ADVERTISEMENT

ಹಕ್ಕುಗಳಿಗಾಗಿ ಸಮಾಜ ಒಡೆಯದೇ ಹೋರಾಟ ಮಾಡಿ: ಜಗದೀಶ ಶೆಟ್ಟರ್‌

ಬಣಜಿಗ ಸಮಾಜದ ಜಿಲ್ಲಾ ಸಮಾವೇಶವನ್ನು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 14:42 IST
Last Updated 2 ಸೆಪ್ಟೆಂಬರ್ 2018, 14:42 IST
ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಅಭಿನವ ರೇಣುಕ ಮಂದಿರದಲ್ಲಿ ನಡೆದ ಜಿಲ್ಲಾ ಸಮಾವೇಶವನ್ನು ಶಾಸಕ ಜಗದೀಶ ಶೆಟ್ಟರ್‌ ಉದ್ಘಾಟಿಸಿದರು
ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಅಭಿನವ ರೇಣುಕ ಮಂದಿರದಲ್ಲಿ ನಡೆದ ಜಿಲ್ಲಾ ಸಮಾವೇಶವನ್ನು ಶಾಸಕ ಜಗದೀಶ ಶೆಟ್ಟರ್‌ ಉದ್ಘಾಟಿಸಿದರು   

ದಾವಣಗೆರೆ: ನಮ್ಮ ಹಕ್ಕುಗಳು ನಮಗೆ ಸಿಗಬೇಕು. ಅದಕ್ಕೆ ಕಾನೂನು ರೀತಿಯ ಹೋರಾಟ ನಡೆಸಬೇಕೇ ಹೊರತು, ಸಮಾಜವನ್ನು ಒಡೆಯಲು ಹೋಗಬಾರದು ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಅಭಿನವ ರೇಣುಕ ಮಂದಿರದಲ್ಲಿ ನಡೆದ ಜಿಲ್ಲಾ ಸಮಾವೇಶ, ವಿಶ್ವಸ್ಥ ಮಂಡಳಿ ಸದಸ್ಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ‘ಬಣಜಿಗರ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಮಾಜವನ್ನು ಒಡೆಯುವ ಪ್ರಯತ್ನಗಳು ಬಹಳ ಆಗಿವೆ. ಕಳೆದ ಬಾರಿ ಒಡೆಯುವ ಪ್ರಯತ್ನ ನಡೆದಾಗ ಶಾಮನೂರು ಶಿವಶಂಕರಪ್ಪ ಅದರ ವಿರುದ್ಧ ಗಟ್ಟಿಯಾಗಿ ನಿಂತಿದ್ದರಿಂದ ಒಡೆಯುವವರಿಗೆ ಶಕ್ತಿ ಸಿಗಲಿಲ್ಲ. ಅವರು ಆಗಿನ ಸರ್ಕಾರದ ಭಾಗವಾಗಿಯೂ ಒಡೆಯುವವರ ಪರ ನಿಲ್ಲಲಿಲ್ಲ. ಈ ಒಗ್ಗಟ್ಟು ನಿರಂತರವಾಗಿರಬೇಕು ಎಂದು ತಿಳಿಸಿದರು.

ADVERTISEMENT

‘ನಮ್ಮಲ್ಲಿ ನಾನಾ ವಿಭಾಗಗಳು ನಮ್ಮಲ್ಲಿ ಇರಬಹುದು. ಆದರೆ ಎಲ್ಲವೂ ವೀರಶೈವ– ಲಿಂಗಾಯತ ಸಮಾಜದ ಅಂಗಗಳು. ಆಯಾ ಸಮಾಜದ ಒಳಗೆ ಇರುವ ದುರ್ಬಲರಿಗೆ ಸಹಾಯ ಮಾಡುವ ಮೂಲಕ ವೀರಶೈವ– ಲಿಂಗಾಯತ ಸಮಾಜಕ್ಕೆ ಶಕ್ತಿ ತುಂಬಬೇಕು’ ಎಂದು ಸಲಹೆ ನೀಡಿದರು.

ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಬಣಜಿಗರು, ಸಾದರು, ಸಿಂಪಿಗಳು, ಗಾಣಿಗರು ಪಂಚಮಸಾಲಿಗಳು ಎಂದೆಲ್ಲ ಇರಲಿಲ್ಲ. ಅವರವರ ವೃತ್ತಿಯನ್ನು ನೋಡಿ ಬಸವಣ್ಣ ಗುರುತಿಸಿದರು. ಆದರೆ ಅದೇ ಮುಂದೆ ಜಗಳಕ್ಕೆ ಕಾರಣವಾಗಿರುವುದು ವಿಪರ್ಯಾಸ. ಬಸವಣ್ಣ ಹೇಳಿರುವುದು ಒಂದು ಆಗಿರುವುದು’ ಒಂದು ಎಂದು ವಿಷಾದಿಸಿದರು.

‘ಈಗ ನಮ್ಮೊಳಗಿನ ಪಂಗಡಗಳೇ ಜಗಳ ಮಾಡಿಕೊಳ್ಳುತ್ತಿರುವುದು, ಕೈ ಕೈ ಮಿಸಲಾಯಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದ ಖಂಡಿತ ವೀರಶೈವ– ಲಿಂಗಾಯತರು ಉದ್ದಾರ ಆಗಲ್ಲ. ನಾನು ಹೆಚ್ಚು, ನೀನು ಕಡಿಮೆ ಎಂಬುವುದನ್ನು ಕೈಬಿಟ್ಟು ಎಲ್ಲರೂ ಒಂದೇ ಎಂದು ಒಗ್ಗಟ್ಟಾದಾಗ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

ಒಡೆದಾಳುವ ರಾಜಕಾರಣವನ್ನು ನೋಡಿದ್ದೇವೆ. ವೀರಶೈವ– ಲಿಂಗಾಯತರು 1.5 ಕೋಟಿ ಜನ ಇದ್ದೇವೆ. ಆದರೆ ವೀರಶೈವ, ಲಿಂಗಾಯತ ಎಂದು ವಿಭಾಗಿಸಿ 70–80 ಲಕ್ಷಕ್ಕೆ ಇಳಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಹೊಂದಿಕೊಂಡು ಹೋಗುವ ಮನೋಭಾವ ಬೆಳೆಸಿಕೊಂಡರಷ್ಟೇ ಈ ರಾಜಕಾರಣಕ್ಕೆ ಉತ್ತರ ನೀಡಬಹುದು ಎಂದರು.

ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವೀರಶೈವ– ಲಿಂಗಾಯತರಿಂದ 80–90 ಶಾಸಕರು ಇರುತ್ತಿದ್ದರು. ಈಗ 50ಕ್ಕೆ ಇಳಿದಿದೆ. ಈ ಇಳಿಕೆ ದೇವರಾಜ ಅರಸು ಕಾಲದಲ್ಲಿ ಆರಂಭಗೊಂಡಿತು’ ಎಂದು ಮಾಹಿತಿ ನೀಡಿದರು.

ಹಿರಿಯರು ಎಲ್ಲವನ್ನೂ ಮಾಡಬೇಕಾಗಿಲ್ಲ. ಚಿಕ್ಕವರಿಗೂ ಅವಕಾಶ ನೀಡಬೇಕು. ನಿಮ್ಮ ಆಶೀರ್ವಾದದಲ್ಲಿ ಯುವಪೀಳಿಗೆ ಬೆಳೆಯಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಕುಲಸಚಿವ ಬಿ.ಪಿ. ವೀರಭದ್ರಪ್ಪ ಸಲಹೆ ನೀಡಿದರು.

ರಾಜ್ಯ ಅಧ್ಯಕ್ಷ ಡಾ.ಶಿವಬಸಪ್ಪ ಹೆಸರೂರು ಮಾತನಾಡಿ, ‘ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸುತ್ತೇವೆ. ಅಷ್ಟು ಸಾಲದು. ಹಿಂದುಳಿದ ಮಕ್ಕಳನ್ನೂ ಪ್ರೋತ್ಸಾಹಿಸಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದನ್ನು, ಸೌಹಾರ್ದಯುತವಾಗಿ ಬದುಕುವುದನ್ನು ಮಕ್ಕಳಿಗೆ ಹೇಳಿಕೊಡಬೇಕು’ ಎಂದು ತಿಳಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ಸಮಾಜದ ಮುಖಂಡರಾದ ದೇವರಮನಿ ಶಿವಕುಮಾರ್‌, ಎಂ.ವಿ. ಗೊಂಗಡಿ ಶೆಟ್ರು, ದೊಗ್ಗಳ್ಳಿ ವಿಜಯಪ್ರಕಾಶ್‌, ಹೊಸಕೆರೆ ರುದ್ರಣ್ಣ, ಡಿ.ವಿ. ಶರಣಪ್ಪ, ಗಂಗಾಧರ ಯರೇಶಿಮಿ, ಹಾಸಬಾವಿ ಕರಿಬಸಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸರಳಾ ಅವರೂ ಇದ್ದರು.

ಜಿಲ್ಲಾ ಘಟಕ ಅಧ್ಯಕ್ಷ ಎಚ್‌.ಆರ್. ಸಿದ್ದಲಿಂಗೇಶ್‌ ಸ್ವಾಗತಿಸಿದರು. ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಶೆಟ್ಟರ್‌ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು.

‘ನನ್ನಲ್ಲಿ ಬಣಜಿಗರ ಬುದ್ಧಿ ಇದೆ’

‘ಶಾಮನೂರು ಶಿವಶಂಕರಪ್ಪ ಮತ್ತು ಜಗದೀಶ ಶೆಟ್ಟರ್‌ ಬೀಗರು. ಹಾಗಾಗಿ ಅವರನ್ನು ಈ ಸಮಾವೇಶಕ್ಕೆ ಕರೆದಿದ್ದಾರೆ. ಆದರೆ ನಿಮ್ಮನ್ನು ಯಾಕೆ ಆಹ್ವಾನಿಸಿದ್ದಾರೆ ಎಂದು ನನ್ನಲ್ಲಿ ಕೆಲವರು ಕೇಳಿದರು. ನನ್ನಲ್ಲಿ ಬಣಜಿಗರ ಬುದ್ಧಿ ಇದೆ. ಅದಕ್ಕಾಗಿ ಕರೆದಿದ್ದಾರೆ ಎಂದು ಉತ್ತರಿಸಿದೆ. ಬಣಜಿಗರ ಸಹಕಾರದಿಂದಲೇ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಕಡೆ ಗೆಲುವು ಸಾಧಿಸಿದೆ. ಈ ಸಹಕಾರ ಹಾಗೆ ಮುಂದುವರಿಯಲಿ’ ಎಂದು ದಾವಣಗೆರೆ ಉತ್ತರ ಶಾಸಕ ಎಸ್‌.ಎ. ರವೀಂದ್ರನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.