ADVERTISEMENT

ದಾಯಾದಿ ಕಲಹ: ತಮ್ಮನ ಪತ್ನಿಯ ಕೊಲೆ

ಪೊಲೀಸರ ದಿಕ್ಕುತಪ್ಪಿಸಲು ಮಾಂಗಲ್ಯ ಸರ ಕಳ್ಳತನ* ಪ್ರಕರಣ ಭೇದಿಸಲು ನೆರವಾದ ತುಂಗಾ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 16:47 IST
Last Updated 5 ಸೆಪ್ಟೆಂಬರ್ 2020, 16:47 IST
ದಾವಣಗೆರೆ ಗ್ರಾಮಾಂತರ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು. ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಇದ್ದಾರೆ.
ದಾವಣಗೆರೆ ಗ್ರಾಮಾಂತರ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು. ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಇದ್ದಾರೆ.   

ದಾವಣಗೆರೆ: ಸೆಪ್ಟೆಂಬರ್ 1ರಂದು ಹೂವಿನಮಡು ಗ್ರಾಮದಲ್ಲಿ ತಮ್ಮನ ಪತ್ನಿಯನ್ನೇ ಕೊಲೆ ಮಾಡಿರುವ ಆರೋಪಿಯನ್ನು ಇಲ್ಲಿನ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ದಾಯಾದಿ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ.

ಮಹಿಳೆಯ ಭಾವ ಕರಿಬಸಪ್ಪ (52) ಆರೋಪಿ.ಈತನ ತಮ್ಮ ರುದ್ರೇಶ ಅವರ ಪತಿ ನೀಲಮ್ಮ (48) ಕೊಲೆಯಾದವರು.

‘ಅಣ್ಣ–ತಮ್ಮಂದಿರ ನಡುವೆ ಬಹಳ ದಿನಗಳಿಂದ ದಾಯಾದಿ ಕಲಹವಿದ್ದು, ಇದನ್ನೆ ಮನಸ್ಸಿನಲ್ಲಿಟ್ಟುಕೊಂಡ ಆರೋಪಿ ಕರಿಬಸಪ್ಪ ನೀಲಮ್ಮಳು ಒಬ್ಬಳೇ ತೋಟದಲ್ಲಿದ್ದಾಗ ಆಕೆಯ ಸೀರೆ ಸೆರಗಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ವಿಚಾರಣೆ ವೇಳೆ ಈ ವಿಷಯನ್ನು ಬಾಯಿ ಬಿಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಹೂವಿನಮಡು ಗ್ರಾಮದಲ್ಲಿ ಮೆಕ್ಕೆಜೋಳವು ಇರುವ ತಮ್ಮ ತೆಂಗಿನ ತೋಟದಲ್ಲಿ ನೀಲಮ್ಮ ಕಾಯಿ ಆರಿಸಿಕೊಂಡು ಬರಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದೇ ಇದ್ದುದ್ದರಿಂದ ದಿಗಿಲುಗೊಂಡ ಪತಿ ರುದ್ರೇಶ ಎಷ್ಟೇ ಹುಡಿಕಿದರೂ ಪತ್ನಿ ಸಿಕ್ಕಿರಲಿಲ್ಲ. ಕೊನೆಗೆ ಜಮೀನಿನ ಮಧ್ಯೆದಲ್ಲಿ ಶವ ಪತ್ತೆಯಾಗಿತ್ತು. ಆರೋಪಿಯು ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಹಾಗೂ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದ’ ಎಂದು ವಿವರಿಸಿದರು.

ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ:‘ಎಎಸ್ಪಿ ಎಂ.ರಾಜೀವ್ ಮತ್ತು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ. ಮಂಜುನಾಥ್ ನೇತೃತ್ವದಲ್ಲಿ ಹದಡಿ ಠಾಣೆಯ ಪಿಎಸ್ಐ ಪಿ. ಪ್ರಸಾದ್, ಎಎಸ್ಐ ಚನ್ನವೀರಪ್ಪ, ಏಕಾಂತಪ್ಪಸಿಬ್ಬಂದಿ ನಾಗರಾಜ್, ಹರೀಶ್, ಶಿವಕುಮಾರ್, ಅರುಣ್ ಕುಮಾರ್ ಅವರನ್ನೊಳಗೊಂಡ ತಂಡವು ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಇವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಪವರ್ ಆಫ್ ಪಾಕಿಸ್ತಾನ್’ ಎಂಬ ಫೇಸ್‌ಬುಕ್ ಪೇಜ್ ಶೇರ್ ಮಾಡಿರುವ ಪ್ರಕರಣ ಸಂಬಂಧ ಹೆಡ್ ಕಾನ್‌ಸ್ಟೆಬಲ್ ಸನಾವುಲ್ಲಾನನ್ನು ಅಮಾನತುಗೊಳಿಸಲಾಗಿದೆ. ಡಿಎಸ್ಪಿ ನೇತೃತ್ವದಲ್ಲಿ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಅವರು ನೀಡುವ ಮಾಹಿತಿಯ ಆಧಾರದ ಮೇಲೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಗೋಷ್ಠಿಯಲ್ಲಿ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ, ಪಿಎಸ್ಐ ಸಂಜೀವ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.