ADVERTISEMENT

ಸಣ್ಣ ಪ್ರಯತ್ನವೂ ಮಹತ್ವದ ಬದಲಾವಣೆ ತರಬಲ್ಲದು: ಪ್ರೊ.ಲೆಬರ್ನ್ ರೋಸ್

ಲಂಡನ್‌ನ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಪ್ರೊ.ಲೆಬರ್ನ್ ರೋಸ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ಮೇ 2024, 5:18 IST
Last Updated 15 ಮೇ 2024, 5:18 IST
ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದ ಹಾಲಮ್ಮ ಸಭಾಂಗಣದಲ್ಲಿ ‘ವ್ಯಾಪಾರ ಶಿಕ್ಷಣ, ಭವಿಷ್ಯವನ್ನು ರೂಪಿಸುವುದು’ ವಿಷಯ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಮಂಗಳವಾರ ನಡೆಯಿತು.
ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದ ಹಾಲಮ್ಮ ಸಭಾಂಗಣದಲ್ಲಿ ‘ವ್ಯಾಪಾರ ಶಿಕ್ಷಣ, ಭವಿಷ್ಯವನ್ನು ರೂಪಿಸುವುದು’ ವಿಷಯ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಮಂಗಳವಾರ ನಡೆಯಿತು.   

ದಾವಣಗೆರೆ: ‘ಸಣ್ಣದು ಎಂಬ ನಿರ್ಲಕ್ಷ್ಯ ಬೇಡ. ಜೀವನದಲ್ಲಿ ಸಂಭವಿಸುವ ಒಂದು ಸಣ್ಣ ಬದಲಾವಣೆಯೂ ಮಹತ್ವದ ಫಲಿತಾಂಶ ನೀಡಬಲ್ಲದು’ ಎಂದು ಲಂಡನ್‌ನ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಪ್ರೊ.ಲೆಬರ್ನ್ ರೋಸ್ ಅಭಿಪ್ರಾಯಪಟ್ಟರು.

ಇಲ್ಲಿನ ಜಿಎಂಐಟಿಯಲ್ಲಿ ಮಂಗಳವಾರ ಆರಂಭವಾದ ‘ವ್ಯಾಪಾರ ಶಿಕ್ಷಣ, ಭವಿಷ್ಯವನ್ನು ರೂಪಿಸುವುದು’ ವಿಷಯ ಕುರಿತು ಆಯೋಜಿಸಿದ್ದ  3 ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಿಮ್ಮಲ್ಲಿ ಅನೇಕರು ಗಮನಾರ್ಹ ಬದಲಾವಣೆ ಮಾಡುವವರು ಇದ್ದೀರಿ. ಈ ಬಗ್ಗೆ ನನಗೂ ಖಾತ್ರಿಯಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಎಂಬಿಎ ವಿದ್ಯಾರ್ಥಿಗಳು ದೊಡ್ಡ ಬದಲಾವಣೆ ತರಲು ಅವಕಾಶವಿದೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರವಾಗಿ ಪ್ರಯತ್ನಿಸಬೇಕು. ನಿಮ್ಮ ಒಂದು ಸಣ್ಣ ಪ್ರಯತ್ನವೂ ಭಾರತಕ್ಕೆ ವೇಗ ನೀಡಬಲ್ಲದು’ ಎಂದು ವಿಶ್ಲೇಷಿಸಿದರು.

ADVERTISEMENT

‘ನಾನು ಓದಿದ ವಿಶ್ವವಿದ್ಯಾಲಯದಲ್ಲಿ ಒಂದು ಹೊಸ ಕೋರ್ಸ್ ಅಭಿವೃದ್ಧಿಪಡಿಸಿದ್ದು, 1991ರಲ್ಲಿ 13 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಕೋರ್ಸ್ 1994ರ ವೇಳೆಗೆ 350ಕ್ಕೆ ಏರಿತು. ಹಲವು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತಂದಿತು’ ಎಂದು ಉದಾಹರಣೆ ಸಹಿತ ವಿವರಿಸಿದರು.

ಲಂಡನ್‌ನ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಲಾರೆನ್ಸ್ ಫಿಶರ್ ಮಾತನಾಡಿ, ‘ಜೀವನದಲ್ಲಿ ಪರಿಶ್ರಮ ಮುಖ್ಯ. ಪರಿಶ್ರಮದಿಂದ ಸಾಧ್ಯವಿದೆ. ನಾನು ಆರಂಭದಲ್ಲಿ ತುಂಟನಾಗಿದ್ದೆ. ಜೀವನದ ಆಕರ್ಷಣೆಯಿಂದ ಕಲಿಕೆಯ ಬಗ್ಗೆ ಅಷ್ಟೊಂದು ಆಸಕ್ತಿ ತೋರಲಿಲ್ಲ. ಪರಿಶ್ರಮದ ಮಹತ್ವ ಅಷ್ಟಾಗಿ ತಿಳಿದಿರಲಿಲ್ಲ. ಆರಂಭದಲ್ಲಿ ಸೇಲ್ಸ್‌ ಬಾಯ್ಸ್ ಕೆಲಸ ಮಾಡಿದ ಮೇಲೆ ನನಗೆ ಜೀವನದ ಮಹತ್ವ ತಿಳಿಯಿತು. ಆ ಬಳಿಕ ಅಧ್ಯಯನ ಮಾಡಿ ಉಪನ್ಯಾಸಕನಾಗಿ ಕೆಲಸ ಆರಂಭಿಸಿದೆ’ ಎಂದು ಹೇಳಿದರು.   

ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಎಸ್‌.ಆರ್. ಶಂಕಪಾಲ್ ಮಾತನಾಡಿ, ‘ಎಂಬಿಎ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಿದೆ. ದಾವಣಗೆರೆಯಲ್ಲಿ ಅಧ್ಯಯನ ಮಾಡಿದರೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂಬುದು ಸುಳ್ಳು. ನೀವು ಜಾಗತಿಕ ನಾಗರಿಕರು. ವಿದೇಶಗಳಲ್ಲಿಯೂ ಉದ್ಯೋಗಗಳು ಸಿಗಲಿದ್ದು, ಅದಕ್ಕೆ ನೀವು ಸಿದ್ಧರಾಗಬೇಕು. ಅನೇಕ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಲು ಬಯಸುತ್ತಾರೆ. ಆದರೆ ಆರ್ಥಿಕ ಸ್ಥಿತಿಯಿಂದಾಗಿ ಇದು ಸಾಧ್ಯವಾಗದಿರಬಹುದು. ಅಂತಹ ವಿದ್ಯಾರ್ಥಿಗಳಿಗೆ ಯುರೋಪ್, ಯುಎಸ್ಎ ಮತ್ತು ಜಾಗತಿಕ ಮಟ್ಟದಲ್ಲಿ ವ್ಯವಹಾರ ಶಿಕ್ಷಣಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಜಿಎಂಐಟಿ ಪ್ರಾಂಶುಪಾಲ ಸಂಜಯ್ ಪಾಂಡೆ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಪುನರ್ ರೂಪಿಸಿಕೊಳ್ಳಬೇಕು ಮತ್ತು ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸಲು ಅನೇಕ ವಿಷಯಗಳನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ಉಪ ಕುಲಪತಿ ಡಿ.ಮಹೇಶಪ್ಪ, ರಿಜಿಸ್ಟ್ರಾರ್ ಬಿ.ಎಸ್.ಸುನಿಲ್ ಕುಮಾರ್, ನಿರ್ದೇಶಕ ಬಕ್ಕಪ್ಪ, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪಿ.ಎಸ್‌.ಬಸವರಾಜ್, ಎಂ.ಬಿ.ಎ. ವಿಭಾಗದ ಡೀನ್ ಫ್ಯಾಕಲ್ಟಿ ಬಸವರಾಜ್ ಸ್ವಾಮಿ ಸ್ವಾಗತಿಸಿದರು. ಎಸ್‌.ಶಿವಕುಮಾರ್ ವಂದಿಸಿದರು. ಜಿಎಂಎಸ್ ಫಾರ್ಮಸಿ ಕಾಲೇಜಿನ ಅಮಿತ್ ಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.