ಲಿ ನಿರ್ದೇಶಕ ಯೋಗರಾಜ್ ಭಟ್ 'ಗ್ರಾಮಾಂತರ ವಿಜಯ' ಸಂಚಿಕೆ ಬಿಡುಗಡೆ ಮಾಡಿದರು. ಶಾಂತವೀರ ಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇದ್ದರು   

ಸಂತೇಬೆನ್ನೂರು: ಶಿಕ್ಷಣ ದಂಧೆ ಆಗಬಾರದು. ಗ್ರಾಮೀಣ ಪ್ರದೇಶದ ಜವಾರಿ ಶಾಲೆಯೊಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಶ್ಲಾಘನೀಯ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

ಇಲ್ಲಿನ ವಿಜಯ ಯುವಕ ಸಂಘ ಶನಿವಾರ ಹಮ್ಮಿಕೊಂಡಿದ್ದ ಗ್ರಾಮಾಂತರ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರ ಪ್ರದೇಶದ ಖಾಸಗಿ ಶಾಲೆಗಳು ಮಧ್ಯಮ ವರ್ಗದವರ ಆದಾಯಕ್ಕೆ ನಿಲುಕುತ್ತಿಲ್ಲ. ಕೊನೆ ಬೆಂಚಿನ ಮಕ್ಕಳೇ ವ್ಯಾಪಾರಸ್ಥ, ರಾಜಕೀಯದಲ್ಲಿ ಬೆಳೆಯುವರು. ಅವರೇ ಮುಂದೆ ಹಣ ಸಂಪಾದಿಸಿ ಶಾಲೆ ಕಟ್ಟುವರು. ಮುಂದಿನ ಬೆಂಚಿನ ಮಕ್ಕಳು ಅದೇ ಶಾಲೆಯಲ್ಲಿ ಶಿಕ್ಷರಾಗಿ ಕೆಲಸಕ್ಕೆ ಸೇರುವರು. ಇದೇ ನಮ್ಮ ದುರಂತ. ಈ ಮುಂದಿನ ಬೆಂಚಿನವರು ಹಿಂದಿನ ಬೆಂಚಿನವರಾಗಬೇಕು. ಹಿಂದಿನ ಬೆಂಚಿನವರು ಮುಂದಿನ ಬೆಂಚಿನವರಾಗಬೇಕು. ಈ ಬದಲಾವಣೆ ಆಗಬೇಕು. ಆಗಲೇ ಭಾರತದಲ್ಲಿ ಸಮಾನತೆ ಸಾಧ್ಯ’ ಎಂದರು.

ADVERTISEMENT

‘ಇದೇ ಕಲ್ಪನೆಯಲ್ಲಿ ಆಮೆ, ಮೊಲದ ಓಟದ ಕಥೆಯನ್ನಾಧರಿಸಿ ಸೂಚ್ಯವಾಗಿ 'ಪಂಚತಂತ್ರ' ಸಿನಿಮಾ ಮಾಡಿದ್ದೇವೆ. ಪುಡಿ ವೇದಾಂತ ಆಧರಿಸಿ ಅತಿ ಆತ್ಮ ವಿಶ್ವಾಸ ಒಳ್ಳೆಯಲ್ಲ’ ಎಂಬ ಸತ್ಯ ಹೇಳುವ ಪ್ರಯತ್ನ ನಡೆದಿದೆ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ’ ಎಂದರು.

ಸಂಸದ ಸಿದ್ದೇಶ್ವರ, ‘ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ವಿದ್ಯೆ ಕಲಿಸಿ’ ಎಂದು ಹೇಳಿದರು.

‘ಈ ಸಂಸ್ಥೆಯಲ್ಲಿ ಓದಿದ ಸಾವಿರಾರು ಮಕ್ಕಳು ಪ್ರಪಂಚದಾದ್ಯಂತ ಕಾರ್ಯೋನ್ಮುಖರಾಗಿದ್ದಾರೆ. ಐಎಎಸ್, ಕೆಎಎಸ್ ಅಧಿಕಾರಿಗಳಾಗಿದ್ದಾರೆ. ಶಾಸಕರ ಅನುದಾನದಲ್ಲಿ ₹5 ಲಕ್ಷ ಮಂಜೂರು ಮಾಡುತ್ತೇನೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆಶ್ವಾಸನೆ ನೀಡಿದರು.

ಟಗರು ಸಿನಿಮಾ ಖ್ಯಾತಿ ಸಂಭಾಷಣಾಕಾರ ಶ್ರೀ ಮಾಸ್ತಿ, ‘ಶಿಕ್ಷಕ ಜ್ಞಾನ, ನೀತಿ, ಪ್ರಾಮಾಣಿಕತೆ, ಏಕಾಗ್ರತೆ, ಗುರಿ, ಧೈರ್ಯ, ಸಂಸ್ಕಾರ ಕಲಿಸುವ ಮಾರ್ಗದರ್ಶಕ. ವಿದ್ಯಾದಾನ ಮಾಡುವ ನೆಲ ಪುಣ್ಯ ಭೂಮಿ’ ಎಂದರು.

ನಿರ್ದೇಶಕ ಯೋಗರಾಜ್ ಭಟ್ ‘ಗ್ರಾಮಾಂತರ ವಿಜಯ’ ಸಂಚಿಕೆ ಲೋಕಾರ್ಪಣೆ ಮಾಡಿದರು. ಸಂಭಾಷಣಕಾರ ಶ್ರೀ ಮಾಸ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ ಶ್ರೀಧರ್, ಸದಸ್ಯೆ ಸುಜಾತ ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಿ. ದೇವೇಂದ್ರಪ್ಪ, ಶಿಕ್ಷಣ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಮಂಜುಳಾ, ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ನಾಡಿಗ್, ಕಾರ್ಯದರ್ಶಿ ಕೆ. ಸಿದ್ದಲಿಂಗಪ್ಪ ಇದ್ದರು.

ನಿವೃತ್ತ ಡಿವೈಎಸ್‌ಪಿ ಎಚ್.ಬಿ.ಮಲ್ಲಿಕಾರ್ಜುನ ಹಾಗೂ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.

ಪಂಚತಂತ್ರ ನಾಯಕಿ ಸೊನಲ್ ಮಹಂತೋ ಹಾಜರಿದ್ದರು. ಕೆ.ಸಿ.ನಾಗರಾಜ್ ಪ್ರಾರ್ಥಿಸಿದರು. ಸುಮತೀಂದ್ರ ನಾಡಿಗ್ ಸ್ವಾಗತಿಸಿದರು. ಎಂ.ಜಯಪ್ಪ ವಂದಿಸಿದರು. ಪಿ.ವಾಗೀಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.