ಜಗಳೂರು: ತಾಲ್ಲೂಕಿನಲ್ಲಿ ಯೂರಿಯಾ ರಸಗೊಬ್ಬರ ಕೊರತೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ನೇತೃತ್ವದಲ್ಲಿ ಪಟ್ಟಣದಲ್ಲಿ ರೈತರು ಬುಧವಾರ ರಸ್ತೆ ತಡೆ ನಡೆಸಿದರು.
‘ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರಸಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಅಗತ್ಯ ದಾಸ್ತಾನು ಇರಿಸಿಕೊಳ್ಳದೇ ತೊಂದರೆ ಮಾಡುತ್ತಿದ್ದಾರೆ. ಕೂಡಲೇ ಸಮರ್ಪಕವಾಗಿ ರಸಗೊಬ್ಬರ ವಿತರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು’ ಎಂದು ಸಂಘಟನೆ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ‘ಈ ಬಗ್ಗೆ ಉಪವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇನ್ನೆರೆಡು ದಿನಗಳಲ್ಲಿ ಯೂರಿಯಾ ರಸಗೊಬ್ಬರ ಪೂರೈಕೆಯಾಗಲಿದೆ. ರೈತರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಚಿರಂಜೀವಿ ಸಿ.ಎಂ ಹೊಳೆ, ಪದಾಧಿಕಾರಿಗಳಾದ ಸತೀಶ್, ಗಂಗಾಧರಪ್ಪ, ಮಹದೇವರೆಡ್ಡಿ, ತಿಪ್ಪೇಸ್ವಾಮಿ, ಹುಸೇನ್ ಸಾಬ್, ಪರಶುರಾಮ್, ಹನುಮಂತಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.