ADVERTISEMENT

ಮತದಾನಕ್ಕೆ ಸಕಲ ಸಿದ್ಧತೆ: ಡಿಸಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 20:36 IST
Last Updated 21 ಏಪ್ರಿಲ್ 2019, 20:36 IST
ಜಿ.ಎನ್‌. ಶಿವಮೂರ್ತಿ
ಜಿ.ಎನ್‌. ಶಿವಮೂರ್ತಿ   

ದಾವಣಗೆರೆ: ‘ಏಪ್ರಿಲ್‌ 23ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. 1949 ಮತಗಟ್ಟೆಗಳನ್ನು ರಚಿಸಲಾಗಿದ್ದು, ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಚುನಾವಣೆ ಬಗ್ಗೆ ಮಾಹಿತಿ ನೀಡಿದ ಅವರು, ‘ಸೋಮವಾರ ಮತಯಂತ್ರಗಳನ್ನು ಮತಗಟ್ಟೆಗಳಿಗೆ ಒಯ್ಯಲಾಗುವುದು. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದರು.

‘ನೀತಿ ಸಂಹಿತೆ ಜಾರಿಗೊಳಿಸಿದ ಬಳಿಕ ಇದುವರೆಗೆ ಒಟ್ಟು ₹ 3.20 ಕೋಟಿ ಮೌಲ್ಯದ ಮದ್ಯ ಹಾಗೂ ₹ 34.69 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಸಮರ್ಪಕ ದಾಖಲೆಗಳನ್ನು ಸಲ್ಲಿಸದವರಿಗೆ ₹ 11.79 ಲಕ್ಷ ಹಿಂದಿರುಗಿಸಲಾಗಿದೆ. ಒಟ್ಟು ₹ 4.02 ಲಕಷ ಮೌಲ್ಯದ ಬೆಳ್ಳಿ–ಬಂಗಾರದ ವಸ್ತುಗಳನ್ನು ಜಪ್ತಿಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಸಖಿ ಹಾಗೂ ಅಂಗವಿಕಲರ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಸಖಿ ಮತಗಟ್ಟೆಗಳಲ್ಲಿ ಎಲ್ಲಾ ಸಿಬ್ಬಂದಿಯೂ ಮಹಿಳೆಯರೇ ಆಗಿರಲಿದ್ದಾರೆ. ಜಿಲ್ಲೆಯಲ್ಲಿ ತಲಾ 16 ಸಖಿ ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು.

ಭದ್ರತೆಗೆ 3,500 ಸಿಬ್ಬಂದಿ ನಿಯೋಜನೆ

ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಭದ್ರತಾ ಕಾರ್ಯಕ್ಕೆ 3,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಎಲ್ಲಾ ಮತಗಟ್ಟೆಗಳಿಗೂ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಭದ್ರತಾ ಕಾರ್ಯಕ್ಕೆ ಹೋಮ್‌ ಹಾರ್ಡ್‌, ಸಿವಿಲ್‌ ಪೊಲೀಸ್‌, ಡಿ.ಎ.ಆರ್‌, ಕೆ.ಎಸ್‌.ಆರ್‌.ಪಿ, ಸೆಂಟ್ರಲ್‌ ಪ್ಯಾರಾ ಮಿಲಿಟರಿ ಫೋರ್ಸ್‌ನ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ 1,700 ರೌಡಿಶೀಟರ್‌ಗಳ ಪರೇಡ್‌ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.