ADVERTISEMENT

ರೇಣುಕಾಚಾರ್ಯ ಕ್ಷಮೆಯಾಚಿಸದಿದ್ದರೆ ಮುಖಕ್ಕೆ ಮಸಿ: ರೈತ ಸಂಘ ಎಚ್ಚರಿಕೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:56 IST
Last Updated 20 ಡಿಸೆಂಬರ್ 2020, 4:56 IST

ದಾವಣಗೆರೆ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕುರಿತು ಅವಹೇಳನವಾಗಿ ಮಾತನಾಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದರ ಜೊತೆಗೆ ಮುಖಕ್ಕೆ ಮಸಿ ಬಳಿಯಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.

‘ಕೋಡಿಹಳ್ಳಿ ಚಂದ್ರಶೇಖರ್ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದರೆ ತನಿಖೆ ಮಾಡಿ ಮುಟ್ಟುಗೋಲು ಹಾಕಿಕೊಳ್ಳಲಿ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕೆಎಸ್‌ಆರ್‌ಟಿಸಿಯಲ್ಲಿ ಶೇ 90ರಷ್ಟು ರೈತರ ಮಕ್ಕಳೇ ಕಾರ್ಯ ನಿರ್ವಹಿಸುತ್ತಿರುವ ಕಾರಣ ಅವರಿಗೆ ನ್ಯಾಯ ಒದಗಿಸುವ ಹಿತದೃಷ್ಟಿಯಿಂದ ಕೋಡಿಹಳ್ಳಿ ಅವರು ಮುಷ್ಕರದ ನಾಯಕತ್ವ ವಹಿಸಿದ್ದರು. ಆದರೆ, ರೇಣುಕಾಚಾರ್ಯ ಇಲ್ಲಸಲ್ಲದ್ದನ್ನು ಹೇಳಿ ಅವರ ತೇಜೋವಧೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ರೇಣುಕಾಚಾರ್ಯ ಅವರ ತಂದೆ ಶಿಕ್ಷಕರಾಗಿದ್ದರು. ಅವರಿಗೆ 10 ಜನ ಮಕ್ಕಳಿದ್ದು, ಕೇವಲ 8 ಎಕರೆ ಜಮೀನು ಹೊಂದಿದ್ದರು. ಬೋರ್‌ವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಚಾರ್ಯ ಈ ಶಾಸಕರಾದ ನಂತರ ಸಾವಿರಾರು ಕೋಟಿ ಆಸ್ತಿಯನ್ನು ಸಂಪಾದಿಸಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ್ ಮಾತನಾಡಿ, ‘ಪ್ರವಾಹ ಸಂದರ್ಭದಲ್ಲಿ ತೆಪ್ಪದಲ್ಲಿ ನಿಂತು ನಾಟಕವಾಡಿದ ರೇಣುಕಾಚಾರ್ಯ ಅವರು ಡೋಂಗಿ ಹೋರಾಟಗಾರ ಯಾರು ಎಂದು ಹೇಳಬೇಕು’ ಎಂದರು.

ಕರೇಕಟ್ಟೆ ಕಲೀಂವುಲ್ಲಾ, ಮಂಜುನಾಥ ಮಲ್ಲಶೆಟ್ಟಿಹಳ್ಳಿ, ಬಸವರಾಜ ದಾಗಿನಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.