ADVERTISEMENT

ದಾವಣಗೆರೆ: ಅನನ್ಯವಾಗಿ ಅಭಿವ್ಯಕ್ತಿಸುವ ಕಲಾವಿದರು

ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಆ್ಯನಿಮೇಶನ್, ಮಲ್ಟಿಮೀಡಿಯಾ ಕಲಾಕೃತಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 5:21 IST
Last Updated 16 ಏಪ್ರಿಲ್ 2024, 5:21 IST

ದಾವಣಗೆರೆ: ‘ಕಲಾವಿದರು ಹಾಗೂ ಗಣಿತ ಕ್ಷೇತ್ರದವರದ್ದು ಅಕ್ಕ – ತಂಗಿ ಮಕ್ಕಳ ಸಂಬಂಧ. ಗಣಿತಜ್ಞರು ಸಂಖ್ಯೆಗಳನ್ನು ಇರಿಸಿಕೊಂಡು ಕಲ್ಪನೆ ಕಂಡು, ಸೂತ್ರ ಕಂಡುಕೊಳ್ಳುತ್ತಾರೆ. ಕಲಾವಿದರೂ ಅನೇಕ ಬಗೆಗಳಿಂದ ಪ್ರೇರಣೆಗೊಂಡು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾರೆ, ಅನನ್ಯವಾಗಿ ಅಭಿವ್ಯಕ್ತಿಸುತ್ತಾರೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಆಡಳಿತಾಂಗ ಕುಲಸಚಿವ (ಪ್ರಭಾರ) ಯು.ಎಸ್. ಮಹಾಬಲೇಶ್ವರ ಅಭಿಪ್ರಾಯಪಟ್ಟರು. 

ನಗರದ ದೃಶ್ಯ ಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಆ್ಯನಿಮೇಶನ್ ಮತ್ತು ಮಲ್ಟಿಮೀಡಿಯಾ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಆ್ಯನಿಮೇಶನ್ ಮತ್ತು ಮಲ್ಟಿಮೀಡಿಯಾ ಮಾಧ್ಯಮ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ರೀತಿಯ ಪ್ರದರ್ಶನ ಪ್ರತಿಭಾ ವಿಕಾಸಕ್ಕೆ ಪೂರಕ. ಕಲಾವಿದರು ಹೊರನೋಟಕ್ಕೆ ವಿಭಿನ್ನವಾಗಿ ಕಂಡರೂ, ಅಂತರಂಗದಲ್ಲಿ  ಹೃದಯ ಶ್ರೀಮಂತಿಕೆಯಿಂದ ಕೂಡಿರುತ್ತಾರೆ. ವಿದ್ಯಾರ್ಥಿಗಳ ಕಲಾ ಪ್ರದರ್ಶನಗಳಿಗೆ ವಿಶ್ವವಿದ್ಯಾಲಯದ ಸಹಕಾರ ಸದಾ ಇರುತ್ತದೆ’ ಎಂದರು.

ADVERTISEMENT

‘ಚಿತ್ರಕಲೆ, ಶಿಲ್ಪ, ಸಾಹಿತ್ಯ, ಸಂಗೀತ, ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಸಾಹಿತ್ಯ ಕೃತಿ ಜನರ ಗಮನ ಸೆಳೆಯಲು ಅದರ ಮುಖಪುಟ ಆಕರ್ಷಕ ಆಗಿರುವುದು ಮುಖ್ಯವಾಗುತ್ತದೆ’ ಎಂದು ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಬಾ.ಮ. ಬಸವರಾಜಯ್ಯ ಅಭಿಪ್ರಾಯಪಟ್ಟರು.

‘ಇತ್ತೀಚಿನ ವರ್ಷಗಳಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯ ಈ ರೀತಿ ಔಚಿತ್ಯ ಪೂರ್ಣ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಹೆಚ್ಚು ಪರಿಚಿತವಾಗುತ್ತಿರುವುದು ಸಂತಸದ ಸಂಗತಿ. ಕಾಲೇಜಿನ ಕ್ಯಾಂಪಸ್‌ನಲ್ಲಿ ನಿತ್ಯವೂ ಕಲಾ ಲೋಕದ ಅನಾವರಣಗೊಳ್ಳಲಿ’ ಎಂದರು.

ಪ್ರಾಚಾರ್ಯ ಜೈರಾಜ ಚಿಕ್ಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕ ಸತೀಶ ಕುಮಾರ್ ವಲ್ಲೇಪುರೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ನವ್ಯಾ, ಕೃತಿಕಾ, ಕೀರ್ತಿ ಪ್ರಾರ್ಥಿಸಿದರು. ಬೋಧನಾ ಸಹಾಯಕರಾದ ದತ್ತಾತ್ರೇಯ ಎನ್. ಭಟ್ಟ ನಿರೂಪಿಸಿ, ಹರೀಶ ಹೆಡ್ನವರ್ ವಂದಿಸಿದರು. 

ಬೋಧನಾ ಸಹಾಯಕ ರಂಗನಾಥ ಕುಲಕರ್ಣಿ, ನಿವೃತ್ತ ಪ್ರಾಚಾರ್ಯ ರವೀಂದ್ರ ಕಮ್ಮಾರ, ನಿವೃತ್ತ ಸಂಯೋಜನಾಧಿಕಾರಿ ಹನುಮಂತ ಆಚಾರ್, ಕಲಾವಿದ ರವೀಂದ್ರ ಅರಳಗುಪ್ಪಿ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.