ADVERTISEMENT

ಆಂಗ್ಲ ಮಾಧ್ಯಮ ಶಾಲೆ ತೆರೆದರೆ ಶವಪೆಟ್ಟಿಗೆ ಮೊಳೆ ಹೊಡೆದಂತೆ: ಕುಂವೀ

ಚನ್ನಗಿರಿ ತಾಲ್ಲೂಕು 16 ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 12:35 IST
Last Updated 2 ಫೆಬ್ರುವರಿ 2019, 12:35 IST
ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಗ್ರಾಮದಲ್ಲಿ ಶನಿವಾರ ನಡೆದ 16ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು. ಕುಂ. ವೀರಭದ್ರಪ್ಪ, ಡಾ. ಗುರುಬಸವಸ್ವಾಮೀಜಿ, ಮಾಡಾಳ್ ವಿರೂಪಾಕ್ಷಪ್ಪ ಇದ್ದರು.
ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಗ್ರಾಮದಲ್ಲಿ ಶನಿವಾರ ನಡೆದ 16ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು. ಕುಂ. ವೀರಭದ್ರಪ್ಪ, ಡಾ. ಗುರುಬಸವಸ್ವಾಮೀಜಿ, ಮಾಡಾಳ್ ವಿರೂಪಾಕ್ಷಪ್ಪ ಇದ್ದರು.   

ಪಾಂಡೋಮಟ್ಟಿ(ಚನ್ನಗಿರಿ ತಾ): ಎಂ. ಎಂ.ಕಲಬುರಗಿ, ಆರ್.ಎಂ. ಮರುಳಪ್ಪ ವೇದಿಕೆ: 'ರಾಜ್ಯ ಸರ್ಕಾರ ಮುಂಬರುವ ಶೈಕ್ಷಣಿಕ ವರ್ಷದಿಂದ 1 ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು ಎಂದು ಈಗಾಗಲೇ ಘೋಷಿಸಿದ್ದು, ಒಂದು ವೇಳೆ ಆಂಗ್ಲ ಮಾಧ್ಯಮ ಶಾಲೆಗಳನ್ನು ತರೆದರೆ 'ಶವ ಪೆಟ್ಟಿಗೆಗೆ ಮೊಳೆ ಹೊಡೆದಂತೆ' ಆಗುತ್ತದೆ. ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದರೆ ಅವುಗಳನ್ನು ಮುಚ್ಚಿಸುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಿಗರಿಗೆ ಇದೆ' ಎಂದು ಹಿರಿಯ ಸಾಹಿತಿ ಕುಂ. ವೀರಭಧ್ರಪ್ಪ ಎಚ್ಚರಿಸಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಶನಿವಾರ ನಡೆದ 16ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಮ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.

ಸಚಿವ ಎಚ್.ಡಿ. ರೇವಣ್ಣ ಅವರು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದರೆ ಏನಾಗುತ್ತದೆ. ನಾವು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರದೇ ತೆರೆಯುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಜ್ಯೋತಿಷ, ಲಿಂಬೆಹಣ್ಣು, ಮಾಟಮಂತ್ರ ಎಂಬ ಮೂಢನಂಬಿಕೆಗಳಿಂದ ಹಿಂದೆ ಹೋಗುವವರಿಗೆ ಕನ್ನಡ ಭಾಷೆಯ ಬಗ್ಗೆ ಏನು ಗೊತ್ತಿದೆ ಎಂಬುದನ್ನು ಹೇಳಬೇಕಾಗಿದೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಕನ್ನಡಿಗರು ಯಾರೂ ಒಪ್ಪುವುದಿಲ್ಲ ಎಂದರು.

ADVERTISEMENT

ಹಳೆಗನ್ನಡ ಸಾಹಿತ್ಯವನ್ನು ಪರಿಚಯಿಸುವ ಕಾರ್ಯವಾಗಬೇಕು. ಕನ್ನಡ ಭಾಷೆಗೆ ಪ್ರೀತಿಸುವ ಗುಣ ಇದೆ. ಆಂಟಿ, ಅಂಕಲ್ ಶಾಪಗ್ರಸ್ತ ಪದಗಳಾಗಿವೆ. ನಮ್ಮ ಜನರು ನ್ಯೂಯಾರ್ಕ್, ವಾಷಿಂಗ್ಟನ್‌ ಕನಸು ಕಾಣಬಾರದು. ಭಾರತ ದೇಶದಲ್ಲಿಯೇ ಹುಟ್ಟಿರುವ ನಾವೆಲ್ಲಾ ಪುಣ್ಯವಂತರಾಗಿದ್ದು, ಇಲ್ಲದೇ ಕನ್ನಡವನ್ನು ಸಂರಕ್ಷಿಸಿ, ಬೆಳೆಸುವ ಕಡೆಗೆ ಗಮನಹರಿಸಬೇಕು. ಕನ್ನಡ ಸಾಹಿತ್ಯಕ್ಕೆ ದಿಕ್ಕು ತೋರಿಸಿದ್ದು, ವಚನ ಸಾಹಿತ್ಯವಾಗಿದೆ. ಎಲ್ಲಾ ಭಾಷೆಗಳನ್ನು ಗೌರವಿಸುವಂತಹ ದೊಡ್ಡ ಶಕ್ತಿ ಕನ್ನಡ ಭಾಷೆಗಿದೆ. ಕರ್ನಾಟಕ ಕನ್ನಡದ ತಾಯ್ತನದ ಹಾಗೂ ಆಸ್ಮಿತೆಗೆ ಹೆಸರಾಗಿರುವ ರಾಜ್ಯವಾಗಿದೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸಿ, ‘ಪ್ರತಿ ಗ್ರಾಮಗಳಲ್ಲೂ ನಡೆಯಬೇಕು. ಕಾನ್ವೆಂಟ್ ಮೋಹ ನಮ್ಮ ಜನರಲ್ಲಿ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ. ಇಂಗ್ಲಿಷ್, ಹಿಂದಿ ಭಾಷೆ ಕಲಿಯಬೇಕು. ಆದರೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವಸ್ವಾಮೀಜಿ, ‘ಕನ್ನಡ ಶಾಲೆಗಳನ್ನು ಮುಚ್ಚಿಸುವ ಪಿತೂರಿ ನಡೆಯುತ್ತಿದೆ. ಇದನ್ನು ಈ ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ. ಕನ್ನಡ ವಿಶೇಷ ಭಾಷೆ. ಇದನ್ನು ಸಂರಕ್ಷಿಸಿ, ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಭಾಷೆ ಬಗ್ಗೆ ಸ್ವಾಭಿಮಾನ ಇರಬೇಕು, ಆದರೆ ದುರಾಭಿಮಾನ ಇರಬಾರದು. ಕನ್ನಡ ಭಾಷೆಗೆ ಅನ್ನ ಕೊಡುವ ನಿಜವಾದ ಶಕ್ತಿ ಇದೆ ಎಂದರು.

ಸಮ್ಮೇಳನದ ಅಧ್ಯಕ್ಷ ಡಾ.ಬಿ.ವಿ. ವಸಂತ ಕುಮಾರ್, ನಿಕಟಪೂರ್ವ ಅಧ್ಯಕ್ಷ ಎಸ್.ಟಿ. ಶಿವಪ್ಪ, ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ. ವಾಗೀಶ್, ಮಂಜುಳ ಟಿ.ವಿ. ರಾಜು, ಯಶೋಧಮ್ಮ, ಎನ್. ಲೋಕೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ ಶ್ರೀಧರ್, ಉಪಾಧ್ಯಕ್ಷೆ ಗೀತಾ ಜಯ್ಯಪ್ಪ, ಸದಸ್ಯ ಎ.ಜಿ. ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಮ್ಮ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.