ADVERTISEMENT

ರೈತನ ಮಗನಿಗೆ ಒಲಿದ ಡಿವೈಎಸ್‌ಪಿ ಹುದ್ದೆ

ಐಟಿ ಕಂಪನಿ ನೌಕರಿ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಯುವಕ

ವಿನಾಯಕ ಭಟ್ಟ‌
Published 25 ಡಿಸೆಂಬರ್ 2019, 13:41 IST
Last Updated 25 ಡಿಸೆಂಬರ್ 2019, 13:41 IST
ಜಿ. ಮಂಜುನಾಥ
ಜಿ. ಮಂಜುನಾಥ   

ದಾವಣಗೆರೆ: ಸಂತೇಬೆನ್ನೂರಿನ ಗುರುಸಿದ್ದಯ್ಯ ಜಿ.ಎಂ. ಹಾಗೂ ರುದ್ರಮ್ಮ ರೈತ ದಂಪತಿ ಸುರಿಸಿದ ಬೆವರಿಗೆ ಪ್ರೊಬೆಷನರಿ ಡಿವೈಎಸ್‌ಪಿ ಹುದ್ದೆಗೆ ಆಯ್ಕೆಯಾಗುವ ಮೂಲಕ ಪುತ್ರ ಜಿ. ಮಂಜುನಾಥ ಬೆಲೆ ತಂದುಕೊಟ್ಟಿದ್ದಾರೆ. ಖಾರಾ–ಮಂಡಕ್ಕಿ ಮಾರಿ ಕುಟುಂಬ ನಿರ್ವಹಣೆಗೆ ಆಸರೆಯಾಗುತ್ತಿದ್ದ ಅಜ್ಜಿಯ ಮೊಗದಲ್ಲೂ ಮಂದಹಾಸ ಮೂಡಿಸಿದ್ದಾರೆ.

ಕರ್ನಾಟಕ ಲೋಕಸಭಾ ಆಯೋಗ (ಕೆ.ಪಿ.ಎಸ್‌.ಸಿ.) ಸೋಮವಾರ ಪ್ರಕಟಿಸಿದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಆಯ್ಕೆಪಟ್ಟಿಯಲ್ಲಿ ಡಿವೈಎಸ್‌ಪಿ ಹುದ್ದೆಗೆ ಹೆಸರು ನಮೂದಾಗಿರುವುದು ಮಂಜುನಾಥ ಕುಟುಂಬದಲ್ಲಿ ಸಂತಸದ ಅಲೆಯನ್ನೇ ಎಬ್ಬಿಸಿದೆ. ತಮ್ಮೂರಿನ ಹುಡುಗನ ಸಾಧನೆಗೆ ಸಂತೇಬೆನ್ನೂರಿನಲ್ಲೂ ಸಂಭ್ರಮ ಮೂಡಿದೆ.

ಮಂಜುನಾಥ ಅವರ ಪ್ರಾಥಮಿಕ ಶಿಕ್ಷಣ ಸಂತೇಬೆನ್ನೂರಿನಲ್ಲೇ ನಡೆದಿತ್ತು. ಪ್ರೌಢಶಾಲೆ ಹಾಗೂ ದ್ವಿತೀಯ ಪಿಯುವನ್ನು ದಾವಣಗೆರೆಯ ವಿಶ್ವಚೇತನ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಬಳಿಕ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದರು. ಐಟಿ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ ಇವರು ಮೂರು ವರ್ಷಗಳ ಕಾಲ ಕೆಲಸ ಮಾಡಿದರು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಬಯಕೆಯಿಂದ ಕೆಲಸವನ್ನು ಬಿಟ್ಟು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು.

ADVERTISEMENT

‘ಮೊದಲ ಬಾರಿಗೆ ಕೆಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಾಗ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಂದರ್ಶನದವರೆಗೆ ಹೋಗಿದ್ದೆ. ಈ ಬಾರಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಮುಂದೆ ಯುಪಿಎಸ್‌ಸಿ ಪರೀಕ್ಷೆಯನ್ನೂ ತೆಗೆದುಕೊಳ್ಳುವ ಗುರಿ ಹೊಂದಿದ್ದೇನೆ’ ಎಂದು ಮಂಜುನಾಥ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಮ್ಮದು ಮಧ್ಯಮ ವರ್ಗದ ರೈತ ಕುಟುಂಬ. ತಾಯಿಯ ಹೆಸರಿನಲ್ಲಿ ಒಂದೂಕಾಲು ಎಕರೆ ಜಮೀನು ಇದೆ. ಅಜ್ಜಿಯು ಸಂತೆಯಲ್ಲಿ ಖಾರಾ–ಮಂಡಕ್ಕಿ ಮಾರಾಟ ಮಾಡುತ್ತಾರೆ. ಅಜ್ಜಿಗೆ ತಾಯಿಯೂ ಸಾಥ್‌ ನೀಡುತ್ತಿದ್ದಾರೆ. ತಂದೆ ಕೃಷಿ ಚಟುವಟಿಕೆ ನೋಡಿಕೊಳ್ಳುತ್ತಿದ್ದಾರೆ’ ಎಂದು ತಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಬೆಳಕು ಚೆಲ್ಲಿದರು.

‘ಸರ್ಕಾರದಿಂದ ಸ್ಕಾಲರ್‌ಷಿಪ್‌ ಸಿಕ್ಕಿದ್ದರಿಂದ ಬೆಂಗಳೂರಿನಲ್ಲಿ ಎಂಟು ತಿಂಗಳ ಕಾಲ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದುಕೊಂಡೆ. ಪ್ರತಿ ದಿನ ಆರೇಳು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಪ್ರತಿ ತಿಂಗಳು ₹ 4,000 ಶಿಷ್ಯವೇತನ ಸಿಗುತ್ತಿತ್ತು. ಮೂರು ವರ್ಷ ನೌಕರಿ ಮಾಡಿ ಉಳಿತಾಯ ಮಾಡಿದ್ದ ಹಣದಲ್ಲಿ ತರಬೇತಿ ಅವಧಿಯಲ್ಲಿಯ ಖರ್ಚುಗಳನ್ನು ಹೊಂದಿಸಿಕೊಂಡಿದ್ದೆ. ಜೊತೆಗೆ ವ್ಯಾಪಾರದಿಂದ ಬಂದ ಲಾಭದಲ್ಲಿ ಅಜ್ಜಿಯೂ ನೆರವಾಗುತ್ತಿದ್ದರು’ ಎಂದು ಮಂಜುನಾಥ ಹೇಳಿದರು.

ಐಟಿ ಉದ್ಯೋಗಿಗೆ ಒಲಿದ ತಹಶೀಲ್ದಾರ್‌ ಹುದ್ದೆ

ದಾವಣಗೆರೆ: ವೋಲ್ವೊ ಗ್ರೂಪ್‌ ಐಟಿ ಕಂಪನಿಯ ಸೀನಿಯರ್‌ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಸಂತೇಬೆನ್ನೂರಿನ ವಿನಾಯಕ ಸಾಗರ ಪಿ.ವಿ. ಅವರು ಪ್ರೊಬೆಷನರಿ ತಹಶೀಲ್ದಾರ್‌ ಗ್ರೇಡ್‌–2 ಹುದ್ದೆಗೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ವಾಗೀಶ್‌ ಹಾಗೂ ರೇಣುಕಾದೇವಿ ದಂಪತಿಯ ಪುತ್ರ ವಿನಾಯಕ ಸಾಗರ ಅವರು ಪ್ರಾಥಮಿಕ ಶಿಕ್ಷಣವನ್ನು ಸಂತೇಬೆನ್ನೂರಿನಲ್ಲೇ ಪಡೆದಿದ್ದರು. ಬಳಿಕ ಕೆರೆಬಿಳಚಿಯಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗದ ಡಿವಿಎಸ್‌ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿದರು. ನಂತರ ಬೆಂಗಳೂರಿನಲ್ಲಿ ಪೆಸಿಟ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು. ಮೂರು ವರ್ಷಗಳ ಕಾಲ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ನೌಕರಿ ಬಿಟ್ಟು ಬಂದಿದ್ದರು. 2012ರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರು.

ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಎರಡನೇ ಬಾರಿಗೆ ಬರೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದರು. ಪರೀಕ್ಷೆ ಬರೆದ ಬಳಿಕ ಎರಡು ವರ್ಷಗಳ ಹಿಂದೆ ವೋಲ್ವೊ ಗ್ರೂಪ್‌ ಐಟಿ ಕಂಪನಿಗೆ ಕೆಲಸಕ್ಕೆ ಸೇರಿದ್ದರು.

‘ತಾಳ್ಮೆ ಹಾಗೂ ನಿರಂತರ ಪ್ರಯತ್ನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಇರಬೇಕಾದ ಅಗತ್ಯ ಅಂಶಗಳಾಗಿವೆ’ ಎಂದು ವಿನಾಯಕ ಸಾಗರ ಅವರು ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು.

******

ಬಾಲ್ಯದಿಂದಲೂ ಪೊಲೀಸ್‌ ಅಧಿಕಾರಿಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಕನಸಿತ್ತು. ಈಗ ಅದು ಸಾಕಾರಗೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ.

– ಜಿ. ಮಂಜುನಾಥ, ಪ್ರೊಬೆಷನರಿ ಡಿವೈಎಸ್‌ಪಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.