ADVERTISEMENT

ಬೆಳಗಿನಜಾವ ‘ಸ್ಟ್ರಾಂಗ್‌ ರೂಂ’ ಸೇರಿದ ಇವಿಎಂ

ಡಿಮಸ್ಟರಿಂಗ್‌ ಕೇಂದ್ರಕ್ಕೆ ಮರಳಿದ ಮತಗಟ್ಟೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 11:45 IST
Last Updated 24 ಏಪ್ರಿಲ್ 2019, 11:45 IST
ತರಳಬಾಳು ಶಾಲೆಯ ಡಿಮಸ್ಟರಿಂಗ್‌ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಇವಿಎಂಗಳನ್ನು ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದರು.
ತರಳಬಾಳು ಶಾಲೆಯ ಡಿಮಸ್ಟರಿಂಗ್‌ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಇವಿಎಂಗಳನ್ನು ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದರು.   

ದಾವಣಗೆರೆ: ಲೋಕಸಭಾ ಕ್ಷೇತ್ರದ 1,949 ಮತಗಟ್ಟೆಗಳಲ್ಲಿ ಮಂಗಳವಾರ ಸಂಜೆ ಮತದಾನ ಮುಕ್ತಾಯಗೊಂಡ ಬಳಿಕ ಮತಗಟ್ಟೆ ಅಧಿಕಾರಿಗಳು ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಇವಿಎಂ ಹಾಗೂ ಚುನಾವಣಾ ಪರಿಕರಗಳನ್ನು ತಾಲ್ಲೂಕು ಕೇಂದ್ರಗಳಲ್ಲಿನ ಡಿಮಸ್ಟರಿಂಗ್‌ ಕೇಂದ್ರಗಳಿಗೆ ರಾತ್ರಿ ತಂದು ಒಪ್ಪಿಸಿದರು.

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಕಾಲಾವಧಿ ನಿಗದಿಪಡಿಸಲಾಗಿತ್ತು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಗಟ್ಟೆ ಸಿಬ್ಬಂದಿ ಇವಿಎಂ, ವಿ.ವಿ. ಪ್ಯಾಟ್‌ ಹಾಗೂ ಇನ್ನಿತರ ಪರಿಕರಗಳನ್ನು ಜೋಡಿಸಿಕೊಂಡರು. ಬಳಿಕ ಪೊಲೀಸ್‌ ಭದ್ರತೆಯಲ್ಲಿ ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳಲ್ಲಿ ತಾಲ್ಲೂಕಿನ ಡಿಮಸ್ಟರಿಂಗ್‌ ಕೇಂದ್ರಕ್ಕೆ ರಾತ್ರಿ ಮರಳಿದರು.

ದಾವಣಗೆರೆ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ನಗರದ ತರಳಬಾಳು ಶಾಲೆಯ ಡಿಮಸ್ಟರಿಂಗ್‌ ಕೇಂದ್ರಕ್ಕೆ ತಂದು ಒಪ್ಪಿಸಿದರು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಮೋತಿ ವೀರಪ್ಪ ಕಾಲೇಜು ಮೈದಾನದ ಕೇಂದ್ರಕ್ಕೆ ತಲುಪಿಸಿದರು. ತಡರಾತ್ರಿಯವರೆಗೂ ಡಿಮಸ್ಟರಿಂಗ್‌ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ನಡೆಯಿತು.

ADVERTISEMENT

ಆರು ತಾಲ್ಲೂಕು ಕೇಂದ್ರಗಳ ಡಿಮಸ್ಟರಿಂಗ್‌ ಕೇಂದ್ರಗಳಿಂದ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳು ಬುಧವಾರ ಬೆಳಗಿನಜಾವ ಇವಿಎಂ ಹಾಗೂ ವಿ.ವಿ. ಪ್ಯಾಟ್‌ಗಳನ್ನು ನಗರದ ಹೊರವಲಯದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ‘ಸ್ಟ್ರಾಂಗ್‌ ರೂಂ’ಗೆ ಒಯ್ದರು. ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನೂ ಪ್ರತ್ಯೇಕವಾಗಿ ಎಂಟು ‘ಸ್ಟ್ರಾಂಗ್‌ ರೂಂ’ಗಳಲ್ಲಿ ಭದ್ರವಾಗಿ ಇಡಲಾಯಿತು.

ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೂ ಇವಿಎಂಗಳನ್ನು ಪೊಲೀಸ್‌ ಸರ್ಪಗಾವಲಿನಲ್ಲಿ ಇಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.