ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ | ಕೋಟಿಯಲ್ಲಿ ಖರ್ಚು: ಲಕ್ಷದಲ್ಲಿ ಲೆಕ್ಕ

ಲೋಕಸಭಾ ಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ವೆಚ್ಚದ ಮಾಹಿತಿ ಅಂತಿಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 7:39 IST
Last Updated 16 ಜುಲೈ 2024, 7:39 IST
ಲೋಕಸಭಾ ಚುನಾವಣೆ 
ಲೋಕಸಭಾ ಚುನಾವಣೆ    

ದಾವಣಗೆರೆ: ಮೇ ತಿಂಗಳಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಮಾಡಿದ ಖರ್ಚಿನ ಲೆಕ್ಕದ ಬಾಬತ್ತು ಅಂತಿಮಗೊಂಡಿದ್ದು, ₹ 95 ಲಕ್ಷದ ವೆಚ್ಚದ ಮೀತಿಯನ್ನು ಯಾರೊಬ್ಬರೂ ಮೀರಿಲ್ಲ. ಕಣದಲ್ಲಿ ಕೋಟ್ಯಂತರ ರೂಪಾಯಿ ಹೊಳೆಯಾಗಿ ಹರಿದ ಬಗ್ಗೆ ವದಂತಿಗಳು ಕೇಳಿಬಂದರೂ ಅಧಿಕೃತ ಲೆಕ್ಕ ಲಕ್ಷಗಳಲ್ಲಿ ಮಾತ್ರ ದಾಖಲಾಗಿದೆ.

ಚುನಾವಣಾ ಕಣದಲ್ಲಿದ್ದ 30 ಅಭ್ಯರ್ಥಿಗಳಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ₹ 82 ಲಕ್ಷ ವ್ಯಯಿಸಿದ್ದು, ಅತಿ ದುಬಾರಿ ಎನಿಸಿದ್ದಾರೆ. ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ಡಾ.ಪ್ರಭಾ ಮಲ್ಲಿಕಾರ್ಜುನ್‌ ₹ 62 ಲಕ್ಷ ವೆಚ್ಚ ಮಾಡಿದ್ದಾರೆ. ಕಣದಲ್ಲಿ ಕುತೂಹಲ ಕೆರಳಿಸಿದ್ದ ಪಕ್ಷೇತರ ಅಭ್ಯರ್ಥಿ ಬಿ.ಜಿ.ವಿನಯ್‌ಕುಮಾರ್‌ ₹ 30 ಲಕ್ಷ ಖರ್ಚು ಮಾಡಿದ್ದಾರೆ. ಎಸ್‌ಯುಸಿಐ ಪಕ್ಷದ ಅಣಬೇರು ತಿಪ್ಪೇಸ್ವಾಮಿ ₹ 4.9 ಲಕ್ಷ, ನಾಲ್ವರು ಅಭ್ಯರ್ಥಿಗಳ ವೆಚ್ಚ ₹ 2 ಲಕ್ಷದ ಒಳಗಿದೆ. 22 ಅಭ್ಯರ್ಥಿಗಳ ವೆಚ್ಚ ₹ 1 ಲಕ್ಷವನ್ನೂ ಮೀರಿಲ್ಲ.

ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯ ವೆಚ್ಚದ ಮಿತಿಯನ್ನು ₹ 95 ಲಕ್ಷಕ್ಕೆ ನಿಗದಿಪಡಿಸಿತ್ತು. ‘ಪ್ರಜಾಪ್ರತಿನಿಧಿ ಕಾಯ್ದೆ–1951’ಯ ಪ್ರಕಾರ ವೆಚ್ಚದ ಮಿತಿ ಮೀರಿದ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಹೀಗಾಗಿ, ವೆಚ್ಚ ವೀಕ್ಷಕರನ್ನು ನೇಮಿಸಿ ಅಭ್ಯರ್ಥಿಗಳ ಮೇಲೆ ನಿಗಾ ಇಡಲಾಗಿತ್ತು. ಪ್ರತ್ಯೇಕ ಬ್ಯಾಂಕ್‌ ಖಾತೆಯನ್ನು ತೆರೆದು ಕಾಲಕಾಲಕ್ಕೆ ವೆಚ್ಚದ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಪ್ರತಿಯೊಬ್ಬರು ಖರ್ಚಿನ ಮಾಹಿತಿಯನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಿದ್ದಾರೆ.

ADVERTISEMENT

ಮತದಾರರಿಗೆ ಆಮಿಷ ಒಡ್ಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಚುನಾವಣಾ ಆಯೋಗ ವೆಚ್ಚದ ಮಿತಿ ನಿಗದಿಪಡಿಸುತ್ತದೆ. ಉಡುಗೊರೆ ಹಾಗೂ ಹಣ ಹಂಚಿಕೆಯ ಮೇಲೆ ನಿಗಾ ಇಡಲು ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ನೀತಿ ಸಂಹಿತೆ ಜಾರಿಯಾದ ದಿನದಿಂದ ಅಭ್ಯರ್ಥಿಗಳ ವೆಚ್ಚದ ಮಾಹಿತಿಯನ್ನು ಈ ತಂಡ ಕಲೆಹಾಕಿತ್ತು. ಪ್ರಚಾರ ಸಾಮಗ್ರಿ, ಬಳಸುವ ವಾಹನ, ಸಭೆ, ಸಮಾರಂಭ, ಸ್ಟಾರ್ ಪ್ರಚಾರಕರು, ವೇದಿಕೆ, ಊಟ ಸೇರಿ ಎಲ್ಲವುಗಳಿಗೂ ಖರ್ಚಿನ ಲೆಕ್ಕ ಇಡಲಾಗಿತ್ತು. ಏ.24, ಮೇ 2 ಹಾಗೂ ಮೇ 6ರಂದು ಮೂರು ಬಾರಿ ವೆಚ್ಚದ ಮಾಹಿತಿ ಒದಗಿಸುವಂತೆ ಆಯೋಗ ಸೂಚಿಸಲಾಗಿತ್ತು. ಅಭ್ಯರ್ಥಿಗಳು ಒದಗಿಸಿದ ಮಾಹಿತಿ ಹಾಗೂ ಚುನಾವಣಾ ಸಿಬ್ಬಂದಿ ಸಂಗ್ರಹಿಸಿದ ವಿವರಗಳನ್ನು ತಾಳೆಹಾಕಿ ನೋಡಲಾಗಿದೆ.

ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ತಿಂಗಳ ಒಳಗೆ ವೆಚ್ಚದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಕೆ ಮಾಡುವುದು ಕಡ್ಡಾಯ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಿದ್ದರಿಂದ ಜುಲೈ 3ರವರೆಗೆ ವೆಚ್ಚದ ದಾಖಲೆ ಒದಗಿಸಲು ಕಾಲಾವಕಾಶ ನೀಡಲಾಗಿತ್ತು. ವೆಚ್ಚ ವೀಕ್ಷಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರಗಳು ಅಂತಿಮಗೊಂಡಿದ್ದು, ಈ ವಿವರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ಮಾಡಲು ಚುನಾವಣಾ ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಿದೆ.

ಅಭ್ಯರ್ಥಿಯ ಪರವಾಗಿ ರಾಜಕೀಯ ಪಕ್ಷಗಳು ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಪಕ್ಷದ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಿಲ್ಲ. ಬಿಜೆಪಿ, ಕಾಂಗ್ರೆಸ್‌, ಸೋಷಿಯಲಿಸ್ಟ್ ಯೂನಿಟಿ ಸೆಂಟ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಗಳು ಮಾತ್ರ ತಮ್ಮ ಅಭ್ಯರ್ಥಿಗಳ ಪರವಾಗಿ ಖರ್ಚು ಮಾಡಿವೆ. ಈ ಲೆಕ್ಕದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.