ADVERTISEMENT

‘ಸಮ ಸಮಾಜದ ಹೋರಾಟ ಆದರ್ಶವಾಗಲಿ’

ಜಯಣ್ಣಗೆ ಎಚ್‌.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಮೇ 2019, 14:54 IST
Last Updated 20 ಮೇ 2019, 14:54 IST
ದಾವಣಗೆರೆಯ ರೇಣುಕ ಮಂದಿರದಲ್ಲಿ ಎಚ್‌.ಡಿ. ದೇವೇಗೌಡ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್‌. ಜಯಣ್ಣ ಅವರಿಗೆ ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು
ದಾವಣಗೆರೆಯ ರೇಣುಕ ಮಂದಿರದಲ್ಲಿ ಎಚ್‌.ಡಿ. ದೇವೇಗೌಡ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್‌. ಜಯಣ್ಣ ಅವರಿಗೆ ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು   

ದಾವಣಗೆರೆ: ಬುದ್ಧ, ಬಸವಣ್ಣ ಅವರು ಕಟ್ಟಿದ ಸಮ ಸಮಾಜವೇ ಇಂದಿಗೂ ಆದರ್ಶವಾಗಿದ್ದು, ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ದಾವಣಗೆರೆ ವಿರಕ್ತಮಠ ಶಿವಯೋಗಾಶ್ರಮದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ದಾವಣಗೆರೆಯ ಎಚ್‌.ಡಿ. ದೇವೇಗೌಡ ಪ್ರತಿಷ್ಠಾನದಿಂದ ಸೋಮವಾರ ಆಯೋಜಿದ್ದ ಕಾರ್ಯಕ್ರಮದಲ್ಲಿ ಎಂ. ಜಯಣ್ಣ ಅವರಿಗೆ ಎಚ್‌.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಇಂದು ಎರಡು ಬಗೆಯ ಹೋರಾಟಗಳು ಇವೆ. ಒಂದು ಖಡ್ಗದ ಹೋರಾಟ ಮತ್ತೊಂದು ವೈಚಾರಿಕತೆಯ ಹೋರಾಟ. ಈಗ ಖಡ್ಗದ ಜಾಗದಲ್ಲಿ ಬಂದೂಕು ಬಂದಿದೆ. ಇದಕ್ಕಿಂತ ಶ್ರೇಷ್ಠವಾದುದು ವೈಚಾರಿಕತೆಯ ಖಡ್ಗವನ್ನು ಹಿಡಿದು ಹೋರಾಟ ಮಾಡುವುದು. ಗೌತಮ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರು ವೈಚಾರಿಕತೆಯ ಹೋರಾಟದಿಂದ ಸಮಾಜದಲ್ಲಿನ ಮೇಲು–ಕೀಳು, ಬಡವ– ಶ್ರೀಮಂತ ಎಂಬ ಬೇಧ ಭಾವವನ್ನು ತೊಡೆದುಹಾಕಿ ಸಮ ಸಮಾಜವನ್ನು ಕಟ್ಟಿದರು. ಆ ಸಮಾನತೆಯ ಸಮಾಜವೇ ಇಂದಿನ ಆದರ್ಶವಾಗಬೇಕು’ಎಂದರು.

ADVERTISEMENT

ಮಧ್ಯ ಕರ್ನಾಟಕದಲ್ಲಿ ಹೋರಾಟ ಮಾಡಿದವರು ಎಂದರೆ ಜಯಣ್ಣ. ದಲಿತರಿಗೆ ಮನೆ ಒದಗಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದರು. ಚಿತ್ರದುರ್ಗಕ್ಕೆ ನೀರಾವರಿ ಯೋಜನೆ ಜಾರಿಗೆ ಹೋರಾಟ ಮಾಡಿದವರಲ್ಲಿ ಜಯಣ್ಣ ಒಬ್ಬರು. ಇಂತಹ ಜನಮುಖಿ ಹೋರಾಟ ಶಾಶ್ವತವಾಗಿ ಇರಲಿ ಎಂದು ಹಾರೈಸಿದರು.

ಮಾಜಿ ಸಚಿವ ಎಚ್‌. ಆಂಜನೇಯ ‘ಜಯಣ್ಣ ಅವರು 70ರ ದಶಕದಲ್ಲೇ ಪೌರ ಕಾರ್ಮಿಕರು ಹಾಗೂ ದಲಿತ ಸಂಘಟನೆಗಳ ಜೊತೆ ಗುರುತಿಸಿಕೊಂಡು ಪರಿಣಾಮಕಾರಿ ಹೋರಾಟ ಮಾಡಿದರು. ಕಾಂಗ್ರೆಸ್‌ ಪಕ್ಷ ವಿಭಜನೆಯಾದಾಗ ಅರಸು ಕಾಂಗ್ರೆಸ್‌ನಲ್ಲಿ ಕಾರ್ಯದರ್ಶಿಯಾಗಿದ್ದರು. ಅದೇ ಹುದ್ದೆಯಲ್ಲಿ ಮುಂದುವರಿದಿದ್ದರೆ ಇಂದು ಶಾಸಕರಾಗುತ್ತಿದ್ದರು’ ಎಂದು ಹೇಳಿದರು.

‘ಇಂದು ಕೆಲವರು ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ಇದು ಮೂರ್ಖತನ. ಸಂವಿಧಾನ ಇರುವುದರಿಂದಲೇ ನಾನು ಮಂತ್ರಿಯಾದೆ’ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ‘ಎಚ್‌.ಡಿ. ದೇವೇಗೌಡ ಅವರು ದೈವಭಕ್ತರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಕೆಲಸ. ದಲಿತರ ಪರವಾಗಿ ಹೋರಾಟ ನಡೆಸಿದ ಜಯಣ್ಣ ಅವರಿಗೆ ಪ್ರಶಸ್ತಿ ನೀಡಿರುವುದು ಸೂಕ್ತ’ ಎಂದರು.

ದಾವಣಗೆರೆಯ ಮುಸ್ಲಿಂ ಧಾರ್ಮಿಕ ಗುರು ಇಬ್ರಾಹಿಂ ಸಖಾಫಿ ‘ಎಚ್‌.ಡಿ. ದೇವೇಗೌಡ ಮುತ್ಸದ್ಧಿ ರಾಜಕಾರಣಿ. ಹೋರಾಟದಿಂದಲೇ ಬೆಳೆದು ದೇಶದ ಪ್ರಧಾನಿ ಆದರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿರುವ ಉತ್ತಮ ಕೆಲಸ ಎಂದು ಹೇಳಿದ ಅವರು, ಸೌಹಾರ್ದಿಂದ ದೇಶವ ಭವಿಷ್ಯ ಕಾಣಬೇಕು ಎಂದು ಹೇಳಿದರು.

ಎಚ್‌.ಡಿ. ದೇವೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎಚ್‌.ಸಿ. ಗುಡ್ಡಪ್ಪ, ದಾವಣಗೆರೆ –ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಾಸಕರಿಯಪ್ಪ, ಜೆಡಿಎಸ್‌ ಮುಖಂಡ ಎಂ. ಆನಂದ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜೆ. ಅಮಾನುಲ್ಲಾ ಖಾನ್, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್‌.ಸಂಗೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವರಾಜ್, ಮುರುಘರಾಜೇಂದ್ರ ಒಡೆಯರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.