ADVERTISEMENT

ಜಗಳೂರು | ರಸಗೊಬ್ಬರ ಕೊರತೆ; ಅಧಿಕಾರಿಗಳ ಭೇಟಿ

ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ಅಧಿಕಾರಿಗಳ ಸಭೆ; ರಸಗೊಬ್ಬರ ಪೂರೈಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 5:11 IST
Last Updated 23 ಜುಲೈ 2025, 5:11 IST
ಜಗಳೂರಿನಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ಸಂತೋಷ್ ನೇತೃತ್ವದಲ್ಲಿ ಅಧಿಕಾರಿಗಳು ರಸಗೊಬ್ಬರ ಅಂಗಡಿಗಳಿಗೆ ತೆರಳಿ ದಾಸ್ತಾನು ಪರಿಶೀಲನೆ ನಡೆಸಿದರು
ಜಗಳೂರಿನಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ಸಂತೋಷ್ ನೇತೃತ್ವದಲ್ಲಿ ಅಧಿಕಾರಿಗಳು ರಸಗೊಬ್ಬರ ಅಂಗಡಿಗಳಿಗೆ ತೆರಳಿ ದಾಸ್ತಾನು ಪರಿಶೀಲನೆ ನಡೆಸಿದರು   

ಜಗಳೂರು: ತಾಲ್ಲೂಕಿನಲ್ಲಿ ರಸಗೊಬ್ಬರ ಕೊರತೆಯಿಂದಾಗಿ ರೈತರು ಆಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ್ ನೇತೃತ್ವದಲ್ಲಿ ಅಧಿಕಾರಿಗಳು ಪಟ್ಟಣದ ವಿವಿಧ ರಸಗೊಬ್ಬರ ಅಂಗಡಿಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿನೆ ನಡೆಸಿದರು. 

ನಂತರ ಶಾಸಕ ಬಿ. ದೇವೇಂದ್ರಪ್ಪ ನೇತೃತ್ವದಲ್ಲಿ ಸಭೆ ನಡೆಸಿ ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದರು. 

ಪ್ರಸಕ್ತ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ 2 ದಿನಗಳಿಂದ ಉತ್ತಮ ಮಳೆ ಬೀಳುತ್ತಿರುವುದರಿಂದ ಭಾರಿ ಸಂಖ್ಯೆಯಲ್ಲಿ ರೈತರು ಯೂರಿಯಾ ಹಾಗೂ ಡಿಎಪಿ ರಸಗೊಬ್ಬರ ಖರೀದಿಗಾಗಿ ಪಟ್ಟಣದ ಅಂಗಡಿಗಳಿಗೆ ಮುಗಿಬಿದ್ದಿದ್ದರು. ಆದರೆ, ದಾಸ್ತಾನು ಇಲ್ಲ ಎಂದು ಖಾಸಗಿ ಮಾರಾಟಗಾರರು ಬಾಗಿಲು ಮುಚ್ಚಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮಂಗಳವಾರ ವರದಿ ಪ್ರಕಟವಾಗಿತ್ತು. 

ADVERTISEMENT

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ಸೂಚನೆಯಂತೆ ಪಟ್ಟಣಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಸಂತೋಷ್ ಅವರು, ಹಲವು ರಸಗೊಬ್ಬರ ಅಂಗಡಿಗಳಿಗೆ ತೆರಳಿ, ಇದುವರೆಗೆ ಪೂರೈಕೆಯಾಗಿರುವ ರಸಗೊಬ್ಬರ, ಮಾರಾಟವಾದ ಪ್ರಮಾಣ ಮತ್ತು ದಾಸ್ತಾನು ಕುರಿತು ವ್ಯಾಪಾರಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದರು. ಯಾಕೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುತ್ತಿದ್ದೀರಿ ಎಂದು ರೈತರಿಂದ ಮಾಹಿತಿ ಪಡೆದರು. 

ಶಾಸಕ ಬಿ. ದೇವೇಂದ್ರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸಿ ಸಂತೋಷ್, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಕೃಷಿ ಅಧಿಕಾರಿ ಶ್ವೇತಾ, ತೋಟಗಾರಿಕಾ ಅಧಿಕಾರಿ ಪ್ರಭುಶಂಕರ್ ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಕೃಷಿ  ಇಲಾಖೆ ಜಂಟಿ ನಿರ್ದೇಶಕರೊಂದಿಗೆ ಶಾಸಕರು ದೂರವಾಣಿಯಲ್ಲಿ ಮಾತನಾಡಿದರು. 

ತಾಲ್ಲೂಕಿನಲ್ಲಿ ಜಿಲ್ಲೆಯಲ್ಲೇ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ರಸಗೊಬ್ಬರ ಸಿಗದೆ ರೈತರು ಆತಂಕಕ್ಕೀಡಾಗಿದ್ದಾರೆ. ಕೂಡಲೇ ತಾಲ್ಲೂಕಿಗೆ ಅಗತ್ಯ ರಸಗೊಬ್ಬರ ಪೂರೈಸಬೇಕು ಎಂದು ಶಾಸಕರು ಒತ್ತಾಯಿಸಿದರು. 

ಸಮರ್ಪಕವಾಗಿ ರಸಗೊಬ್ಬರ ಪೂರೈಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ವಾಸುದೇವ ಮೇಟಿ) ಬಣದ ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. 

‘ಅಗತ್ಯ ಪೋಷಕಾಂಶ ಹಾಗೂ ಶೀತ ನಿಯಂತ್ರಣಕ್ಕಾಗಿ ಯೂರಿಯಾ ರಸಗೊಬ್ಬರ ಬೇಕಿದೆ. ವ್ಯಾಪಾರಿಗಳು ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿದ್ದಾರೆ. ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ’ ಎಂದು ಸಂಘದ ಮುಖಂಡ ಕುಮಾರ್ ಭರಮಸಮುದ್ರ ಆರೋಪಿಸಿದರು. 

ಲೋಕೇಶ್ ದೊಣ್ಣೆಹಳ್ಳಿ, ಬಸವರಾಜ್, ಪಾಲನಾಯಕ, ತಿಪ್ಪೇಸ್ವಾಮಿ, ಕಿರಣ್ ಕುಮಾರ್, ಚೌಡಮ್ಮ, ಸತೀಶ್ ಮಲೆಮಾಚಿಕೆರೆ, ಆರ್.ಓಬಳೇಶ್ ಇದ್ದರು.

ಜಗಳೂರಿನ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.